ದೇವನಹಳ್ಳಿ ತಾಪಂ ಅಧ್ಯಕ್ಷೆ ವೆಂಕಟೇಶಮ್ಮ
ದೇವನಹಳ್ಳಿ: ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಯ ಮೂರನೆಯ ಅವಧಿಗೆ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಾದ ಸಿ. ಮಂಜುನಾಥ್ ಚುನಾವಣೆ ನಡೆಸಿದರು.
ತಾಲೂಕು ಪಂಚಾಯಿತಿಯ 14 ಸದಸ್ಯರಲ್ಲಿ ಜೆಡಿಎಸ್ 8 ಮಂದಿ ಹಾಗೂ ಕಾಂಗ್ರೆಸ್ 6 ಮಂದಿ ಆಯ್ಕೆಯಾಗಿದ್ದು ಅವರಲ್ಲಿ ಐದು ಮಂದಿ ಕಾಂಗ್ರೆಸ್ ಸದಸ್ಯರು ಗೈರು ಹಾಜರಾಗಿದ್ದರು.
ಅಧ್ಯಕ್ಷರ ಸ್ಥಾನ ಅನುಸೂಚಿತ ಮಹಿಳೆಗೆ ಮೀಸಲಾಗಿದ್ದು ಉಗುನುವಾಡಿ ವೆಂಕಟೇಶಮ್ಮ (ಜೆಡಿಎಸ್) ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಇರಿಗೇನಹಳ್ಳಿ ಮಂಜುಳಾ ಹಾಗೂ ಕಾರಹಳ್ಳಿ ಮೀನಾಕ್ಷಿ ಇಬ್ಬರು ನಾಮಪತ್ರ ಸಲ್ಲಿಸಿದ್ದು ಅವರಲ್ಲಿ ಮಂಜುಳಾ ತಮ್ಮ ನಾಮಪತ್ರ ವಾಪಸ್ ಪಡೆದಿದ್ದರಿಂದ ಮೀನಾಕ್ಷಿ ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣೆ ಪ್ರಕ್ರಿಯೆ ನಂತರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ ಮೀಸಲಾತಿ ಅವಕಾಶ ಇದ್ದಕಾರಣ ಎಲ್ಲ ವರ್ಗದ ಸದಸ್ಯರು ಅಧಿಕಾರ ಪಡೆಯಲು ಕಾರಣವಾಗಿದೆ. ಆದ್ದರಿಂದ ತಮಗೆ ದೊರೆತ ಅವಧಿಯಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಮತ್ತು ಸರ್ಕಾರದ ಯೋಜನೆಗಳು ಜನರಿಗೆ ತಲುಪಲು ಅಧಿಕಾರಿಗಳ ಸಹಕಾರ ಪಡೆಯಬೇಕೆಂದು ತಿಳಿಸಿದರು.
ಸಿಕ್ಕಿಬಿದ್ದ ರಾಸಲೀಲೆ ಶಿಕ್ಷಕನಿಗೆ ರಕ್ಷಣೆ: ಆರೋಪ
ರಾಮನಗರ: ಕಂಪ್ಯೂಟರ್ ತರಬೇತಿ ಕೇಂದ್ರ ನಡೆಸುವ ನೆಪದಲ್ಲಿ ಯುವತಿಯರ ರಾಸಲೀಲೆ ನಡೆಸಿ, ಆ ಅಶ್ಲೀಲ ದೃಶ್ಯವನ್ನು ಚಿತ್ರೀಕರಿಸುವ ದಂಧೆಯಲ್ಲಿ ಸಿಕ್ಕಿಬಿದ್ದಿದ್ದ ಶಿಕ್ಷಕನನ್ನು ರಕ್ಷಿಸುವ ಕೆಲಸ ಪೊಲೀಸರು ಮತ್ತು ಡಿಡಿಪಿಐ ಅವರಿಂದ ನಡೆದಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ.
