ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭಯದ ವಾತಾವರಣ ಮೂಡಿಸುವುದು ಸರಿಯಲ್ಲ

Rashmi Kasaragodu
Updated On : 13 Jul 2014, 1:55 am

ಕ.ಪ್ರ.ವಾರ್ತೆ  ರಾಮನಗರ  ಜು.12
ಹೊರ ರಾಜ್ಯಗಳಿಂದ ಆಗಮಿಸಿ ರಾಜ್ಯದಲ್ಲಿ ಕೂಲಿ ಕೆಲಸ ಮಾಡುತ್ತಿರುವವರಿಗೆ ಪ್ರತಿಭಟನೆ ಹೆಸರಿನಲ್ಲಿ ಅವರಲ್ಲಿ ಭಯದ ವಾತಾವರಣ ಮೂಡಿಸುವುದು ಸರಿಯಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಗುರುಪೂರ್ಣಿಮೆ ಪ್ರಯುಕ್ತ ನಗರದ ಸಾಯಿಬಾಬಾ ಮಂದಿರಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಿಂದ ಆಗಮಿಸಿರುವ ಸಾವಿರಾರು ಕೂಲಿಕಾರರು ಕೂಡಗಿ ವಿದ್ಯುತ್ ಘಟಕ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ರೈತರ ಪ್ರತಿಭಟನೆಯಿಂದಾಗಿ ಅವರು ವಾಪಸಾಗುತ್ತಿದ್ದಾರೆ ಎಂದರು.
ಸಾವಿರಾರು ಕೂಲಿ ಕಾರ್ಮಿಕರು ಜೀವನೋಪಾಯಕ್ಕೆ ವಲಸೆ ಬಂದಿರುತ್ತಾರೆ. ಅಂತವರಿಗೆ ಪ್ರತಿಭಟನೆ ಹೆಸರಿನಲ್ಲಿ ಭಯದ ವಾತಾವರಣ ಹುಟ್ಟಿಸಿ, ಅವರ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುವುದು ಸರಿಯಲ್ಲ. ಕನ್ನಡಿಗರೂ ಕೂಡ ಮುಂಬೈ, ಗೋವಾ ಸೇರಿದಂತೆ ದೇಶಾದ್ಯಂತ ನೆಲಸಿದ್ದಾರೆ. ಅಲ್ಲೇನಾದರೂ ಗಲಭೆಗಳು ಸಂಭವಿಸಿದರೆ ಅವರೂ ಕೂಡ ರಾಜ್ಯಕ್ಕೆ ವಾಪಸಾಗಬೇಕಾಗುತ್ತದೆ ಎಂದು ಹೇಳಿದರು.
ಕೂಡಗಿಯಲ್ಲಿ ಕೇಂದ್ರ ಸರ್ಕಾರದಿಂದ ನಿರ್ಮಾಣವಾಗುತ್ತಿರುವ ವಿದ್ಯುತ್ ಘಟಕದಿಂದ ಉತ್ಪಾದನೆಯಾಗುವ ಶೇ.50 ಭಾಗದಷ್ಟು ವಿದ್ಯುತ್ ರಾಜ್ಯಕ್ಕೆ ದೊರೆಯಲಿದೆ. ಯೋಜನೆಗೆ ಜಮೀನು ನೀಡಿರುವ ರೈತರಿಗೆ ಒಳ್ಳೆಯ ಬೆಲೆ ನೀಡಲಾಗಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇಂತಹ ಯೋಜನೆಗಳನ್ನು ಸ್ವಾಗತಿಸಬೇಕು ಎಂದು ತಿಳಿಸಿದರು.
ಮಳೆ ಕೊರತೆ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದ್ದು, ಮಳೆ ಸುರಿದು ಕೆರೆ-ಕಟ್ಟೆಗಳಿಗೆ ನೀರು ಬಂದರೆ ವಿದ್ಯುತ್ ಬಳಕೆ ಕಡಿಮೆಯಾಗಲಿದೆ. ಕಳೆದ 52 ವರ್ಷಗಳಲ್ಲಿಯೇ ಕಡಿಮೆ ಮಳೆಯಾಗಿದೆ ಎಂದು ಅಂಕಿ-ಅಂಶ ಸಮೇತ ಕಂದಾಯ ಸಚಿವರು ಸದನದಲ್ಲಿ ಹೇಳಿದ್ದಾರೆ ಎಂದು ಸಚಿವ ಶಿವಕುಮಾರ್ ಹೇಳಿದರು.
ಮಳೆ ಕೊರತೆ ಕೇವಲ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ದೇಶಾದ್ಯಂತ ಕಡಿಮೆ ಮಳೆಯಾಗಿದೆ. ಹೀಗಾಗಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಇಂಧನ ಸಚಿವನಾಗಿ ಮಾಡಬೇಕಾದ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಮಳೆ ಬಂದರಷ್ಟೇ ವಿದ್ಯುತ್ ಸಮಸ್ಯೆ ನೀಗಲಿದೆ. ಮಳೆಗಾಗಿ ದೇವರ ಮೊರೆ ಹೋಗುವುದು ಬಿಟ್ಟು ಮತ್ತೇನು ಮಾಡಲು ಸಾಧ್ಯವಿಲ್ಲ ಎಂದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement