ಹೊಸ ಅನ್ವೇಷಣೆಗೆ ಮುಕ್ತವಾಗಿ ತೆರೆದುಕೊಳ್ಳಿ
ಬೆಂಗಳೂರು: ವಿದ್ಯಾರ್ಥಿಗಳು ಹೊಸ ಆಲೋಚನೆ ಮತ್ತು ಅನ್ವೇಷಣೆಗಳಿಗೆ ಮುಕ್ತವಾಗಿ ತೆರೆದುಕೊಳ್ಳಬೇಕೆಂದು ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಪ್ರಧಾನ ಸಂಶೋಧನಾ ವಿಜ್ಞಾನಿ ಡಾ.ಎಸ್.ಎನ್.ಓಂಕಾರ್ ಕಿವಿಮಾತು ಹೇಳಿದರು. ಭಾನುವಾರ ಬೇಸ್ ಸಂಸ್ಥೆ ಏರ್ಪಡಿಸಿದ್ದ ಗ್ಯ್ರಾಂಡ್ಸ್ಲ್ಯಾಮ್ 2014, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ವೃತ್ತಿ ಶಿಕ್ಷಣ ಪಡೆಯುವ ಹಂತದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಈ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಅಡೆತಡೆಗಳನ್ನು ಮೀರಿ ಗುರಿ ತಲುಪಬೇಕೆಂದು ತಿಳಿಸಿದರು. ಕ್ವಾಲಿಟಿ ಎಂಜಿನಿಯರಿಂಗ್ ನಿರ್ದೇಶಕ ಪಿ.ಎಸ್.ರವೀಂದ್ರನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ಬೇಸ್ ಶೈಕ್ಷಣಿಕ ತಳಹದಿಯನ್ನು ಹಾಕಿದೆ. ಇನ್ನು ಅವರು ಸಾಧನೆ ಉತ್ತುಂಗವನ್ನು ಏರಬೇಕು. ಎಡಬಿಡದೆ ಗುರಿಯ ಹಿಂದೆ ಸಾಗಬೇಕು ಎಂದರು. ಜೆಇಇ, ಸಿಇಟಿ, ಎಐಐಎಂಎಸ್, ಜೆಐಪಿಎಂಇಆರ್, ಎನ್ಇಇಟಿ, ಕೆವಿಪಿವಾಯ್, ಎನ್ಟಿಎಸಿ, ಒಲಂಪಿಯಾಡ್ಸ್ ಸ್ಪರ್ಧೆಗಳಲ್ಲಿ ಉತ್ತಮ ಅಂಕ ಗಳಿಸಿದ 300 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿಂದುಳಿದ ವರ್ಗಗಳಿಂದ ಬಂದ ವಿದ್ಯಾರ್ಥಿಗಳಿಗೆ ತಪಸ್ ಯೋಜನೆಯಲ್ಲಿ ತರಬೇತಿ ನೀಡಲಾಗಿತ್ತು. ಸಾಧನೆ ಮಾಡಿರುವ ತಪಸ್ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ದೊಡ್ಡಬಳ್ಳಾಪುರದ ನೇಕಾರರ ಕುಟುಂಬ ನನ್ನದು. ತಪಸ್ ತರಬೇತಿ ಪಡೆದು ಎಂಜಿನಿಯರಿಂಗ್ಗೆ ಆಯ್ಕೆಯಾಗಿದ್ದೇನೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ನನಗೆ ಪ್ರಾರಂಭದಲ್ಲಿ ಪಾಠ ಅರ್ಥ ಮಾಡಿಕೊಳ್ಳುವುದು ಕಷ್ಟ ಎನಿಸುತ್ತಿತ್ತು. ಸಂಸ್ಥೆಯ ಶಿಕ್ಷಕರು ಗುರಿ ತಲುಪುವಲ್ಲಿ ನೆರವಾದರು.
ಟಿ ಎಚ್.ಸಿ. ಪ್ರಜ್ವಲ್, ವಿದ್ಯಾರ್ಥಿ