ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಕರೆಗೆ ಕನಿಷ್ಠ ರು. 1.50 ಕೋಟಿ ಪರಿಹಾರ ನೀಡಿ

Mainashree
Updated On : 19 Jul 2014, 10:58 am

ರಾಮನಗರ: ಪ್ರತಿ ಎಕರೆಗೆ ಕನಿಷ್ಠ ರು.1.50 ಕೋಟಿ ಪರಿಹಾರ ನೀಡಿದ ಹೊರತು ನೈಸ್ ರಸ್ತೆಗೆ ಜಾಗ ನೀಡುವ ಪ್ರಶ್ನೆಯೇ ಇಲ್ಲ ಎಂದು ತಾಲೂಕಿನ ಭೂ ಸಂತ್ರಸ್ತ ರೈತರು ತಮ್ಮ ದೃಢ ನಿರ್ಧಾರವನ್ನು  ಪ್ರಕಟಿಸಿದ್ದಾರೆ.  ನೈಸ್ ರಸ್ತೆಗೆ ಸ್ವಾಧೀನವಾಗುತ್ತಿರುವ ಭೂಮಿಗೆ ಬೆಲೆ ನಿಗದಿಪಡಿಸುವ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಬೆಲೆ ನಿಗದೀಕರಣ ಸಲಹಾ ಸಮಿತಿ ಸಭೆಯಲ್ಲಿ ರೈತರು ನಿಲುವು ಸ್ಪಷ್ಟಪಡಿಸಿದರು.   
ರಸ್ತೆಗಾಗಿ ತಾಲೂಕಿನ ಭೀಮೇನಹಳ್ಳಿ ಮತ್ತು ತಾಳಗುಪ್ಪೆ ಗ್ರಾಮದ ವಿವಿಧ ಸರ್ವೆ ನಂಬರುಗಳ ಜಮೀನು ಸ್ವಾಧೀನಕ್ಕೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಪರಿಹಾರ ವಿಷಯದಲ್ಲಿ ಸರ್ಕಾರ ಮತ್ತು ನೈಸ್ ಕಂಪೆನಿಯ ಮಾರ್ಗಸೂಚಿಗಳನ್ನು ಅಧಿಕಾರಿಗಳ ವಿವರಿಸಿದರು.  
ರಸ್ತೆಗೆ ಸ್ವಾಧೀನಪಡಿಸಲು ಉದ್ದೇಶಿಸಿರುವ ಜಮೀನು ಆಸುಪಾಸಿನಲ್ಲೇ ಇದ್ದರೂ ಪರಿಹಾರ ಧನದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಹೀಗೇಕೆ ಎಂದು ಪ್ರಶ್ನಿಸಿದ ರೈತರು, ಈ ವಿಷಯವಾಗಿ ಅಧಿಕಾರಿಗಳು ನೀಡಿದ ಉತ್ತರದಿಂದ ಅಸಮಾಧಾನಗೊಂಡರು.
ರು. 2.5 ಕೋಟಿ ಬೆಲೆ: ಸ್ವಾಧೀನಕ್ಕೆ ಉದ್ದೇಶಿಸಿರುವ ಜಮೀನು ಬೆಲೆಯು ಮಾರುಕಟ್ಟೆಯಲ್ಲಿ ಈಗಾಗಲೇ ಎಕರೆಗೆ ರು.1.5 ರಿಂದ 2.5 ಕೋಟಿವರೆಗೆ ಹೋಗಿದೆ. ಮಾರುಕಟ್ಟೆ ಬೆಲೆ ನೀಡಿದರಷ್ಟೇ ಜಾಗ ಬಿಡುತ್ತೇವೆ ಎಂದು ರೈತರು ಪುನರುಚ್ಚರಿಸಿದರು.   ಸಲಹಾ ಸಮಿತಿಯಲ್ಲಿ ತೀರ್ಮಾನ ಆದ ಬೆಲೆಯನ್ನು ಕೆಐಎಡಿಬಿ ಮತ್ತು ನೈಸ್ ಕಂಪನಿ ಒಪ್ಪುವುದಿಲ್ಲ. ಇದಕ್ಕೆ ಸಾಕಷ್ಟು ನಿದರ್ಶನಗಳಿಗೆ. ಸುಖಾಸುಮ್ಮನೆ ಮಾತುಕತೆ ನಡೆಸಿ, ಕಾಲ ಹರಣ ಮಾಡಬೇಡಿ ಎಂದು ರೈತರು ಛೇಡಿಸಿದರು.  
ಅಭಿಪ್ರಾಯ ದಾಖಲು: ಬೆಲೆ ನಿಗದೀಕರಣ ಸಲಹಾ ಸಮಿತಿ ಅಧ್ಯಕ್ಷರಾಗಿರುವ ತಮ್ಮದು ರೈತರ ಅಭಿಪ್ರಾಯ ಸಂಗ್ರಹಿಸುವ ಹೊಣೆಯಷ್ಟೇ ಎಂದು ಜಿಲ್ಲಾಧಿಕಾರಿ ಜಮಾದಾರ್ ಹೇಳಿದರು. ಅದರಿಂದ ಕೆರಳಿದ ರೈತರು ನಿಮ್ಮೊಂದಿಗೆ ಮಾತನಾಡಿ ಪ್ರಯೋಜನವೇನೆಂದು ವ್ಯಂಗ್ಯವಾಡಿ ಸಭೆಯಿಂದ ನಿರ್ಗಮಿಸಲು ಅಣಿಯಾದರು.  ರೈತರನ್ನು ಸಮಾಧಾನಪಡಿಸಿ ಸಭೆ ಮುಂದುವರೆಸುವಲ್ಲಿ ಅಧಿಕಾರಿಗಳು ಸಫಲರಾದರು. ನಂತರ ಮಾತನಾಡಿದ ನೈಸ್ ಪ್ರತಿನಿಧಿಗಳು, ಸ್ವಾಧೀನವಾಗುವ ಪ್ರತಿ 10 ಗುಂಟೆ ಜಮೀನಿಗೆ ಅಭಿವೃದ್ಧಿಪಡಿಸಲಾದ 1200 ಚದರ ಅಡಿಯ ತಲಾ 1 ನಿವೇಶನ ನೀಡುವುದಾಗಿ ಹೇಳಿದರು.
ಷಡ್ಯಂತ್ರ: ಈ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದರು. ಇದೇ ವೇಳೆ ಗೊತ್ತುಪಡಿಸಲಾದ ಜಾಗಕ್ಕಿಂತ ಹೆಚ್ಚು ವಿಸ್ತೀರ್ಣದ ಜಮೀನು ಸ್ವಾಧೀನಕ್ಕೆ ಷಡ್ಯಂತ್ರ ನಡೆದಿರುವುದನ್ನು ರೈತರು ಬಹಿರಂಗಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement