ಕಪ್ಪುಪಟ್ಟಿಯಲ್ಲಿದ್ದ ಕಾಲೇಜಿಗೆ ಮತ್ತೆ ಸಂಯೋಜನೆ!
ಶಶಿರೇಖಾ ಜಿ.ಕೆ.
ಬೆಂಗಳೂರು: ಕಪ್ಪು ಪಟ್ಟಿಗೆ ಸೇರಿದ್ದ ಬಿಇಡಿ ಕಾಲೇಜು ಪವಾಡ ಸದೃಶವಾಗಿ ಪ್ರಸಕ್ತ ಸಾಲಿಗೆ ಸಂಯೋಜನೆ ಪಡೆದಿದೆ!
ಬೆಂಗಳೂರು ವಿಶ್ವವಿದ್ಯಾಲಯದ ಕಾರ್ಯಪಡೆ 2012-13ನೇ ಸಾಲಿನಲ್ಲಿ ಕಪ್ಪುಪಟ್ಟಿಗೆ ಸೇರಿಸಿದ್ದ ಅಮಿತಾ ಬಿಇಡಿ ಕಾಲೇಜಿಗೆ 2014-15ನೇ ಸಾಲಿಗೆ ಮತ್ತೆ ಸಂಯೋಜನೆ ನೀಡಿರುವುದು ಅನುಮಾನಗಳಿಗೆ ಎಡೆ ಮಾಡಿದೆ.
ಕಾಲೇಜು ಅವ್ಯವಹಾರದಲ್ಲಿ ತೊಡಗಿರುವುದು ಕಂಡುಬಂದರೆ ವಿವಿ ಅದನ್ನು ಕಪ್ಪುಪಟ್ಟಿಗೆ ಸೇರಿಸುತ್ತದೆ. ನಿಯಮದ ಪ್ರಕಾರ ಅಂತಹ ಕಾಲೇಜಿಗೆ ಶಾಶ್ವತವಾಗಿ ಸಂಯೋಜನೆ ಹಿಂಪಡೆಯಬೇಕು. ಆದರೆ, ವಿವಿ ಒಂದೂವರೆ ವರ್ಷದ ನಂತರ ಕಪ್ಪು ಪಟ್ಟಿಗೆ ಸೇರಿದ್ದ ಕಾಲೇಜಿಗೆ ಮತ್ತೆ ಕೋರ್ಸ್ ಆರಂಭಿಸಲು ಹಸಿರು ನಿಶಾನೆ ತೋರಿಸಿದೆ.
ಕರಣ್ಕುಮಾರ್ ನೇತೃತ್ವದ ಕಾರ್ಯಪಡೆ ವರದಿಯಲ್ಲಿ 9 ಕಾಲೇಜುಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಈ ಕಾಲೇಜುಗಳು ಯಾವುದೋ ಕಟ್ಟಡ ತೋರಿಸಿ ವಂಚಿಸಿದ್ದವು. ಕಡತಗಳು ಸಮರ್ಪಕವಾಗಿರಲಿಲ್ಲ. ಪರೀಕ್ಷೆ ಸಂದರ್ಭದಲ್ಲಿ ಕಾಲೇಜಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳೇ ಇರಲಿಲ್ಲ. ಆದರೆ, ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿದ್ದರೆಂದು ವಿವಿಗೆ ಅಂಕಪಟ್ಟಿ ಕಳಿಸಲಾಗಿತ್ತು. ಈ ಕಾಲೇಜುಗಳಲ್ಲಿ ಸಂಪೂರ್ಣ ಅವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎನ್ನುತ್ತಾರೆ ಕಾರ್ಯಪಡೆ ಅಧ್ಯಕ್ಷ ಕರಣ್ ಕುಮಾರ್.
ಸಂಯೋಜನೆ ವಿಶ್ವಾಸಾರ್ಹವೇ?: ಇನ್ನು ಕೆಲವು ಕಾಲೇಜುಗಳಲ್ಲಿ ನಾಮಫಲಕವಿದ್ದರೂ ಕಾರ್ಯ ನಿರ್ವಹಿಸುತ್ತಿರಲಿಲ್ಲ. 2014-15ನೇ ಸಾಲಿನಲ್ಲಿ ಮುಚ್ಚಲು ಶಿಫಾರಸು ಮಾಡಿದ್ದ ಮತ್ತು ಕಪ್ಪು ಪಟ್ಟಿಯಲ್ಲಿರುವ ಕಾಲೇಜುಗಳು ಸಂಯೋಜನೆಗೊಂಡಿರುವುದು ಅಚ್ಚರಿಯಾದರೂ ಸತ್ಯ. ವಿವಿ ಸಂಯೋಜನೆಗೆ ಒಪ್ಪಿರುವ ಬಿಇಡಿ ಕಾಲೇಜುಗಳ ವರದಿಯನ್ನು 2012-13ನೇ ಸಾಲಿನ ವಿವಿ ಕಾರ್ಯಪಡೆ ನೀಡಿದ್ದ ವರದಿಯೊಂದಿಗೆ ತುಲನೆ ಮಾಡಿದರೆ ವರದಿಯ ವಿಶ್ವಾಸಾರ್ಹತೆ ಬಗ್ಗೆಯೇ ಪ್ರಶ್ನೆ ಮೂಡುತ್ತದೆ.
