ಭೂ ಪರಿವರ್ತನೆ: ನಿತ್ಯಾ ಅರ್ಜಿ ವಜಾ
ಕ.ಪ್ರ.ವಾರ್ತೆ ರಾಮನಗರ ಜು.16
ದೇಶ ವಿದೇಶಗಳ ಸಹಸ್ರಾರು ಅನುಯಾಯಿಗಳೊಂದಿಗೆ ನಾಲ್ಕು ದಿನದ ಹಿಂದಷ್ಟೇ ತನ್ನ ವಿಚಿತ್ರ ಆಚರಣೆಗಳೊಂದಿಗೆ ವೈಭವೋಪೇತವಾಗಿ ಗುರು ಪೂರ್ಣಿಮೆ ಆಚರಿಸಿಕೊಂಡ ನಿತ್ಯಾನಂದ ಪಾಲಿಗೆ ಒಂದರ ಹಿಂದೊಂದು ಕಂಟಕ ಎದುರಾಗಿದೆ.
ಅತ್ತ ಹೈಕೋರ್ಟ್ ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಅಸ್ತು ಎಂದಿದ್ದರೆ, ಇತ್ತ ರಾಮನಗರದಲ್ಲಿ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಧ್ಯಾನಪೀಠವಿರುವ ಬಿಡದಿ ಭೂಮಿಯ ಪರಿವರ್ತನೆ ಕೋರಿ ನಿತ್ಯಾನಂದ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದಾರೆ.
ಬಿಡದಿಯ ಕಲ್ಲುಗೋಪಹಳ್ಳಿ ಗ್ರಾಮದ ಸರ್ವೆ ನಂ.21-7ರಲ್ಲಿ 20 ಎಕರೆ 35 ಗುಂಟೆಯಲ್ಲಿ ನಿತ್ಯಾನಂದ ಸ್ಥಾಪಿಸಿರುವ ಧ್ಯಾನಪೀಠವು ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ಇನ್ನೂ ಕೃಷಿ ಜಮೀನು ಆಗಿರುತ್ತದೆ. ಅದರ ಪರಿವರ್ತನೆಗಾಗಿ ನಿತ್ಯಾನಂದ ಇದೇ ವರ್ಷ ಜ.24ರಂದು ಅರ್ಜಿ ಸಲ್ಲಿಸಿದ್ದರು.
ಆರೋಪಗಳ ಸುರಿಮಳೆ: ರಾಸಲೀಲೆ, ಲೈಂಗಿಕ ಕಿರುಕುಳ, ಶಾಂತಿಭಂಗ ಹೀಗೆ ಒಂದರ ಹಿಂದೊಂದು ವಿವಾದಗಳು ಸೃಷ್ಟಿಯಾದ ಸಂದರ್ಭದಲ್ಲಿ ನಿತ್ಯಾನಂದ ವಿರುದ್ಧ ಹೋರಾಟಕ್ಕೆ ಇಳಿದಿದ್ದ ಕನ್ನಡಪರ ಸಂಘಟನೆಗಳು ಧ್ಯಾನಪೀಠದ ಸ್ವತ್ತಿನ ವಿಷಯದಲ್ಲೂ ಆಕ್ಷೇಪಣೆ ಸಲ್ಲಿಸಿದ್ದರು. ಸದರಿ ಜಾಗವು ರೈತರಿಂದ ಕಸಿದುಕೊಂಡಿದ್ದಾಗಿದೆ. ಭೂ ಪರಿವರ್ತನೆ ಇಲ್ಲದೇ ಅಲ್ಲಿ ಕಟ್ಟಡಗಳು ತಲೆ ಎತ್ತಿರುವ ಬಗ್ಗೆ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಇದಕ್ಕೆ ಸಂಘಟನೆಗಳ ಜತೆಗೆ ಗ್ರಾಮಸ್ಥರೂ ಧ್ವನಿಗೂಡಿಸಿದ್ದರು. ಇದರಿಂದ ಎಚ್ಚೆತ್ತ ನಿತ್ಯಾನಂದ ಭೂ ಪರಿವರ್ತನೆಗೆ ಮುಂದಾಗಿದ್ದರು. ವರದಿ ಆಧರಿಸಿ ಕ್ರಮ: ಭೂ ಪರಿವರ್ತನೆ ಕೋರಿ ನಿತ್ಯಾನಂದ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಮನಗರ ತಹಸೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಸೂಚಿದ್ದರು. ಆ ವರದಿಯೂ ನಿತ್ಯಾನಂದಗೆ ವ್ಯತಿರಿಕ್ತವಾಗಿ ಬಂದಿದೆ. ಪೂರ್ವಾನುಮತಿ ಪಡೆಯದೇ ಬೃಹತ್ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆಶ್ರಮದಲ್ಲಿ ನಡೆಯುತ್ತಿರುವ ಧಾರ್ಮಿಕ ಆಚರಣೆಗಳ ಬಗ್ಗೆ ದೂರುಗಳಿವೆ. ಅಲ್ಲದೆ, ಕಾರ್ಯಚಟುವಟಿಕೆ ವಿರುದ್ಧ ನ್ಯಾಯಾಲಯದಲ್ಲೂ ದಾವೆ ಇರುವುದು ತಹಸೀಲ್ದಾರ್ ವರದಿಯಲ್ಲಿ ಉಲ್ಲೇಖವಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸದರಿ ಜಮೀನನ್ನು ಭೂ ಪರಿವರ್ತನೆ ಮಾಡುವುದರಿಂದ ಸ್ಥಳೀಯವಾಗಿ ಉಪದ್ರವ ಉಂಟಾಗುವ ಸಂಭವ ಇರುತ್ತದೆ ಎನ್ನುವುದನ್ನೂ ಪ್ರಸ್ತಾಪಿಸಲಾಗಿತ್ತು. ಈ ವರದಿ ಆಧರಿಸಿ ಜಿಲ್ಲಾಧಿಕಾರಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ವ್ಯವಹಾರ ನಡೆಸಿದ್ದರು.
ಸೂಕ್ತ ನಿರ್ಣಯಕ್ಕೆ ಸಲಹೆ: ಅರ್ಜಿದಾರರು ಶಾಸನಬದ್ಧವಾಗಿ ಭೂ ಪರಿವರ್ತನೆಗೆ ಅರ್ಜಿ ಹಾಕಿದಾಗ ಕರ್ನಾಟಕ ಭೂ ಕಂದಾಯ ಕಾಯ್ದೆ 1984ರ ಕಲಂ 95ರಲ್ಲಿನ ಅವಕಾಶಗಳಂತೆ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಇತರೆ ಸಾಧಕ-ಬಾಧಕ, ಅರ್ಜಿದಾರರ ಅರ್ಹತೆ, ಮಾನದಂಡ ಹಾಗೂ ಅವಶ್ಯಕ ಷರತ್ತುಗಳನ್ನು ಪೂರೈಸಿದ್ದಾರೆಯೇ ಅಥವಾ ಅರ್ಜಿಗೂ ಮುನ್ನ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಿ ನಿರ್ಣಯಕ್ಕೆ ಬರುವಂತೆ ಪ್ರಧಾನ ಕಾರ್ಯದರ್ಶಿ ನಿರ್ದೇಶಿಸಿದ್ದರು.
ಮಾತ್ರವಲ್ಲ, ಈ ಸಂಬಂಧ ತಹಸೀಲ್ದಾರ್ ವರದಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನಿರ್ದೇನವನ್ನು ಆಧರಿಸಿ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್, ನಿತ್ಯಾನಂದ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೀಗಾಗಿ ನಿತ್ಯಾಶ್ರಮ ಧ್ಯಾನಪೀಠದ ಜಾಗದ ತಗಾದೆಯಿಂದ ಹೊರಬರಲಾಗದಂತಾಗಿದೆ.