ಬಿಲ್ ಕಲೆಕ್ಟರ್ ಹುದ್ದೆ ಕಾಯಂಗೆ ಒತ್ತಡ ತರುವೆ: ಶಾಸಕ
ಮಾಗಡಿ: ಪಂಚಾಯ್ತಿಗಳ ಬಿಲ್ ಕಲೆಕ್ಟರ್ ಮತ್ತು ವಾಟರ್ ಮ್ಯಾನ್ಗಳನ್ನು ಕಾಯಂಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ಪಂಚಾಯ್ತಿ ಬಿಲ್ ಕಲೆಕ್ಟರ್ ಮತ್ತು ವಾಟರ್ ಮ್ಯಾನ್ಗಳಿಗೆ ಭರವಸೆ ನೀಡಿದರು.ಅವರು ತಾಲೂಕಿನ ಕಲ್ಯಾ ಪಂಚಾಯ್ತಿಯಲ್ಲಿ ಪಲಾನುಭವಿಗಳಿಗೆ ಸೌಲತ್ತು ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರು ಕರಕುಶಲ ತರಬೇತಿ ಪಡೆದು ಅಗತ್ಯ ಸೌಲತ್ತುಗಳನ್ನು ಪಡೆಯುವ ಮೂಲಕ ತಮ್ಮ ಆರ್ಥಿಕ ಸ್ವಾವಲಂಬನೆಗೆ ಮುಂದಾಗಬೇಕು. ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ, ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸಲಹೆ ನೀಡಿದರು. ತಾಪಂ ಅಧ್ಯಕ್ಷೆ ಅರುಂಧತಿ ಚಿಕ್ಕಣ್ಣ ಮಾತನಾಡಿ ಕಲ್ಯಾ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದರು.ಕಲ್ಯಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ ಶಾಂತಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಶಾಸಕರು ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿದರು.ಜಿ.ಪಂ. ಅಧ್ಯಕ್ಷ ಎಂ.ಕೆ.ಧನಂಜಯ, ಸದಸ್ಯ ವಿಜಯಕುಮಾರ್, ತಾಪಂ. ಸದಸ್ಯರಾದ ಪೊಲೀಸ್ ರಾಮಣ್ಣ ಮತ್ತಿತರರು ಇದ್ದರು.