ಪ್ರಸಕ್ತ ಸಾಲಿನಲ್ಲಿ 61 ಕಾಲೇಜುಗಳಿಗೆ ವಿವಿ ಸಂಯೋಜನೆ ನೀಡಿದೆ. ಅದರಲ್ಲಿ 54ಕ್ಕೆ ಸಂಯೋಜನೆ ನವೀಕರಿಸಿದ್ದರೆ, 7 ಕಾಲೇಜುಗಳಿಗೆ ಹೊಸ ಸಂಯೋಜನೆ ನೀಡಲಾಗಿದೆ. ಸಂಯೋಜನೆ ತಿರಸ್ಕರಿಸಿದ್ದ ಸವಿತಾ ಮಹರ್ಷಿ, ಗೌತಮ ಕಾಲೇಜು(ಹೊಸ ಸಂಯೋಜನೆ)ಗಳಿಗೆ ಸಮಿತಿ ರಚಿಸಿ ವರದಿ ಆಧಾರದ ಮೇಲೆ ಸಂಯೋಜನೆ ನೀಡುವಂತೆ ಸಿಂಡಿಕೇಟ್ ಸಭೆ ನಿರ್ಧರಿಸಿದೆ. ಆದರೆ ಸವಿತಾ ಮಹರ್ಷಿ (ಸಂಜಯ ನಗರ) ಕಾರ್ಯನಿರ್ವಹಿಸದ ಕಾಲೇಜು ಎಂದು ಕಾರ್ಯಪಡೆ ವರದಿ ಹೇಳುತ್ತದೆ.
ಈ ಬಾರಿ ಸಂಯೋಜನೆಗೊಂಡಿರುವ ಕಾಲೇಜುಗಳ ಕುರಿತು ಕರಣ್ಕುಮಾರ್ ಕಾರ್ಯಪಡೆ ವರದಿ ಹೀಗಿತ್ತು. ಮುಚ್ಚುವಂತೆ ಶಿಫಾರಸು ಮಾಡಿರುವ ಕಾಲೇಜುಗಳು 14, ಕಾರ್ಯನಿರ್ವಹಿಸದ ಕಾಲೇಜುಗಳು 10, ವ್ಯವಸ್ಥೆ ಸುಧಾರಿಸಲು 1 ವರ್ಷ ಸಮಯ ನಿಗದಿಪಡಿಸಿದ ಕಾಲೇಜುಗಳು 14, ಕಪ್ಪುಪಟ್ಟಿಯಲ್ಲಿರುವ ಕಾಲೇಜು (ಅಮಿತಾ ಕಾಲೇಜು)1, ಸಂಯೋಜನೆ ನವೀಕರಿಸಿರುವ ಕಾಲೇಜುಗಳು 17. ನಿರ್ವಾಣಸ್ವಾಮಿ ಕಾಲೇಜಿಗೆ ಎನ್ಸಿಟಿಇ ಮಾನ್ಯತೆ ಇಲ್ಲದಿದ್ದರೂ ಸಂಯೋಜನೆ ನವೀಕರಿಸಲಾಗಿದೆ. ಶ್ರೀ ಬಾಪೂಜಿ ಕಾಲೇಜು ಮಾಲೂರು, ಮೊದಲೇ ಅಸ್ತಿತ್ವದಲ್ಲಿದ್ದ ಕಾಲೇಜಿಗೆ ಹೊಸ ಸಂಯೋಜನೆ ನೀಡಲಾಗಿದೆ.
