ಗ್ರಾಪಂ ಪೀಠೋಪಕರಣ ಜಪ್ತಿ
ಚನ್ನಪಟ್ಟಣ: ವಿದ್ಯುತ್ ಪರಿಕರಗಳನ್ನು ವಿತರಣೆ ಮಾಡಿದ ಗುತ್ತಿಗೆದಾರರಿಗೆ ಹಣಪಾವತಿ ಮಾಡದ ತಾಲೂಕಿನ ಜೆ.ಬ್ಯಾಡರಹಳ್ಳಿ ಗ್ರಾ.ಪಂ ಕಚೇರಿಯ ಪೀಠೋಪಕರಣಗಳನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಪ್ತಿ ಮಾಡಿರುವ ಘಟನೆ ಶನಿವಾರ ನಡೆದಿದೆ.ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಮತ್ತು ಕಚೇರಿಗೆ ಅಗತ್ಯವಿರುವ ವಿದ್ಯುತ್ ಉಪಕರಣಗಳನ್ನು ಪಟ್ಟಣದ ಕೃಷ್ಣ ಎಲೆಕ್ಟ್ರಿಕಲ್ಸ್ ವತಿಯಿಂದ ಖರೀದಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಹಣವನ್ನು ಪಾವತಿ ಮಾಡದ ಗ್ರಾ.ಪಂ ವಿರುದ್ಧ ಕ್ರಿಷ್ಣಾ ಎಲೆಕ್ಟ್ರಿಕಲ್ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.ಅರ್ಜಿ ವಿಚಾರಣೆ ಕೈಗೊಂಡ ನ್ಯಾಯಾಲಯಕ್ಕೆ ಪ್ರತಿವಾದಿಯಾದ ಗ್ರಾ.ಪಂ ಕಚೇರಿಯ ಪರವಾಗಿ ಯಾರೂ ವಾದ ಮಂಡಿಸದ ಹಿನ್ನೆಲೆಯಲ್ಲಿ ನ್ಯಾಯಾಲಯ ಗ್ರಾ.ಪಂ ಕಚೇರಿಯ ಜಪ್ತಿಗೆ ನ್ಯಾಯಾಲಯ ಆದೇಶ ಹೊರಡಿಸಿದೆ. ಅಧ್ಯಕ್ಷರು ಮತ್ತು ಕಾರ್ಯದರ್ಶಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಕೋರಿ ನ್ಯಾಯಾಲಕ್ಕೆ ಮನವಿ ಮಾಡಲಿರುವುದಾಗಿ ಅರ್ಜಿದಾರರ ಪರ ವಕೀಲ ತಿಮ್ಮೇಗೌಡ ತಿಳಿಸಿದ್ದಾರೆ. ನರೇಗಾ ಅವ್ಯವಹಾರ, ವಸತಿಯೋಜನೆಯ ಅಸಮರ್ಪಕ ವಿತರಣೆ, ಶೌಚಾಲಯ ವಿತರಣೆಯಲ್ಲಿ ಲೋಪ ಹೀಗೆ ಒಂದಿಲ್ಲೊಂದು ವಿವಾದಗಳಿಗೆ ಸಿಲುಕಿ ಸುದ್ದಿಯಲ್ಲಿರುವ ಜೆ.ಬ್ಯಾಡರಹಳ್ಳಿ ಗ್ರಾಪಂ ಇದೀಗ ಸಕಾಲದಲ್ಲಿ ಬಿಲ್ ಪಾವತಿ ಮಾಡದೆ ಹರಾಜಿಗೆ ಒಳಗಾಗುವ ಮೂಲಕ ಹೊಸ ವಿವಾದಕ್ಕೆ ಒಳಗಾಗಿದೆ.
ದೇವರು ಇರುವಾಗ ಸರ್ಕಾರ ಏಕೆ?
ಕ.ಪ್ರ.ವಾರ್ತೆ ರಾಮನಗರ ಜು.5
ಎಲ್ಲ ಸಮಸ್ಯೆಗೂ ದೇವರೇ ಪರಿಹಾರ ನೀಡುವುದಾದರೆ ರಾಜ್ಯದಲ್ಲಿ ಒಂದು ಸರ್ಕಾರ ಮತ್ತು ಇಂಧನ ಖಾತೆಗೊಬ್ಬ ಸಚಿವರ ಅಗತ್ಯವಿದೆಯೇ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ರಾಜಕೀಯ ಕಡುವೈರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯವನ್ನು ವಿದ್ಯುತ್ ಸಮಸ್ಯೆಯಿಂದ ದೇವರೇ ಕಾಪಾಡಬೇಕೆ ಎನ್ನುವ ಇಂಧನ ಸಚಿವ ಶಿವಕುಮಾರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಸದನದಲ್ಲಿ ಸೋಮವಾರ ವಿದ್ಯುತ್ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಸುವುದಾಗಿ ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ತ್ರೀಫೇಸ್ ವಿದ್ಯುತ್ 3-4 ತಾಸು ಮಾತ್ರವೇ ಪೂರೈಕೆಯಾಗುತ್ತಿದೆ. ಈ ಪೈಕಿ ರಾತ್ರಿ ವೇಳೆಯೇ ಹೆಚ್ಚು ನೀಡಲಾಗುತ್ತಿದೆ. ಈ ಪರಿಣಾಮ ವನ್ಯ ಜೀವಿಗಳು, ವಿಷ ಜಂತುಗಳಿಂದ ರೈತರು ಸಾಕಷ್ಟು ತೊಂದರೆಗೀಡಾಗಿದ್ದಾರೆ ಎಂದು ಹೇಳಿದರು.
