ವೀರಶೈವ ಧರ್ಮಕ್ಕೆ ಸಮಾನ ಅವಕಾಶ ಕಲ್ಪಿಸಿದ ಕೀರ್ತಿ
ನೆಲಮಂಗಲ: ಮಹಿಳೆಯರಿಗೆ, ಎಲ್ಲ ಜಾತಿ ವರ್ಗಗಳಿಗೆ 12ನೇ ಶತಮಾನದಲ್ಲೆ ಸಮಾನ ಅವಕಾಶ ಕಲ್ಪಿಸಿದ ಕೀರ್ತಿ ವೀರಶೈವ ಧರ್ಮಕ್ಕೆ ಸಲ್ಲುತ್ತದೆ ಎಂದು ಕಾಲುವೆ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ಭಾನುವಾರ ಪಟ್ಟಣದ ಕವಾಡಿ ಮಠದ ಶ್ರೀ ರುದ್ರೇಶ್ವರ ಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶ್ರೀ ರುದ್ರೇಶ್ವರ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ತರಗತಿಗಳಲ್ಲಿ ಹೆಚ್ಚು ಅಂಕ ಪಡೆದ ವೀರಶೈವ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಆಧುನಿಕತೆಯಿಂದ ವಿದ್ಯಾರ್ಥಿಗಳಿಗೆ ಮೊಬೈಲ್, ಅಶ್ಲೀಲ ಚಿತ್ರಗಳು ಸುಲಭವಾಗಿ ದೊರೆಯುತ್ತಿದ್ದು, ಇದರ ಬಗ್ಗೆ ಪೋಷಕರು ಎಚ್ಚರವಹಿಸಬೇಕು ಎಂದರು.
ಮಹಾಸಭಾದ ರಾಜ್ಯ ಅಧ್ಯಕ್ಷ ಎನ್. ತಿಪ್ಪಣ್ಣ ಮಾತನಾಡಿ, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಬೆಳೆಯುವ ಗಿಡಕ್ಕೆ ನೀರೆರೆದಂತೆ, ವಿದ್ಯಾರ್ಥಿಗಳು ಇಷ್ಟಕ್ಕೆ ತೃಪ್ತರಾಗದೆ ನಿರಂತರ ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಂಡಾಗ ಸಾರ್ಥಕತೆ ದೊರೆಯುತ್ತದೆ. ಪ್ರತಿಭಾವಂತರಾದ ನೀವು ನಿಮ್ಮ ಮನೆ, ಸಮಾಜ, ದೇಶಕ್ಕೆ ನೆರಳಾಗಬೇಕು. ಪ್ರತಿಯೊಬ್ಬರು ವಿದ್ಯಾಭ್ಯಾಸಕ್ಕೆ ಪ್ರಾತಿನಿಧ್ಯ ನೀಡುವ ಮೂಲಕ ದೇಶದಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ ಅಕ್ಷರ ಸಂಪತ್ತು ಭರಿತ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಕಂಬಾಳು ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಾಸಭಾದ ಜಿಲ್ಲಾ ಅಧ್ಯಕ್ಷ ಎನ್.ಎಸ್. ನಟರಾಜು, ಉಪಾಧ್ಯಕ್ಷ ಎನ್.ಬಿ.ದಯಾಶಂಕರ್ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.
ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ವಾಗೀಶ್ ಪ್ರಸಾದ್, ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಸುವರ್ಣ ಚನ್ನಣ್ಣ, ಉಪಾಧ್ಯಕ್ಷೆ ಮಧುರಾ ಅಶೋಕ್, ಮಂಜುಳಾ ಕಿರಣ್, ಪುರಸಭೆ ಮಾಜಿ ಅಧ್ಯಕ್ಷ ಆರ್.ಉಮಾಶಂಕರ್, ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಮಂಜುನಾಥ್ ವೇದಿಕೆಯಲ್ಲಿದ್ದರು. ತಾಲೂಕು ಘಟಕ ಅ.ಭಾ.ವೀ.ಮ.ಸಭಾ ಅಧ್ಯಕ್ಷ ಗಟ್ಟಿ ಬೈರಪ್ಪ, ಜಿಲ್ಲಾ ಸಂಘದ ಕಾರ್ಯದರ್ಶಿ ದಯಾಶಂಕರ್ , ರಾಜ್ಯ ಘಟಕದ ಉಪಾಧ್ಯಕ್ಷೆ ಮಧುರಾ ಅಶೋಕ್, ಕಾರ್ಯದರ್ಶಿ ಸುವರ್ಣ ಚನ್ನಣ್ಣ , ವಾಗೀಶ್ ಪ್ರಸಾದ್, ಕೋಶಾಧ್ಯಕ್ಷೆ ಸುನಂದ ಗಿರೀಶ್, ರಾಜಮ್ಮ ಇದ್ದರು.