ಕನಕಪುರದಲ್ಲಿ ಒಂದು ವರ್ಷದ ಹಿಂದೆ ಬೆಳಕಿಗೆ ಬಂದಿದ್ದ ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಶಿಕ್ಷಕ ಚಂದ್ರಶೇಖರಯ್ಯ ಅವರ ಅಮಾನತು ಆದೇಶವನ್ನು ಡಿಡಿಪಿಐ ಪ್ರಹ್ಲಾದಗೌಡ ಸ್ವಜನ ಪಕ್ಷಪಾತದಿಂದ ಹಿಂಪಡೆದಿದ್ದು, ವರ್ಗಾವಣೆಗೊಳಿಸಿ ಕೈತೊಳೆದುಕೊಂಡಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಂತೆಯೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಕಾಮಲೀಲೆಯನ್ನು ಬಯಲಿಗೆಳೆಯುವ ಜತೆಗೆ ಚಂದ್ರಶೇಖರಯ್ಯನನ್ನು ಬಂಧಿಸಿದ್ದ ಕನಕಪುರ ಟೌನ್ ಪೊಲೀಸರು ಇದೀಗ ಕಾನೂನು ಕುಣಿಕೆಯನ್ನು ಸಡಿಲಿಸಿದ್ದಾರೆ. ನೆಪಮಾತ್ರಕ್ಕೆ ತನಿಖೆ ನಡೆಸಿ, ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಿದ ಅಪಕೀರ್ತಿ ಪೊಲೀಸರದ್ದಾಗಿದೆ ಎಂದು ಟೀಕಿಸಿದರು.
ಚಂದ್ರಶೇಖರಯ್ಯ ತನ್ನ ಕಂಪ್ಯೂಟರ್ ಕೇಂದ್ರಕ್ಕೆ ಬರುತ್ತಿದ್ದ ಅಮಾಯಕ ಹೆಣ್ಣು ಮಕ್ಕಳನ್ನು ಪುಸಲಾಯಿಸಿ, ಕಾಮತೃಷೆಗೆ ಬಳಸಿದ್ದಲ್ಲದೆ ಅದನ್ನೆಲ್ಲ ಗುಪ್ತವಾಗಿರಿಸಿದ್ದ ವೀಡಿಯೋ ಕ್ಯಾಮೆರಾದಲ್ಲೂ ಸೆರೆ ಹಿಡಿದಿದ್ದನು. ಸೇವೆಯಿಂದ ವಜಾ ಆಗಬೇಕಿದ್ದ ಚಂದ್ರಶೇಖರಯ್ಯ ರಕ್ಷಣೆಗೆ ಖುದ್ದು ಡಿಡಿಪಿಐ ನಿಂತಿರುವುದು ವಿಪರ್ಯಾಸದ ಸಂಗತಿ ಎಂದು ದಿನೇಶ್ ಆರೋಪಿಸಿದರು.
ಮನೆಯಲ್ಲಿ ವಿದ್ಯುತ್ ಅವಘಡ: ನಷ್ಟ
ದೇವನಹಳ್ಳಿ: ತಾಲೂಕಿನ ಬೈಚಾಪುರ ರಸ್ತೆಯ ಶ್ರೀಧರ ಎಂಬುವರು ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ಸುಮಾರು 50 ಸಾವಿರ ರು.ಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ.
