ಸ್ನಾತಕೋತ್ತರ ಕೇಂದ್ರಕ್ಕೆ ಜಿಲ್ಲಾಡಳಿತ ಸ್ಥಳಾವಕಾಶ
ರಾಮನಗರ: ಸ್ನಾತಕೋತ್ತರ ಕೇಂದ್ರಕ್ಕೆ ರಾಮನಗರ ಜಿಲ್ಲಾಡಳಿತ ಸ್ಥಳಾವಕಾಶ ಕಲ್ಪಿಸಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ತರಗತಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ವಿವಿ ಕುಲಪತಿ ಡಾ.ಬಿ.ತಿಮ್ಮೇಗೌಡ ಹೇಳಿದರು.
ವಂದಾರಗುಪ್ಪೆ ಬಳಿ ಇರುವ ಟಿಪ್ಪು ರೇಷ್ಮೆ ಕೇಂದ್ರದಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭಿಸುವ ನಿಟ್ಟಿನಲ್ಲಿ ಸ್ಥಳ ಪರಿಶೀಲಿಸಿ, ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಜೊತೆ ಸಮಾಲೋಚನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಾಪಿಸಲು ಉದ್ದೇಶಿಸಿರುವ ಸ್ನಾತಕೋತ್ತರ ಕೇಂದ್ರಕ್ಕೆ ಸ್ಥಳಾವಕಾಶ ಒದಗಿಸುವ ಮೂಲಕ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆ.4 ರಿಂದ ಟಿಪ್ಪು ರೇಷ್ಮೆ ಕೇಂದ್ರದಲ್ಲಿ ತರಗತಿ ಪ್ರಾರಂಭಗೊಳ್ಳಲಿದೆ ಎಂದರು.
ಸ್ನಾತಕೋತ್ತರ ಕೇಂದ್ರದಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವಾಣಿಜ್ಯ ಶಾಸ್ತ್ರ ಹಾಗೂ ಎಂ.ಎಸ್.ಡಬ್ಲ್ಯು. ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದು, ಬೇಡಿಕೆಯನ್ನು ಆಧರಿಸಿ ಇತರೆ ಕೋರ್ಸ್ಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಮ್ಮೇಗೌಡ ತಿಳಿಸಿದರು.
ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ವಿಶ್ವವಿದ್ಯಾಲಯವು ರು. 1 ಕೋಟಿ ಮೀಸಲಿಟ್ಟಿದೆ. ಸ್ನಾತಕೋತ್ತರ ಕೇಂದ್ರಕ್ಕೆ ಪೂರಕವಾಗುವಂತೆ ರೇಷ್ಮೆ ಕೇಂದ್ರದ ಕಟ್ಟಡಗಳನ್ನು ದುರಸ್ತಿಪಡಿಸಿ, ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಎರಡು ವರ್ಷದ ಮಟ್ಟಿಗಷ್ಟೇ ರೇಷ್ಮೆ ಕೇಂದ್ರದಲ್ಲಿ ಸ್ನಾತಕೋತ್ತರ ಕೇಂದ್ರ ನಡೆಸಲಾಗುವುದು. ಅಷ್ಟರಲ್ಲಿ ಶಾಶ್ವತ ವ್ಯವಸ್ಥೆಗಾಗಿ 50 ಎಕರೆ ಜಮೀನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದರು.