ಫಿಲ್ಟರ್ ಮರಳು ಸ್ಥಾವರ ಮೇಲೆ ಪೊಲೀಸರ ದಾಳಿ
ಕನಕಪುರ: ಅಕ್ರಮವಾಗಿ ಫಿಲ್ಟರ್ ಮರಳು ಗಣಿಗಾರಿಕೆ ನಡೆಸುತ್ತಿದ್ದ ಸ್ಥಾವರಗಳ ಮೇಲೆ ದಢೀರ್ ದಾಳಿ ನಡೆಸಿದ ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು 20ಕ್ಕೂ ಹೆಚ್ಚು ಫಿಲ್ಟರ್ ಮರಳು ತೊಟ್ಟಿಗಳನ್ನು ಜೆಸಿಬಿ ಬಳಸಿ ನಾಶ ಮಾಡಿದ್ದಾರೆ. ಅಲ್ಲದೆ ಎರಡು ದೋಣಿಗಳನ್ನು ವಶಕ್ಕೆ ಪಡೆದು ಸಾಮಗ್ರಿಗಳನ್ನು ನಾಶಪಡಿಸಿದ್ದಾರೆ. ಮರಳವಾಡಿ ಹೋಬಳಿಯ ಸುವರ್ಣಮುಖಿ ನದಿ ಪಾತ್ರದಲ್ಲಿ ಅವ್ಯಾಹತವಾಗಿ ನಡೆದಿರುವ ಫಿಲ್ಟರ್ ಮರಳು ಗಣಿಗಾರಿಕೆಯಿಂದ ದಂಧೆಕೋರರು ಅಪಾರ ಲಾಭಗಳಿಸುತ್ತಿದ್ದರು. ಪಿಚ್ಚನಕೆರೆ ಸಮೀಪ 13, ಸಿದ್ದನಹಳ್ಳಿ ಬಳಿ 1, ಭದ್ರೇಗೌಡನದೊಡ್ಡಿ 1, ಕೊಟ್ಟಗಾಳು ಬಳಿ ಒಂದು ಮರಳು ಫಿಲ್ಟರ್ ತೊಟ್ಟಿಗಳನ್ನು ನಾಶಪಡಿಸಿದ ಪೋಲೀಸರು, ಸುವರ್ಣಮುಖೀ ನದಿ ಪಾತ್ರದಲ್ಲಿ ಕಬ್ಬಿಣದ ಬೋಟ್ಗಳನ್ನು ಬಳಸಿ ನಡೆಸುತ್ತಿದ್ದ ಸ್ಥಾವರಗಳ ಮೇಲೆ ದಾಳಿ ನಡೆಸಿ ಎರಡು ಬೋಟ್ಗಳು ಹಾಗೂ ಸಾಮಗ್ರಿಗಳನ್ನು ನಾಶಗೊಳಿಸಿದ್ದಾರೆ. ಈ ದಂಧೆಯನ್ನು ನಿಲ್ಲಿಸದಿದ್ದರೆ, ದಂಧೆಕೋರರ ವಿರುದ್ಧ ರೌಡಿಷೀಟರ್ ಪಟ್ಟಿ ತೆರೆಯಲಾಗುವುದು, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಪಿಎಸೈ ಮಹದೇವಸ್ವಾಮಿ ಎಚ್ಚರಿಸಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿಗೆ
ಶಾಸಕ ನಾಗರಾಜ್ ಚಾಲನೆ
ಸೂಲಿಬೆಲೆ: ಇಲ್ಲಿಗೆ ಸಮೀಪದ ಎಂ. ಸತ್ಯವಾರ ಗ್ರಾಮದಲ್ಲಿ ಲೋಕಸಭಾ ಸದಸ್ಯರ ಅನುದಾನದಲ್ಲಿ ಕೈಗೊಳ್ಳಲಿರುವ ರಸ್ತೆ ಕಾಮಗಾರಿಗೆ ಶಾಸಕ ಎನ್.ನಾಗರಾಜ್ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ವೀರಪ್ಪ ಮೊಯ್ಲಿ ಅವರ ಅನುದಾನದಡಿ ಸುಮಾರು 5 ಲಕ್ಷ ವೆಚ್ಚದಲ್ಲಿ ಗ್ರಾಮದ ರಸ್ತೆ ಅಭಿವೃದ್ಧಿ ನಡೆಸಲಾಗುವುದು. ಗುತ್ತಿಗೆದಾರರು ಕಾಮಗಾರಿ ನಡೆಸುವಾಗ ಗುಣಮಟ್ಟಕ್ಕೆ ಹೆಚ್ಚು ಅಧ್ಯತೆ ನೀಡಬೇಕು. ಜನಪರವಾದ ಕಾಳಜಿ ಹೊಂದಿ ಗುತ್ತಿಗೆದಾರರು ಕೆಲಸ ಮಾಡಬೇಕು ಎಂದು ಹೇಳಿದರು.ಒಕ್ಕಲಿಗರ ಸಂಘದ ನಿರ್ದೇಶಕ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್, ಗ್ರಾಮಾಂತರ ಅಧ್ಯಕ್ಷ ಕಲ್ಲಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.
ಹಾಸ್ಟೆಲ್ಗಳಿಗೆ ಅರ್ಜಿ ಆಹ್ವಾನ
ದೇವನಹಳ್ಳಿ: ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯವರು 2014-15 ನೇ ಸಾಲಿನಲ್ಲಿ ದೇವನಹಳ್ಳಿಯಲ್ಲಿ ಮೆಟ್ರಿಕ್ ನಂತರದ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರವೇಶ ಬಯಸುವವರು ಜುಲೈ 25 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮೆಟ್ರಿಕ್ ನಂತರದ ಎಂಜಿನಿಯರಿಂಗ್, ವೈದ್ಯಕೀಯ, ಪಿಯುಸಿ, ಸಾಮಾನ್ಯ ಪದವೀಧರರು, ಸ್ನಾತಕೋತ್ತರ ಪದವಿ ಹಾಗೂ ಇತರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಕ್ಕೆ ಸೇರಿದ ವರ್ಗ 1, 2ಎ, 2ಬಿ, 3ಎ, 3ಬಿ ಹಾಗೂ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ, ದೇವನಹಳ್ಳಿ ಇವರಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಲೈಬ್ರರಿ, ಕಂಪ್ಯೂಟರ್ ಸೌಲಭ್ಯ, ಹಾಸಿಗೆ ಹೊದಿಕೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅರಿಶಿನಕುಂಟೆಯ ವಿಜಯ ವಿಠ್ಠಲನಿಗೆ ಮಸ್ತಕಾಭಿಷೇಕ
ನೆಲಮಂಗಲ: ಪಟ್ಟಣದ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರ ಅರಿಶಿನಕುಂಟೆಯಲ್ಲಿರುವ ವಿಶ್ವಶಾಂತಿ ಆಶ್ರಮದಲ್ಲಿ ಶ್ರೀ ವಿಶ್ವರೂಪ ವಿಜಯ ವಿಠ್ಠಲ ದೇವರ 26ನೇ ಪ್ರತಿಷ್ಠಾವರ್ಧಂತಿ ಪ್ರಯುಕ್ತ 36 ಅಡಿ ಎತ್ತರದ ಏಕಶಿಲಾ ವಿಜಯ ವಿಠ್ಠಲ ದೇವರಿಗೆ ಮಹಾಮಸ್ತಕಾಭಿಷೇಕ ಮಾಡಲಾಯಿತು.ಇದೇ ಸಂದರ್ಭದಲ್ಲಿ ಆಶ್ರಮದ ಸಂಸ್ಥಾಪಕ ಸಂತ ಭದ್ರಗಿರಿ ಕೇಶವದಾಸರ 80ನೇ ಜಯಂತ್ಯುತ್ಸವ ಆಚರಿಸಲಾಯಿತು. ಸಮಾರಂಭದ ಪ್ರಯುಕ್ತ ಸೋಮವಾರದಿಂದಲೆ ಹಬ್ಬದ ವಾತಾವರಣ ಮೂಡಿತ್ತು. ನೂರಾರು ಭಕ್ತರು ಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿದ್ದರು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಅಹೋರಾತ್ರಿ ಭಜನೆ ಕೀರ್ತನೆಗಳನ್ನು ಹಾಡಲಾಯಿತು.