ಆಯುರ್ವೇದಿಕ್ ವೈದ್ಯೆ, ಸಿಬ್ಬಂದಿ ಮೇಲೆ ಗ್ರಾಮಸ್ಥರ ಹಲ್ಲೆ
ನೆಲಮಂಗಲ: ಸರ್ಕಾರಿ ಆಸ್ಪತ್ರೆಯ ಆಯುರ್ವೆದಿಕ್ ವೈದ್ಯೆ ಹಾಗೂ ಸಿಬ್ಬಂದಿ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿ ಪಿಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ಸೋಮವಾರ ತಾಲೂಕಿನ ಮಂಟನಕುರ್ಚಿ ಗ್ರಾಮದಲ್ಲಿ ನಡೆದಿದೆ.
ವೈದ್ಯೆ ಮನೋರಮಾ ಹಾಗೂ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಛಾಯಾದೇವಿ ಎಂಬುವವರ ಮೇಲೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ವೈದ್ಯೆ ಹಾಗೂ ಸಿಬ್ಬಂದಿ ಮೇಲೆ ಕೆಲ ವ್ಯಕ್ತಿಗಳು ಕುಡಿದ ಅಮಲಿನಲ್ಲಿ ಅಸಭ್ಯವಾಗಿ ಕಿರುಕುಳ ನೀಡಿ ನಿಂದಿಸಿದ್ದಾರೆ ಎಂದು ವೈದ್ಯೆ ಮನೋರಮಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಗೊಲ್ಲರದೊಡ್ದಿ ಗ್ರಾಮಕ್ಕೆ ಅಧಿಕಾರಿಗಳು ಭೇಟಿ
ಚನ್ನಪಟ್ಟಣ: ಬಾಣಂತಿಯರು ಮತ್ತು ಋತುಮತಿಯರನ್ನು ಗ್ರಾಮದ ಹೊರಗೆ ಇರುವ ಗುಡಿಸಲಿನಲ್ಲಿರಿಸುತ್ತಿದ್ದ ತಾಲೂಕಿನ ಗೊಲ್ಲರದೊಡ್ದಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ಗ್ರಾಮಸ್ಥರಿಗೆ ತಿಳಿಹೇಳಿ ಇಂತಹ ಆಚರಣೆಗಳನ್ನು ಕೈಬಿಡುವಂತೆ ಮನವರಿಕೆ ಮಾಡಿಕೊಟ್ಟಿತು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೆಂಕಟೇಶ್ ನೇತೃತ್ವದಲ್ಲಿ ಭೇಟಿ ನೀಡಿದ ತಂಡ, ಗ್ರಾಮದ ಹೊರವಲಯದಲ್ಲಿರುವ ಚಿಕ್ಕ ಗುಡಿಸಲಿನಲ್ಲಿ ಬಾಣಂತಿಯರನ್ನು ಇರಿಸಿರುವುದನ್ನು ಕಂಡು, ಇಂತಹ ಆಚರಣೆಗಳನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸಿತು.
3 ಅಡಿಯಷ್ಟು ಅಗಲವಿರುವ ಗುಡಿಸಲಿನಲ್ಲಿ ಬಾಣಂತಿಯರನ್ನು ಇರಿಸುವುದು ಹಲವು ರೋಗಗಳಿಗೆ ಎಡೆಮಾಡಿಕೊಡುತ್ತದೆ. ಅಲ್ಲದೆ, ಸ್ವಚ್ಛತೆ ಇಲ್ಲದ ಕಾರಣ ಮಾರಣಾಂತಿಕ ಕಾಯಿಲೆಗಳು ಎದುರಾಗುವ ಸಾಧ್ಯತೆ ಇದೆ. ಇದು ಮಹಿಳೆಯ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿರುವ ಕಾರಣ ಈ ರೀತಿಯ ಆಚರಣೆಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದರು.
ಸೂತಕ ಎಂಬ ಕಾರಣಕ್ಕೆ ನಾವು ಹೊರಗೆ ಇರಿಸುವುದಾಗಿ ಗ್ರಾಮಸ್ಥರು ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳ ತಂಡ ಇಂತಹ ಪದ್ಧತಿ ಜೀವಂತವಾಗಿರುವುದು ನಿಜಕ್ಕೂ ವಿಷಾದನೀಯವೆನಿಸಿದ್ದು, ನಾಗರಿಕತೆ ಬೆಳೆದಿರುವ ಈಗಿನ ಕಾಲಘಟ್ಟದಲ್ಲೂ ಇಂತಹ ಅನಿಷ್ಟ ಪದ್ಧತಿಗಳು ಜಾರಿಯಲ್ಲಿರುವುದು ದುರದೃಷ್ಟಕರ. ಇದನ್ನು ನಿಯಂತ್ರಿಸಬೇಕೆಂದು ತಿಳಿಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಕೆ. ರಾಧಾ, ಸಹಾಯಕ ನಿರ್ದೇಶಕಿ ಸುಮಲತ, ಮಕ್ಕಳ ರಕ್ಷಣಾಧಿಕಾರಿ ತಾಜುದ್ದೀನ್ ಖಾನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಘುನಾಥ, ಮನೋವೈದ್ಯೆ ಡಾ.ರಜನಿ, ಚನ್ನಪಟ್ಟಣ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯರಂಗ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪುಟ್ಟಸ್ವಾಮಿ. ತಾಲೂಕು ಆರೋಗ್ಯ ಅಧಿಕಾರಿ ಡಾ.ರಾಜು, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹೋರಾಟಗಾರ್ತಿ ಅನುಸೂಯಮ್ಮ ಉಪಸ್ಥಿತರಿದ್ದರು.