ದುರ್ಬಲವಾದ ಆಡಳಿತ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಮನಗರವೂ ಸೇರಿದಂತೆ ರಾಜ್ಯದೆಲ್ಲೆಡೆ ಆಡಳಿತ ಯಂತ್ರ ದುರ್ಬಲವಾಗಿದೆ. ಕಾಂಗ್ರೆಸ್ ಶಾಸಕರು, ಸಚಿವರು ಮಾತ್ರವಲ್ಲದೆ ಪುಢಾರಿಗಳೂ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಜನತೆಗೆ ನ್ಯಾಯ ಸಮ್ಮತವಾದ ಆಡಳಿತ ಸಿಗದಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರಲು ಕಾಂಗ್ರೆಸ್ ಪಕ್ಷದ ಮಿತಿ ಮೀರಿದ ಹಸ್ತಕ್ಷೇಪವೇ ಕಾರಣ ಎಂದು ಟೀಕಿಸಿದರು. ಡಿಕೆಶಿ ಷಡ್ಯಂತ್ರ: ರಾಮನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸುಸಜ್ಜಿತ ಜಿಲ್ಲಾಸ್ಪತ್ರೆಗೆ ರು.30 ಕೋಟಿ ಬಿಡುಗಡೆಗೊಂಡಿದ್ದು, ಸ್ಥಳ ನಿಗದಿಯೂ ಆಗಿದೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸ್ಥಳ ಬದಲಾವಣೆಗೆ ಷಡ್ಯಂತ್ರ ನಡೆಸಿರುವ ಪರಿಣಾಮ ಯೋಜನೆ ನೆನಗುದಿಗೆ ಬೀಳುವ ಆತಂಕವಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಕಾರ್ಖಾನೆಗೆ ಕಡಿತಗೊಳಿಸಿ: ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸೇನಾಪತಿ ವೈಟ್ಲೆ ಕಾರ್ಖಾನೆಗೆ ಸುಮಾರು 1 ಎಂ.ಎಲ್.ಡಿ. ನೀರು ಸರಬರಾಜಾಗುತ್ತಿರುವ ಮಾಹಿತಿ ಇದೆ. ಕಾರ್ಖಾನೆ ಜತೆಗಿನ ಒಪ್ಪಂದ ಅಂತ್ಯವಾಗಿದ್ದು, ನವೀಕರಿಸಲು ಮುಂದಾಗದೆ ತಕ್ಷಣವೇ ನೀರಿನ ಸಂಪರ್ಕ ಕಡಿತಗೊಳಿಸಿ ಎಂದು ಕುಮಾರಸ್ವಾಮಿ ತಾಕೀತು ಮಾಡಿದರು. ಮೂಗು ತೂರಿಸುವುದಿಲ್ಲ: ಪೊಲೀಸ್ ಇಲಾಖೆ ಕಾರ್ಯನಿರ್ವಹಣೆಯಲ್ಲಿ ನಾನು ಮೂಗು ತೂರಿಸುವುದಿಲ್ಲ. ಹಾಗೆಂದು ಬೇರೆಯವರ ಹಸ್ತಕ್ಷೇಪವನ್ನೂ ಸಹಿಸೆನು. ಪೊಲೀಸರು ರಾಜಕೀಯ ಒತ್ತಡಗಳಿಗೆ ಒಳಗಾಗದೆ ಕಾನೂನು ಪ್ರಕಾರ ಕಾರ್ಯ ನಿರ್ವಹಿಸಬೇಕು. ಸಣ್ಣಪುಟ್ಟ ವಿಷಯಗಳಿಗೆಲ್ಲಾ ಪ್ರಕರಣ ದಾಖಲಿಸಿ ಜನರನ್ನು ನ್ಯಾಯಾಲಯಗಳಿಗೆ ಅಲೆಯುವಂತೆ ಮಾಡುವುದು ಇನ್ನಾದರೂ ನಿಲ್ಲಲಿ ಎಂದು ಅವರು ನಿರ್ದೇಶನ ನೀಡಿದರು.
ಜನತೆ ಬಯಸಿದ್ರೆ ರಾಜಿನಾಮೆ
ರಾಮನಗರ ಕ್ಷೇತ್ರದ ಜನತೆಗೆ ನಾನು ಬೇಡವೆಂದಾದರೆ ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಲು ಸಿದ್ಧನಿದ್ದೇನೆ. ಆಗ ಅವರು ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂದವರನ್ನು ಆರಿಸಿಕೊಳ್ಳಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ನಾನು ರಾಜಕಾರಣಕ್ಕೆ ಬಂದಿರೋದು ಜನ ಸೇವೆಗಾಗಿಯೇ ಹೊರತು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳುವುದಕ್ಕೋ ಅಥವಾ ಅರಣ್ಯ ಸಂಪತ್ತನ್ನು ಲೂಟಿ ಮಾಡುವುದಕ್ಕಲ್ಲ ಎಂದು ಪರೋಕ್ಷವಾಗಿ ಡಿಕೆಎಸ್ ಸಹೋದರರನ್ನು ಟೀಕಿಸಿದರು.