ಸವಾರನ ಮೇಲೆ ಹಲ್ಲೆ ಆರೋಪ ಎಎಸ್ಸೈ, ಕಾನ್ಸ್ಟೇಬಲ್ ಸಸ್ಪೆಂಡ್
ಕೃಷ್ಣರಾಜಪುರ: ಹೆಲ್ಮೆಟ್ ಧರಿಸದೆ ವಾಹನದಲ್ಲಿ ಸಂಚರಿಸುತ್ತಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಒಬ್ಬ ಎಎಸ್ಸೈ ಮತ್ತು ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ. ಕೃಷ್ಣರಾಜಪುರ ಸಂಚಾರಿ ಠಾಣೆಯಲ್ಲಿ ಈ ಘಟನೆ ನಡೆದಿದೆ.
ಏನಿದು ಪ್ರಕರಣ?: ಇಲ್ಲಿನ ದೇವಸಂದ್ರದ ನಿವಾಸಿ ಸಯ್ಯದ್ ಇಮ್ರಾನ್, ಕೌಸರುನ್ನಿಸಾ ಮತ್ತು ಸಯ್ಯದ್ ಇರ್ಷಾದ್ ಶುಕ್ರವಾರ ಕೊನೆಯುಸಿರೆಳೆದಿದ್ದ ಹತ್ತಿರದ ಬಂಧುವೊಬ್ಬರ ಅಂತಿಮ ದರ್ಶನ ಪಡೆದು ಹಿಂತಿರುಗುತ್ತಿದ್ದರು. ವೆಂಗಯ್ಯನಕೆರೆ ಸಮೀಪಕ್ಕೆ ಬರುತ್ತಿದ್ದಂತೆ ಸಂಚಾರಿ ಪೊಲೀಸರು ಅವರನ್ನು ತಡೆದು ನಿಲ್ಲಿಸಿದರು. ಹೆಲ್ಮೆಟ್ ಧರಿಸದೆ ಹಾಗೂ ಮೂವರು ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ 500 ದಂಡ ಪಾವತಿ ಮಾಡುವಂತೆ ಪೊಲೀಸರು ಸೂಚಿಸಿದರು. ದಂಡ ಪಾವತಿಸಲು ಸಯ್ಯದ್ ಇಮ್ರಾನ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕುಪಿತಗೊಂಡು ತಮ್ಮ ಮೇಲೆ ವಾಕಿಟಾಕಿ ಮತ್ತು ಲಾಠಿಯಿಂದ ಹಲ್ಲೆ ನಡೆಸಿದರು ಎಂದು ಸಯ್ಯದ್ ಇಮ್ರಾನ್ ಆರೋಪಿಸಿದರು.