ಸುತ್ತಾರಿಯಾ ಕಾಲೇಜು, ನೆಲಮಂಗಲ: ಈ ಕಾಲೇಜಿಲ್ಲಿ ಶಿಕ್ಷಣ ಮತ್ತು ಮೂಲ ವಿಜ್ಞಾನ ಪ್ರಯೋಗಾಲಯ ಮತ್ತು ಮನೋವಿಜ್ಞಾನ ಪ್ರಯೋಗಾಲಯ ಬಳಕೆಯಲ್ಲಿಲ್ಲ. 100 ಮಂದಿ ವಿದ್ಯಾರ್ಥಿಗಳಿಗೆ ಇಡೀ ದಿನ ಒಬ್ಬರೇ ಉಪನ್ಯಾಸಕರು ಪಾಠ ಮಾಡುತ್ತಾರೆ. ಕಡತಗಳ ನಿರ್ವಹಣೆಗೆ ಸಿಬ್ಬಂದಿಯಿಲ್ಲ, ಲೈಬ್ರರಿಯಲ್ಲಿ ಕೋರ್ಸಿಗೆ ಸಂಬಂಧಿಸಿದ ಪುಸ್ತಕವಿಲ್ಲ. ಕಂಪ್ಯೂಟರ್, ಕ್ಯಾಂಟೀನ್ ಇಲ್ಲ. ಎನ್ಸಿಟಿಇ ನಿಯಮಾವಳಿ ಪ್ರಕಾರ ಕೊಠಡಿ ವಿಸ್ತೀರ್ಣ ಇಂತಿಷ್ಟು ಇರಬೇಕು. ಶೀಟ್ ಹೊದಿಸಿರುವ ಕೊಠಡಿಗಳಿಗೆ (ನಿಯಮದ ಪ್ರಕಾರ ಆರ್ಸಿಸಿ ಚಾವಣಿ ಇರಬೇಕು) ಎನ್ಸಿಟಿಇ ಮಾನ್ಯತೆ ಹೇಗೆ ದೊರೆಯಿತು ಎಂಬ ಪ್ರಶ್ನೆ ಉಂಟಾಗುತ್ತದೆ.
ಮೂಲಸೌಕರ್ಯ ಮರೀಚಿಕೆ: ಬಹುತೇಕ ಬಿಇಡಿ ಕಾಲೇಜುಗಳಲ್ಲಿ ಶಿಕ್ಷಕರಿರುವುದಿಲ್ಲ. ಶೈಕ್ಷಣಿಕ ಕಾರ್ಯಚಟುವಟಿಕೆಗಳಿಲ್ಲದೆ ನಾಮಕೇವಾಸ್ತೆ ಕಾಲೇಜಿದೆ. ಪರಿಶೀಲನೆಗೆ ಹೋದಾಗ ವಿದ್ಯಾರ್ಥಿ, ಬೆಂಚು ಎಲ್ಲವೂ ಬಾಡಿಗೆ. ಅಂತಿಮ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿಸಿ ಪ್ರಮಾಣಪತ್ರ ಕೊಡಿಸುವುದೊಂದೇ ಈ ಕಾಲೇಜುಗಳ ಬದ್ಧತೆ. ಬಹುತೇಕ ಕಾಲೇಜುಗಳು ವಿವಿ ಮತ್ತು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ನಿಯಮಾವಳಿಗಳನ್ನು ಗಾಳಿಗೆ ತೂರಿವೆ. ಈ ರೀತಿ ಅಕ್ರಮ ಪದ್ಧತಿಯಿಂದ ಶಿಕ್ಷಕರಾಗುವವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾರೆ ಎಂದು ನಿರೀಕ್ಷಿಸಲಾಗುತ್ತದೆಯೆ?
ವಸ್ತುಸ್ಥಿತಿ ಬಹಿರಂಗಗೊಳಿಸುವೆ...
ಪ್ರಸಕ್ತ ಸಾಲಿನಲ್ಲಿ ಮಾನ್ಯತೆ ನೀಡಿರುವ ಅನೇಕ ಕಾಲೇಜುಗಳು ಈಗಲೂ ನಡೆಯುತ್ತಿಲ್ಲ. ಕಾರ್ಯಪಡೆ ವರದಿಯನ್ನು ವಿದ್ಯಾವಿಷಯಕ ಪರಿಷತ್ತು, ಸಿಂಡಿಕೇಟ್ ಮತ್ತು ಸರ್ಕಾರ ಒಪ್ಪಿವೆ. ಅದರೂ ಮತ್ತೆ ಸೌಕರ್ಯವಿಲ್ಲದ ಕಾಲೇಜುಗಳಿಗೆ ಸಂಯೋಜನೆ ನೀಡಿದ್ದೇಕೆ? ಈಗಲೂ ಕುಲಪತಿಗಳನ್ನು ಆಮಂತ್ರಿಸುತ್ತೇನೆ, ನನ್ನೊಂದಿಗೆ ಬಂದರೆ ವಸ್ತುಸ್ಥಿತಿಯನ್ನು ಬಹಿರಂಗಗೊಳಿಸುತ್ತೇನೆ
ಟಿ ಕರಣ್ ಕುಮಾರ್, ಬೆಂಗಳೂರು ವಿವಿ
ವಿದ್ಯಾವಿಷಯಕ ಪರಿಷತ್ ಮಾಜಿ ಸದಸ್ಯ