ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಮುಂದೂಡಲು ಮನವಿ
ಮಾಗಡಿ: ತಾಲೂಕಿನ ಸುಗ್ಗನಹಳ್ಳಿಯ ಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿ ದೇಗುಲದ ಆವರದಲ್ಲಿರುವ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಒಂದು ವರ್ಷಗಳ ಕಾಲ ಮುಂದೂಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು. ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ ಅಂಗಡಿ ಮಾಲೀಕರ ಮತ್ತು ಪಾರುಪತ್ತೆದಾರರ ನಡುವೆ ಉಂಟಾಗಿದ್ದ ಗೊಂದಲದ ಸಂಬಂಧ ಏರ್ಪಡಿಸಿದ್ದ ಮಹತ್ವದ ಸಭೆಯಲ್ಲಿ ಮಾತನಾಡಿ ಅಂಗಡಿ ಮಳಿಗೆಗಳ ಬಾಕಿ ಬಾಡಿಗೆಯನ್ನು ಕೂಡಲೆ ಪಾವತಿ ಮಾಡುವಂತೆ ಇದೇ ವೇಳೆ ಶಾಸಕರು ಅಂಗಡಿ ಮಾಲೀಕರಿಗೆ ಆದೇಶಿಸಿದರು. ಪಾರುಪತ್ತೆಗಾರರು ದೇವಾಲಯದ ಆವರಣದಲ್ಲಿರುವ ಅಂಗಡಿ ಮಳಿಗೆಗಳ ಬಾಕಿ ಬಾಡಿಗೆಯನ್ನು ಇಲ್ಲಿಯವರೆವಿಗೂ ಪಾವತಿ ಮಾಡಿಲ್ಲ. ಅಂಗಡಿ ಮಳಿಗೆಗಳ ಬಹಿರಂಗ ಹರಾಜಿಗೆ ಈಗಾಗಲೇ ಡಿಸಿ ಆದೇಶ ನೀಡಿದ್ದಾರೆ. ಕೂಡಲೆ ಅಂಗಡಿ ತೆರವುಗೊಳಿಸಲು ಗಡುವು ನೀಡಿದ್ದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಶಾಸಕರಲ್ಲಿ ಮನವಿ ಮಾಡಿಕೊಂಡು ಚರ್ಚಿಸಿದರು. ಶಾಸಕರ ಆದೇಶದಂತೆ ಅಂಗಡಿ ಬಾಕಿ ಬಾಡಿಗೆಯನ್ನು ಕೂಡಲೆ ಪಾವತಿ ಮಾಡುವುದಾಗಿ ಅಂಗಡಿ ಮಾಲೀಕರು ಒಪ್ಪಿಕೊಂಡರು. ಅಂಗಡಿ ಬಾಡಿಗೆಯನ್ನು ಸರಿಯಾಗಿ ಪಾವತಿಸದಿದ್ದರೆ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವುದಾಗಿ ಶಾಸಕರು ಮಾಲೀಕರಿಗೆ ಎಚ್ಚರಿಸಿದರು. ದೇವಾಲಯದ ಬಳಿ ಗುಡಿಸಲು, ಪೆಟ್ಟಿಗೆ ಅಂಗಡಿ ಬೇಡ, ದೇವಾಲಯದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ದೇವಾಲಯದ ಬ್ಯಾಂಕ್ ಖಾತೆಯಲ್ಲಿ 48 ಲಕ್ಷ ರು. ಹಣ ಸಂಗ್ರಹವಿದ್ದು, ಈ ಹಣದಲ್ಲಿ ದೇವಾಲಯದ ಆವರಣದ ಬಳಿ ಸುಮಾರು 20 ನೂತನ ಅಂಗಡಿ ಮಳಿಗೆಗಳನ್ನು ಕಟ್ಟಿಸಲು ನಿರ್ಧರಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ನಡೆಸಲು ಅಗತ್ಯ ಕ್ರಮ ವಹಿಸುತ್ತೇನೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.