ಬಾಗೇಪಲ್ಲಿಯ ಖಾಸಗೀ ಶಾಲೆಯಲ್ಲಿ ಶಿಕ್ಷಕರಾಗಿರುವ ರಾಮಚಂದ್ರಪ್ಪ ಎಂಬುವರು ತಮ್ಮ ಕುಟುಂಬದೊಂದಿಗೆ ಇಲ್ಲಿನ ಪ್ರಶಾಂತ ನಗರದ ಮುಖ್ಯ ರಸ್ತೆಯ ಮನೆಯಲ್ಲಿ ಬಾಡಿಗೆಗೆ ಇದ್ದರು. ಮಂಗಳವಾರ ಬೆಳಗ್ಗೆ ತಮ್ಮ ಮನೆಯಲ್ಲಿ ಬಿಸಿ ನೀರು ಕಾಯಿಸಲು ವಿದ್ಯುತ್ ಗೀಜರ್ ಆನ್ ಮಾಡಿದರು. ಆದರೆ ವಿದ್ಯುತ್ ಇಲ್ಲದೇ ಇದ್ದರಿಂದ ಮನೆಯಿಂದ ಹೊರಗೆ ನೆಂಟರ ಮನೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಹೋಗಿದ್ದ ಕರೆಂಟ್ ಮತ್ತೆ ಬಂದ ಸಂದರ್ಭದಲ್ಲಿ ಗೀಜರ್ ಬೆಂಕಿಗೆ ಆಹುತಿಯಾಗಿ ಮನೆ ತುಂಬ ಹೊಗೆ ಮತ್ತು ಬೆಂಕಿ ಆವರಿಸಿ ಮನೆಯ ಹೊರಗೆ ಹೊಗೆ ಬರುತ್ತಿರುವುದನ್ನು ಕಂಡು ಸುತ್ತ ಮುತ್ತಲಿನವರು ಆಗಮಿಸಿ ಮನೆಯ ಬೀಗ ತೆಗೆದು ಬೆಂಕಿಯನ್ನು ಆರಿಸಿದರು. ಅಷ್ಟರಲ್ಲಿ ಅಗ್ನಿಶಾಮಕ ದಳದವರು ಆಗಮಿಸಿ ತಮ್ಮ ಕಾರ್ಯ ನಿರ್ವಹಿಸಿದರು. ಈ ಅವಘಡದಲ್ಲಿ ಕೂಲರ್, ಪ್ರಿಜ್ ಹಾಳಾಗಿದ್ದು ಕಿಟಕಿ ಗಾಜುಗಳು ಒಡೆದುಹೋಗಿದೆ.
ಜಾತಿ ಗಣತಿಗೆ ಮಾಹಿತಿ ನೀಡಿ: ಕಾಂತರಾಜು ಮನವಿ
ಆನೇಕಲ್ಲು: ಜಾತಿ ಗಣತಿಯಿಂದಾಗಿ ಸಮಾನತೆಯುಳ್ಳ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಎಲ್ಲ ಹಿಂದುಳಿದ ವರ್ಗಗಳ ಜನ ಸ್ವಾಭಿಮಾನದ ಪ್ರತೀಕವಾಗಿ ಜಾತಿ ಗಣತಿ ಕಾರ್ಯಕರ್ತಕರು ಮನೆಗೆ ಬಂದಾಗ ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಕಾಂತರಾಜು ಮನವಿ ಮಾಡಿದ್ದಾರೆ. ಅವರು ಆನೇಕಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಂತರ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನೂ ರೂಪಿಸಿದೆ. ಯೋಜನೆಗಳು ಸಂಬಂಧಿಸಿದ ಫಲಾನುಭವಿಗಳಿಗೆ ನೇರ ಹಾಗೂ ಸಂಪೂರ್ಣವಾಗಿ ತಲುಪುತ್ತಿದೆಯೇ ಎಂಬುದನ್ನು ಅರಿಯಲು ಮಾಹಿತಿ ಅನಿವಾರ್ಯವಾಗಿದೆ ಎಂದರು.ಜಾತಿ ಗಣತಿಯಲ್ಲಿ ವಿವಿಧ ಜಾತಿಗಳ ಜನರಿಗೆ ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಾನಮಾನ ಲಭಿಸಿದೆಯೇ ಎಂಬುದೂ ಸೇರಿದಂತೆ 54 ಅಂಕಣಗಳ ಸಮಗ್ರ ಕುಟುಂಬ ಮಾಹಿತಿ ದಾಖಲಾಗುತ್ತದೆ. ಪರಿಪೂರ್ಣ ಮಾಹಿತಿ ಪಡೆದ ನಂತರ ಯಾವ ವರ್ಗ ಪಂಗಡಕ್ಕೆ ಮೀಸಲಾತಿಯಡಿ ನ್ಯಾಯ ದೊರೆತಿಲ್ಲ, ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ ಅಥವಾ ದುರುಪಯೋಗವಾಗಿದೆ ಎಂಬುದನ್ನು ಆಧರಿಸಿ ಆ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗುವುದು. ಒಂದು ಹಂತದ ನಂತರ ಸಮಾನತೆ ಸಿಕ್ಕಲ್ಲಿ ಮೀಸಲಾತಿ ತೆಗೆಯುವ ಪ್ರಸ್ತಾಪವನ್ನು ಸಲ್ಲಿಸಲಾಗುವುದು ಎಂದರು.
ಅಕ್ಟೋಬರ್ನಿಂದ ಗಣತಿ ಪ್ರಾರಂಭ: 1931ರ ನಂತರ ದೇಶದಲ್ಲಿ ಜಾತಿ ಗಣತಿಯಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾತಿ ಗಣತಿ ಮಾಹಿತಿ ಸಂಗ್ರಹಕ್ಕಾಗಿ ರು. 117 ಕೋಟಿ ವೆಚ್ಚ ಮಾಡುತ್ತಿದೆ. ರಾಜ್ಯಾದ್ಯಂತ 1.25 ಲಕ್ಷ ಗಣತಿದಾರರು ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 2014 ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಂದ ಗಣತಿ ಪ್ರಾರಂಭವಾಗಲಿದೆ. ಜಾತಿ ಗಣತಿ ಮೂಲಕ ಜಾತಿಗಳ ನಡುವೆ ಸಮಾನತೆ ತಂದು ಜಾತ್ಯತೀತ ವ್ಯವಸ್ಥೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುವುದು. ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಕ್ಕೆ ಪೂರಕವಾಗಿ ನಡೆಸುವ ಗಣತಿಯಲ್ಲಿ ಸಾರ್ವಜನಿಕರು ಪರಿಪೂರ್ಣ ಮಾಹಿತಿ ನೀಡಬೇಕು. ಮಾಹಿತಿ ನೀಡುವಾಗ ಕೀಳರಿಮೆ ಬೇಡ. ಮುಂದಿನ ಪೀಳಿಗೆಯವರು ಸ್ವಾಭಿಮಾನ ಹಾಗೂ ಸಮಾನತೆಯಿಂದ ಬದುಕಲು ಜಾತಿ ಗಣತಿ ದರ್ಪಣ ಗ್ರಂಥವಾಗಲಿದೆ ಎಂದರು. ತಹಸೀಲ್ದಾರ್ ಅನಿಲ್ಕುಮಾರ್, ಇಒ ಡಾ. ವೀರಭದ್ರಪ್ಪ, ಪುರಸಬಾ ಮುಖ್ಯಾಧಿಕಾರಿ ಬಿ.ಎಸ್. ಸುಮಾ ಸಬೆಯಲ್ಲಿ ಮಾಹಿತಿ ಪಡೆದರು.
ಯೋಗ ಚಾಂಪಿಯನ್ಶಿಪ್
ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆ ಮತ್ತು ದೊಡ್ಡಬಳ್ಳಾಪುರದ ನಿಸರ್ಗ ಯೋಗಕೇಂದ್ರ ಸಂಯುಕ್ತ ಆಶ್ರಯದಲ್ಲಿ 34ನೇ ಕರ್ನಾಟಕ ರಾಜ್ಯ ಯೋಗ ಚಾಂಪಿಯನ್ಷಿಪ್-2014 ಹಾಗೂ 3ನೇ ಕರ್ನಾಟಕ ರಾಜ್ಯ ಶಾಲಾ ಮತ್ತು ಕಾಲೇಜುಗಳ ಯೋಗಾಸನಾ ಚಾಂಪಿಯನ್ಷಿಪ್-2014 ಜು.19 ಮತ್ತು 20ರಂದು ಶನಿವಾರ ಮತ್ತು ಭಾನುವಾರ ಇಲ್ಲಿನ ಗುರುರಾಜ ಕಲ್ಯಾಣ ಭವನದಲ್ಲಿ ನಡೆಯಲಿದೆ. ಈ ಸ್ಪರ್ಧೆಗಳು ಯೋಗಾ ಫೆಡರೇಷನ್ ಆಫ್ ಇಂಡಿಯಾ-ಹರಿಯಾಣ ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಸ್ಪರ್ಧೆಗಳನ್ನು ಸ್ಪರ್ಧಿಗಳ ವಯೋವುತಿಗನುಗುಣವಾಗಿ ಯುವಕ, ಯುವತಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ.
ಅಕ್ರಮ ಮರಳು ಫಿಲ್ಟರ್: 20 ಲಾರಿಗಳ ವಶ
ಕನಕಪುರ: ತಾಲೂಕಿನ ಹಾರೋಹಳ್ಳಿ ಹೋಬಳಿಯಲ್ಲಿ ಅಕ್ರಮ ಮರಳು ಫಿಲ್ಟರ್ ಗಣಿಗಳ ಮೇಲೆ ಆರಕ್ಷಕ ಉಪನಿರೀಕ್ಷಕ ಹೇಮಂತಕುಮಾರ್ ತಂಡದವರು ದಿಢೀರ್ ದಾಳಿ ನಡೆಸಿ 22ಕ್ಕೂ ಹೆಚ್ಚು ಮರಳು ತೊಟ್ಟಿಗಳನ್ನು ಜೆಸಿಬಿ ಬಳಸಿ ನಾಶಮಾಡಿದ್ದಾರೆ. ಇದರೊಂದಿಗೆ ಹಾರೋಹಳ್ಳಿ ಮಾರ್ಗವಾಗಿ ಬೆಂಗಳೂರಿಗೆ ರವಾನೆಯಾಗುತ್ತಿದ್ದ ಪರವಾನಗಿ ರಹಿತ 20 ಲಾರಿಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿದ್ದಾರೆ.
ತಾಲೂಕಿನ ಗಡಿಕೇಂದ್ರವಾದ ದೊಡ್ಡಮರಳವಾಡಿ ಹೋಬಳಿಯ ಬನವಾಸಿ ಸುತ್ತಮುತ್ತಲಿನ ಕಿರುತೊರೆಗಳು ಹಾಗೂ ಕೆರೆಗಳ ಅಂಗಳದಲ್ಲಿ ನೂರಕ್ಕೂ ಹೆಚ್ಚು ಅಕ್ರಮ ಫಿಲ್ಟರ್ ಮರಳು ದಂಧೆ ಹಲವಾರು ವರ್ಷಗಳಿಂದ ತಾಲೂಕು ಆಡಳಿತಕ್ಕೆ ತಲೆಶೂಲೆಯಾಗಿ ಪರಿಣಮಿಸಿದ್ದು ಎಷ್ಟೇ ನಿಯಂತ್ರಣಕ್ಕೆ ಯತ್ನಿಸಿದರೂ ನಾಯಿಕೊಡೆಗಳಂತೆ ಮತ್ತೆಮತ್ತೆ ತಲೆಎತ್ತಿ ಅಕ್ರಮದಂಧೆ ನಡೆಸಿವೆ.
ಫಿಲ್ಟರ್ ಮರಳು ತಯಾರಿಸಲು ಅಕ್ರಮವಾಗಿ ಕೊರೆಯಿಸಿದ್ದ ನಾಲ್ಕು ಬೋರ್ವೆಲ್ಗಳನ್ನು ಪಿಎಸ್ಐ ಹೇಮಂತಕುಮಾರ್ ತಂಡದವರು ಜೆಸಿಬಿ ಯಂತ್ರಗಳನ್ನು ಬಳಸಿ ನಾಶ ಮಾಡಿದರು. ಮರಳು ಗಣಿಗಳ ಮುಂದೆ ಮರಳು ತುಂಬಿಕೊಂಡು ಬೆಂಗಳೂರಿಗೆ ಸಾಗಿಸಲು ಸಿದ್ಧವಾಗಿದ್ದ ಮೂರು ಲಾರಿಗಳನ್ನು ವಶಪಡಿಸಿಕೊಳ್ಳಲಾಯಿತು.
ಶಾಲೆ ಆಡಳಿತ ಮಂಡಳಿ ಅನುಚಿತ ವರ್ತನೆ
ನೆಲಮಂಗಲ: ವಿದ್ಯಾರ್ಥಿಗಳ ಪೋಷಕರಿಗೆ ವಿನಾಕಾರಣ ಪಟ್ಟಣದ ಸಮೀಪದ ವಾಜರಹಳ್ಳಿಯ ಥಾಮಸ್ ಮೆಮೋರಿಯಲ್ ಆಂಗ್ಲ ಶಾಲೆ ಆಡಳಿತ ಮಂಡಳಿ ತೊಂದರೆ ನೀಡಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್ ನೋಟೀಸ್ ನೀಡಿರುವ ಘಟನೆ ಮಂಗಳವಾರ ನಡೆದಿದೆ. ಶಾಲೆ ವಿದ್ಯಾರ್ಥಿಗಳಿಗೆ ಶಾಲೆಯ ಸಂಸ್ಥಾಪಕಿ ಜೋಸ್ನಾ ಫ್ರಾನ್ಸಿಸ್ ಪ್ರಾಂಶುಪಾಲ ಸಿರಿಲ್ ಕುಮಾರ್, ಶಿಕ್ಷಕ ಆಂಟೋನಿ ಪದೇಪದೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪೋಷಕರಾದ ಅಮೃತ ಶಾಲಿನಿ ನೀಡಿದ ಮೌಖಿಕ ದೂರಿನನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಖುದ್ದಾಗಿ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿ ಹಾಗೂ ಪೋಷಕರೊಂದಿಗೆ ಮಾತನಾಡಿ ಉತ್ತಮ ರೀತಿಯಲ್ಲಿ ಶಾಲೆ ಮಕ್ಕಳು ಹಾಗೂ ಪೋಷಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಂತೆ ತಿಳಿಸಿದ್ದಾರೆ. ಶಾಲೆಯ ಪೋಷಕರೊಂದಿಗೆ ಶಾಲೆಯ ಆಡಳಿತ ಮಂಡಳಿ ಅನುಚಿತವಾಗಿ ವರ್ತನೆ ಮಾಡಿರುವ ಕುರಿತು ವರದಿ ಮಾಡಲು ತೆರಳಿದ್ದ ಪತ್ರಿಕಾ ಮಾಧ್ಯಮದವರೊಂದಿಗೆ ಶಿಕ್ಷಕರೇ ಕ್ಯಾಮರಾಗಳನ್ನು ಕಿತ್ತುಕೊಳ್ಳಲು ಮುಂದಾಗಿ ಮಾಧ್ಯಮ ಪ್ರತಿನಿಧಿಗಳ ಜೊತೆಯೂ ಶಾಲೆಯವರು ಅಸಭ್ಯವಾಗಿ ವರ್ತಿಸಿದ್ದಾರೆ. ಶಾಲೆಯಲ್ಲಿ ಇದೇ ಈ ರೀತಿ ಘಟನೆಗಳು ಮುಂದೆಯೂ ನಡೆದರೆ ಮೇಲಾಧಿಕಾರಿಗಳಿಗೆ ಸಂಸ್ಥೆಯ ಬಗ್ಗೆ ವರದಿ ಮಾಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್ ನೋಟೀಸ್ನಲ್ಲಿ ಎಚ್ಚರಿಸಿದ್ದಾರೆ.
ಅರ್ಜಿ ಆಹ್ವಾನ
ರಾಮನಗರ: ಜಿಲ್ಲೆಯ ನಿರುದ್ಯೋಗಿ ವಿಕಲಚೇತನ ವ್ಯಕ್ತಿಗಳಿಗೆ 2014-15ನೇ ಸಾಲಿನಲ್ಲಿ ಸಣ್ಣ ವ್ಯಾಪಾರಕ್ಕಾಗಿ ಆಧಾರ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಂದಾಯ ಭವನ, ಬಿ.ಎಂ.ರಸ್ತೆ, ರಾಮನಗರ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜು.19ರೊಳಗೆ ಮೇಲ್ಕಂಡ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಕಚೇರಿ ಸಂಪರ್ಕಿಸಲು ಕೋರಿದೆ.