ವಿದ್ಯುತ್ ಸ್ಪರ್ಶ: ಪೀಣ್ಯ ನಾಗಸಂದ್ರದ ವೃದ್ಧ ಸಾವು
ಬೆಂಗಳೂರು: ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ವೈರ್, ತೋಟವೊಂದರ ಫೆನ್ಸಿಂಗ್ ವೈರ್ ಸಂಪರ್ಕಕ್ಕೆ ಸಿಕ್ಕು ವೃದ್ಧ ಮೃತಪಟ್ಟಿರುವ ಘಟನೆ ಪೀಣ್ಯದ ನಾಗಸಂದ್ರದಲ್ಲಿ ನಡೆದಿದೆ. ನಾಗಸಂದ್ರ ನಿವಾಸಿ ಮಲ್ಲಯ್ಯ ಪುಟ್ಟಪ್ಪ(63) ಮೃತ ದುರ್ದೈವಿ.ಭಾನುವಾರ ಬೆಳಗ್ಗೆ ಮಲ್ಲಯ್ಯ ಅವರು ತಮ್ಮ ತೋಟಕ್ಕೆ ನೀರು ಬಿಡುತ್ತಿದ್ದರು. ಈ ವೇಳೆ ತೋಟದ ಫೆನ್ಸಿಂಗ್ ತಂತಿಯನ್ನು ಆಕಸ್ಮಿಕವಾಗಿ ಮುಟ್ಟಿದ್ದಾರೆ. ಆಗ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ವಿದ್ಯುತ್ ಕಂಬದಿಂದ ಅಕ್ರಮವಾಗಿ ಎಳೆದುಕೊಂಡಿದ್ದ ವೈರ್ವೊಂದು ಕಂಬಕ್ಕೆ ಬೆಂಬಲವಾಗಿರುವ ತಂತಿ ಸಂಪರ್ಕಕ್ಕೆ ಬಂದಿತ್ತು. ಕಂಬಕ್ಕೆ ಬೆಂಬಲವಾಗಿದ್ದ ವೈರ್ ಮಲ್ಲಯ್ಯ ಅವರ ಫೆನ್ಸಿಂಗ್ ತಂತಿ ಸಂಪರ್ಕಕ್ಕೆ ಬಂದಿದೆ. ಇದನ್ನು ಗಮನಿಸದ ಮಲ್ಲಯ್ಯ ಆಕಸ್ಮಿಕವಾಗಿ ಫೆನ್ಸಿಂಗ್ ಮುಟ್ಟಿದ್ದೆ ದುರಂತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಕ್ರಮ ವಿದ್ಯುತ್ ಸಂಪರ್ಕದ ಬಗ್ಗೆ ಬೆಸ್ಕಾಂ ಅಧಿಕಾರಿಗಳು ನಿಗಾ ವಹಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯವಹಿಸಿದ್ದರಿಂದ ಬೆಸ್ಕಾಂ ಜೂನಿಯರ್ ಎಂಜಿನಿಯರ್ ವಿರುದ್ಧ ನಿರ್ಲಕ್ಷ್ಯತನ ಪ್ರಕರಣ ದಾಖಲಿಸಲಾಗಿದೆ.