ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಿಕ್ಷಣ ಇಲಾಖೆಯಲ್ಲಿ ಸುಧಾರಿತ ನಿಯಮಾವಳಿ ಜಾರಿ ಅನಿವಾರ್ಯ

Vishwanath S
Updated On : 21 Jul 2014, 12:47 pm

ದೊಡ್ಡಬಳ್ಳಾಪುರ: ಶಿಕ್ಷಣ ಇಲಾಖೆಯಲ್ಲಿ ಬಿಇಓ, ಡಿಡಿಪಿಐ ಸೇರಿದಂತೆ ಅಧಿಕಾರಸ್ಥ ಹುದ್ದೆಯಲ್ಲಿರುವ ಅಧಿಕಾರಿಗಳು ಒಂದೇ ಸ್ಥಳದಲ್ಲಿ 3 ವರ್ಷಕ್ಕಿಂತ ಮೇಲ್ಪಟ್ಟು ಕಾರ್ಯನಿರ್ವಹಿಸಲು ಅವಕಾಶ ಕೊಡಬಾರದು. ಇದಕ್ಕೆ ಪೂರಕವಾದ ಕಾನೂನು ತಿದ್ದುಪಡಿ ಮತ್ತು ನಿಯಮಾವಳಿ ಜಾರಿಗೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ವಿಧಾನಪರಿಷತ್ತಿನ ಉಪಸಭಾಪತಿ ಪುಟ್ಟಣ್ಣ ಹೇಳಿದರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಶನಿವಾರ ತಾಲೂಕಿನ ಖಾಸಗಿ ಶಾಲೆಗಳ ಆಡಳಿತ ಮಂಡಲಿ ಮತ್ತು ವಿವಿಧ ಶಿಕ್ಷಕರ ಸಂಘಗಳ ನೇತೃತ್ವದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಇಲಾಖೆ ವ್ಯಾಪ್ತಿಯ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ 5 ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ವರ್ಗಾವಣೆಗೆ ನಿಯಮಾವಳಿ ರೂಪಿಸಬೇಕಿದೆ. ಇಂದು ಸರ್ಕಾರ ಅನೇಕ ಕೆಲಸಗಳನ್ನು ಶಿಕ್ಷಕರ ಹೆಗಲಿಗೆ ವಹಿಸಿದೆ. ಸಿಸಿಇಯಿಂದ ಹಿಡಿದು ಹಲವು ಕಾರ್ಯಗಳನ್ನು ಶಿಕ್ಷಕರಿಂದಲೇ ಮಾಡಿಸಿಕೊಳ್ಳುವ ಸರ್ಕಾರ ಶಿಕ್ಷಕರಿಗೆ ಪಾಠ ಮಾಡೋದನ್ನು ಬಿಟ್ಟು ಉಳಿದೆಲ್ಲ ಮಾಡಿ ಎನ್ನುವಂತೆ ಒತ್ತಡ ಹೇರುತ್ತಿದೆ. ಶಿಕ್ಷಕರಿಗೂ ಕೂಡ ಇದೆಲ್ಲ ಹೊರೆಯಾಗಿ ಪರಿಣಮಿಸಿದೆ. ಸರ್ಕಾರ ಈ ಬಗ್ಗೆ ಚಿಂತಿಸಬೇಕು. ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಗುಮಾಸ್ತರ ಕೆಲಸ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಗಂಭೀರ ಸ್ವರೂಪದ ಹೋರಾಟಕ್ಕೂ ಸಿದ್ಧ ಎಂದರು.
ಕೃತಜ್ಞತೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಸತತ 3ನೇ ಬಾರಿಗೆ ಸದಸ್ಯರಾಗಿ ಚುನಾಯಿಸಿದ ಶಿಕ್ಷಕ ಮತದಾರರಿಗೆ ಪುಟ್ಟಣ್ಣ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಖಾಸಗಿ ಶಾಲಾ ಆಡಳಿತ ಮಂಡಲಿ ಒಕ್ಕೂಟದ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಎ.ಸುಬ್ರಹ್ಮಣ್ಯ, ನಗರಸಭಾ ಸದಸ್ಯ ಕೆ.ಜಿ.ರಘುರಾಂ, ಹಿರಿಯ ಅಧ್ಯಾಪಕ ಸಿ.ರಾಮಯ್ಯ, ತಾ.ಪಂ ಸದಸ್ಯ ಡಾ.ವಿಜಯಕುಮಾರ್, ಒಕ್ಕಲಿಗರ ಸಂಘದ ನಿರ್ದೇಶಕ ಮುನೇಗೌಡ, ಶಿಕ್ಷಕ ಮುಖಂಡರಾದ ಕೃಷ್ಣಮೂರ್ತಿ, ಮಂಜುನಾಥ್ ಜಟ್ಟಯ್ಯ, ಸಿದ್ಧಗಂಗಾ, ಮಲ್ಲಿಕಾರ್ಜುನರೆಡ್ಡಿ, ಕರ್ನಾಟಕ ರಾಜ್ಯ ಪ್ರಾಂಶುಪಾಲರ ಸಂಘ, ತಾ.ಕರ್ನಾಟರ ರಾಜ್ಯ ಪ್ರೌಡಶಾಲಾ ಸಹ ಶಿಕ್ಷಕರ ಸಂಘ, ತಾ.ಕರ್ನಾಟಕ ರಾಜ್ಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಕರ್ನಾಟಕ ರಾಜ್ಯ ಉಪನ್ಯಾಸಕರ ಸಂಘ, ದೊಡ್ಡಬಳ್ಳಾಪುರ ತಾಲೂಕು ಖಾಸಗಿ ಶಾಲಾ ಆಡಳಿತ ಮಂಡಲಿಗಳ ಒಕ್ಕೂಟ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement