ಆಧುನಿಕ ಆಹಾರ; ಆರೋಗ್ಯಕ್ಕೆ ಹಾನಿಕರ
ದೊಡ್ಡಬಳ್ಳಾಪುರ: ಆಧುನಿಕ ಕಾಲದ ಆಹಾರ ಪದ್ಧತಿಗಳು ಪಾರಂಪರಿಕ ಆಹಾರ ಪದ್ಧತಿಗಿಂತ ಭಿನ್ನವಾಗಿದ್ದು ಆರೋಗ್ಯಕ್ಕೆ ಮಾರಕವಾಗಿದೆ ಎಂದು ನಾಗದಳ ಸಂಘಟನೆಯ ಸಂಚಾಲಕ ಸಿ. ನಟರಾಜ್ ಹೇಳಿದರು.
ತಾಲೂಕು ಬಳಕೆದಾರರ ಹಿತರಕ್ಷಣಾ ಸಂಘ ಟ್ರಸ್ಟ್ ಮತ್ತು ನಾಗದಳ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ನಗರದ ಶಾಲಾ ಕಾಲೇಜುಗಳಲ್ಲಿ ನಡೆದ ಆರೋಗ್ಯಕಾರಿ ಆಹಾರ ಮತ್ತು ಜಂಕ್ಫುಡ್ ಕುರಿತ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೃತಕ ಆಹಾರ ವಸ್ತುಗಳ ಬಳಕೆ ತಗ್ಗಬೇಕು, ಜೊತೆಗೆ ಆಹಾರೋತ್ಪನ್ನಗಳನ್ನು ಹಾಳು ಮಾಡಬಾರದು. ಬಳಕೆಗೆ ಸಾಕಾಗುವಷ್ಟು ಮಾತ್ರ ಬಳಕೆ ಮಾಡಿಕೊಳ್ಳಬೇಕೇ ಹೊರತು, ಅನಗತ್ಯ ವ್ಯರ್ಥ ಮಾಡಬಾರದು.
ಪಾರಂಪರಿಕ ಭಕ್ಷ್ಯಗಳು ರುಚಿಯ ಜೊತೆಗೆ ಆರೋಗ್ಯವನ್ನೂ ಕೊಡುತ್ತಿದ್ದವು. ಆದರೆ ಇಂದಿನ ಕಾಲಘಟ್ಟದಲ್ಲಿ ಈ ರೀತಿಯ ಸತ್ವಯುತ ಆಹಾರ ನಮಗೆ ಸಿಗುತ್ತಿಲ್ಲ.
ಅತಿಯಾದ ರಾಸಾಯನಿಕಗಳ ಬಳಕೆ ಆಹಾರೋತ್ಪನ್ನಗಳಲ್ಲಿ ಕಂಡುಬರುತ್ತಿದೆ. ಅದರಲ್ಲೂ ಮುಖ್ಯವಾಗಿ ಜಂಕ್ಫುಡ್ಗಳಲ್ಲಿ ಇದರ ಪ್ರಮಾಣ ಹೆಚ್ಚು.
ದೊಡ್ಡ ದೊಡ್ಡ ನಗರಗಳಿಂದ, ಕಂಪನಿಗಳಿಂದ ಬರುತ್ತಿರುವ ಪಾನೀಯಗಳು, ಖಾದ್ಯ ವಸ್ತುಗಳು, ಚಾಕೋಲೆಟ್ಗಳು, ಬೇಕರಿ ತಿನಿಸುಗಳು, ಸಿಹಿತಿನಿಸುಗಳು ಸೇರಿದಂತೆ ಅನೇಕ ಆಹಾರ ವಸ್ತುಗಳು ಇಂದು ಆರೋಗ್ಯಕ್ಕೆ ಮಾರಕವಾಗಿವೆ. ಬಣ್ಣ ಬಣ್ಣಗಳಲ್ಲಿ ಆಕರ್ಷಣೀಯವಾಗಿ ದೊರೆಯುವ ಆ ವಸ್ತುಗಳು ದೇಹಾರೋಗ್ಯವನ್ನು ಅಷ್ಟೇ ಆಕರ್ಷಣೀಯವಾಗಿ ಹಾಳು ಮಾಡುತ್ತವೆ. ಹೀಗಾಗಿ ಈ ಬಗೆಯ ತಿನಿಸುಗಳ ಬಗ್ಗೆ ಎಚ್ಚರದಿಂದಿರಬೇಕು. ಮುಖ್ಯವಾಗಿ ಮಕ್ಕಳು ಈ ಬಗೆಯ ಆಹಾರಗಳಿಂದ ದೂರ ಇರಬೇಕು ಎಂದರು.
ತಾಲೂಕು ಬಳಕೆದಾರರ ಹಿತರಕ್ಷಣಾ ಸಂಘ ಟ್ರಸ್ಟ್ನ ಸಂ.ಸು.ಬದ್ರೀನಾಥ್ ಮಾತನಾಡಿ, ಆಹಾರ ವಸ್ತುಗಳು ನೈಸರ್ಗಿಕವಾಗಿರಬೇಕು.
ಕೃತಕ ಆಹಾರ ವಸ್ತುಗಳ ಬಳಕೆ ತಗ್ಗಬೇಕು, ಜೊತೆಗೆ ಆಹಾರೋತ್ಪನ್ನಗಳನ್ನು ಹಾಳು ಮಾಡಬಾರದು. ಬಳಕೆಗೆ ಸಾಕಾಗುವಷ್ಟು ಮಾತ್ರ ಬಳಕೆ ಮಾಡಿಕೊಳ್ಳಬೇಕೇ ಹೊರತು, ಅನಗತ್ಯ ವ್ಯರ್ಥ ಮಾಡಬಾರದು. ರಾಗಿ ಮುಂತಾದ ಕಿರುಧಾನ್ಯಗಳ ಬಳಕೆ ಹೆಚ್ಚಿಸಿಕೊಳ್ಳುವುದು ಆರೋಗ್ಯಕ್ಕೆ ಉತ್ತಮ ಎಂದರು.
ದೊಡ್ಡಬಳ್ಳಾಪುರದ ವಿದ್ಯಾಶಿಲ್ಪ ಶಾಲೆ, ನಿವೇದಿತಾ ಶಾಲೆ, ಕೊಂಗಾಡಿಯಪ್ಪ ಪ್ರೌಢಶಾಲೆ, ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಶಾಲೆ, ಎಂಎಸ್ವಿ ಶಾಲೆ, ಸ್ವಾಮಿ ವಿವೇಕಾನಂದ ಶಾಲೆ, ಎಂಎಬಿಎಲ್ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರಸ್ವತಿ ಪ್ರೌಢಶಾಲೆ, ಜ್ಞಾನಗಂಗಾ ಶಾಲೆ, ದೇವರಾಜ ಅರಸು ವಸತಿ ಶಾಲೆ, ಬಿಎಸ್ಎ ಪ್ರೌಢಶಾಲೆ, ನಳಂದ ಶಾಲೆ ಸೇರಿದಂತೆ ಹಲವು ಶಾಲೆಗಳಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಬಂಧಪಟ್ಟ ಶಾಲಾ ಕಾಲೇಜು ಪ್ರಾಂಶುಪಾಲರು ಹಾಗೂ ಬಳಕೆದಾರರ ಸಂಘ, ನಾಗದಳದ ಪದಾಧಿಕಾರಿಗಳು ಹಾಜರಿದ್ದರು.