ರಾಜಾ ಕಾಲುವೆ ಒತ್ತುವರಿ ದೂರು: ಡಿಸಿ ಪರಿಶೀಲನೆ
ನೆಲಮಂಗಲ: ತಾಲೂಕಿನ ದಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಸರ್ಕಾರಿ ಜಮೀನು ಮತ್ತು ರಾಜ ಕಾಲುವೆಗಳನ್ನು ಭೂಗಳ್ಳರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ಮತ್ತು ಖಾಸಗಿಯಾಗಿ ನೀರು ಸಂಸ್ಕರಣ ಘಟಕ ಸ್ಥಾಪಿಸಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಕೈಗಾರಿಕಾ ಪ್ರದೇಶದ ಎಡೇಹಳ್ಳಿ ಗ್ರಾಮದ ಸರ್ವೆ ನಂ. 49/5 ರಲ್ಲಿನ ಮಾರುತಿ ಸುಜುಕಿ ಕಂಪನಿಯವರು ಮತ್ತು ಗ್ರಾಮದ ವ್ಯಕ್ತಿಯೊಬ್ಬರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದು ನೀರು ಸಂಸ್ಕರಣೆ ಘಟಕ ಮತ್ತು ಮಾರುತಿ ಸುಜುಕಿ ಕಂಪನಿಯವರು ಕಾಂಪೌಂಡ್ ಕಟ್ಟಡವನ್ನು ಕಟ್ಟಿಕೊಂಡಿದ್ದಾರೆ. ಈ ಸ್ಥಳವನ್ನು ಸರ್ವೆ ಮಾಡಿ ಅಕ್ರಮವಾಗಿದ್ದಲ್ಲಿ ಹೊಡೆದು ಹಾಕುವಂತೆ ಆದೇಶಿಸಿದರು.ಈ ಪ್ರದೇಶ ತಿಪ್ಪಗೊಂಡನಹಳ್ಳಿ ಜಲಾಶಯದ ವ್ಯಾಪ್ತಿಗೆ ಸೇರಿದ್ದು ಇಲ್ಲಿಂದ ಮಳೆ ನೀರು ರಾಜಕಾಲುವೆ ಮೂಲಕ ಸರಾಗವಾಗಿ ಹರಿಯಲು ವ್ಯವಸ್ಥೆಗೊಳಿಸುತ್ತಿರುವುದಾಗಿ ತಿಳಿಸಿದರು. ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ ಸಾರ್ವಜನಿಕರು ಆ ಸ್ಥಳದ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತರಬೇಕು. ಇದರಿಂದ ಸರ್ಕಾರದ ಜಮೀನನ್ನು ರಕ್ಷಣೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು.ಪರಿಶೀಲನ ಸ್ಥಳಕ್ಕೆ ಎ.ಸಿ. ಮಂಜುನಾಥ್, ತಹಸೀಲ್ದಾರ್ ನರಸಿಂಹಮೂರ್ತಿ ಮತ್ತು ಹೋಬಳಿ ಮಟ್ಟದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು