ಆನೇಕಲ್ ಬಂದ್ ಬಹುತೇಕ ಸಂಪೂರ್ಣ
ಆನೇಕಲ್ಲು: ಆನೇಕಲ್ ಟೌನ್ ಬಿಜೆಪಿ ಘಟಕ ಅತ್ಯಾಚಾರ ತಡೆ ವಿರುದ್ಧ ರಾಜ್ಯ ಸರ್ಕಾರದ ನಿರ್ಲಕ್ಷತನವನ್ನು ಖಂಡಿಸಿ ಕರೆ ನೀಡಿದ್ದ ಆನೇಕಲ್ ಬಂದ್ ಬಹುತೇಕ ಯಶಸ್ವಿಯಾಯಿತು.
ಬೆಳಗ್ಗೆ 6 ಗಂಟೆಗೆ ಜಮಾಯಿಸಿದ ಕಾರ್ಯಕರ್ತರು ಬಸ್ ನಿಲ್ದಾಣ, ಡಿಪೋ, ದೇವರ ಕೊಂಡಪ್ಪ ವೃತ್ತ ಹಾಗೂ ತಿಲಕ್ ವೃತ್ತದಲ್ಲಿ ಪ್ರತಿಭಟನೆ ಶುರು ಮಾಡಿದರು. ಬಸ್ ಡಿಪೋನಿಂದ ಯಾವುದೇ ವಾಹನಗಳು ಹೊರಬರಲಿಲ್ಲ. ಶಾಲಾ ಕಾಲೇಜುಗಳು, ಕಚೇರಿ, ಫ್ಯಾಕ್ಟರಿ ಹಾಗೂ ಗಾರ್ಮೆಂಟ್‌ಗೆ ತೆರಳುವ ಸಾವಿರಾರು ಜವರು ವಿವಿಧ ವೃತ್ತಗಳಲ್ಲಿ ಪರ್ಯಾಯ ವಾಹನಗಳಿಗಾಗಿ ಕಾದು ನಿಂತಿದ್ದದು ಸಾಮಾನ್ಯವಾಗಿತ್ತು. ಉಳ್ಳವರು ಕಾರಿನಲ್ಲಿ ತೆರಳಿದರೆ ಕೆಲವರು ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದರು. ಕೇವಲ ಒಂದೆರಡು ಘಂಟೆಗೆ ಮುಗಿಯಬಹುದು ಎನ್ನಲಾಗಿದ್ದ ಪ್ರತಿಭಟನೆ ಮಧ್ಯಾಹ್ನದವರೆವಿಗೂ ಮುಂದುವರಿಯಿತು. 12 ಗಂಟೆ ಸುಮಾರಿಗೆ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ನಂತರ ವಾಹನಗಳು ಚಾಲನೆಗೊಂಡವು. ಸಂಜೆ ನಂತರ ಅಂಗಡಿ ಮುಂಗಟ್ಟುಗಳ ಮಾಮೂಲಿನಂತ ತೆರೆದವು.
ಬಿಗಿ ಬಂದೋಬಸ್ತ್: ಆನೇಕಲ್ ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಬಿಜೆಪಿ ಕಾರ್ಯಕರ್ತರಿಗಿಂತ ನಾಲ್ಕು ಪಟ್ಟು ಹೆಚ್ಚು ಪೊಲೀಸರು ಬೀಡುಬಿಟ್ಟಿದ್ದರು. ಸಿಆರ್‌ಪಿಯ 8 ಪ್ಲಟೂನ್‌ಗಳು, 5 ವೃತ್ತ ನಿರೀಕ್ಷಕರು, 10 ಪಿಎಸ್ಸೈಗಳು ಹಾಗೂ ಸಿಬ್ಬಂದಿ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತಿನಲ್ಲಿ ತೊಡಗಿದ್ದರು. ಸ್ವಯಂ ಪ್ರತಿಭಟನಾಕಾರರೇ ಪೊಲೀಸ್ ಸಂಖ್ಯೆಯನ್ನು ನೋಡಿ ನಿಬ್ಬೆರಗಾಗಿದ್ದರು. ಬೆಂಗಳೂರು ಗ್ರಾಮಾಂತರ ಎಸ್ಪಿ ರಮೇಶ್ ಬಾನೋಟ್, ಡಿವೈಎಸ್ಪಿ ಬಲರಾಮೇಗೌಡ, ವೃತ್ತ ನಿರೀಕ್ಷಕರಾದ ಕಿಶೋರ್, ರಾಜೇಂದ್ರ ಹಾಗೂ ಎರವಲು ಸೇವೆಯ ಹಲವಾರು ಅಧಿಕಾರಿಗಳಿದ್ದರು.
ಬೆಳಗ್ಗೆ 6ಕ್ಕೆ ಹಾಜರಾದ ಮಾಜಿ ಸಚಿವ: ಮಾಜಿ ಸಚಿವ ಎ. ನಾರಾಯಣಸ್ವಾಮಿ ಬೆಳಗ್ಗೆ 6 ಗಂಟೆಗೆ ಪ್ರತಿಭಟನಾ ಸ್ಥಳಕ್ಕೆ ಬಂದು ಎಲ್ಲ ಕಾರ್ಯಕರ್ತರಿಗೆ ಕರೆ ಮಾಡಿ ದೇವರ ಕೊಂಡಪ್ಪ ವೃತ್ತಕ್ಕೆ ಬರಲು ಸೂಚಿಸಿದರು. ನಾಯಕನೇ ಬಂದ ನಂತರ ಎಚ್ಚೆತ್ತ ಕಾರ್ಯಕರ್ತರು ಬೇಗನೆ ಬಂದರಾದರೂ ಬಂದ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಬೆಳಗ್ಗೆ 7 ಗಂಟೆ ನಂತರವೇ. ಬಿಜೆಪಿ ಬಂದ್‌ನಿಂದಾಗಿ ಯಾರಿಗಾದರೂ ತೊಂದರೆಯಾಗಿದ್ದರೆ ಕ್ಷಮೆ ಕೇಳುತ್ತೇವೆ.
ತಾಲೂಕಿನ ಯಲ್ಲಮ್ಮನ ಪಾಳ್ಯದ ವಸತಿ ಶಾಲೆಯಲ್ಲಿ ಬಾಲಕಿಗೆ ಆದ ಅನ್ಯಾಯ ಹಾಗೂ ