ಅರ್ಚಕರ ಸಮಸ್ಯೆ: ಪರಿಹಾರ ಅಗತ್ಯ
ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ,ಜು.17
ತಾಲೂಕಿನಲ್ಲಿ ಅರ್ಚಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರದ ಮುಜರಾಯಿ ಇಲಾಖೆ ಹಂತದಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಪ್ರಜ್ಞಾಪೂರ್ವಕ ಪ್ರಯತ್ನ ಅಗತ್ಯ ಎಂದು ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಹೇಳಿದರು.
ಇಲ್ಲಿನ ಸೋಮೇಶ್ವರ ದೇವಾಲಯ ಆವರಣದಲ್ಲಿ ದೊಡ್ಡಬಳ್ಳಾಪುರ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕ ಅಗಮಿಕರ ಸಂಘ ಮತ್ತು ಕರ್ನಾಟಕ ರಾಜ್ಯ ಅರ್ಚಕರ ಸಂಘದ ಸಹಯೋಗದಲ್ಲಿ ನಡೆದ ವಾರ್ಷಿಕ ಸಭೆ ಮತ್ತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಜರಾಯಿ ದೇವಾಲಯಗಳ ಅರ್ಚಕರಿಗೆ ವಾರ್ಷಿಕವಾಗಿ ನೀಡುವ 24 ಸಾವಿರ ಪೂಜಾ ಭತ್ಯೆಯನ್ನು 60 ಸಾವಿರಕ್ಕೇರಿಸಬೇಕು. ಎಲ್ಲ ಅರ್ಚಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅರ್ಚಕರ ನೇರ ನೇಮಕಾತಿ, ಸೇವಾ ಅವಧಿ ದಾಖಲೆ ತೆರೆಯುವುದು ಮತ್ತು ಮಕ್ಕಳಿಗೆ ಆಗಮ ಪಾಠಶಾಲೆಗಳನ್ನು ತೆರೆಯುವುದು ಸೇರಿದಂತೆ ಹತ್ತಾರು ಹಕ್ಕೊತ್ತಾಯಗಳನ್ನು ಸಂಘ ತಮ್ಮ ಗಮನಕ್ಕೆ ತಂದಿದ್ದು ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಆಗಬೇಕು ಎಂದರು.
ವಾರ್ಷಿಕ ಸಭೆಯಲ್ಲಿ ಅರ್ಚಕರ ಸಮಸ್ಯೆಗಳು ಮತ್ತು ಪರಿಹಾರಗಳು, ಅದಕ್ಕೆ ಕಂಡುಕೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಚಿಂತನೆ ನಡೆಸಲಾಯಿತು. ಅರ್ಚಕರ ವೃತ್ತಿಧರ್ಮ ಮತ್ತು ಶಿಸ್ತುಗಳ ಕುರಿತು ಅರಿವು ಮೂಡಿಸುವ ಪ್ರಯತ್ನವೂ ನಡೆಯಿತು.
ಮುಜರಾಯಿ ಇಲಾಖೆ ಸಹಾಯಕ ಆಯುಕ್ತರಾದ ಉಮಾ, ನಿಕಟಪೂವಂ ಆಯುಕ್ತರಾದ ಲಕ್ಷ್ಮೀ, ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಎನ್.ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ರಾಮತೀರ್ಥ, ತಾಲೂಕು ಮುಜರಾಯಿ ಅರ್ಚಕ ಆಗಮಿಕರ ಸಂಘದ ಅಧ್ಯಕ್ಷ ಸುರೇಶ್, ಗೌರವಾಧ್ಯಕ್ಷ ಶ್ರೀನಿವಾಸ ರಾಘವನ್, ತಾಲೂಕಿನ ಎಲ್ಲ ಮುಜರಾಯಿ ದೇವಾಲಯಗಳ ಅಧಿಕೃತ ಅರ್ಚಕರು ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.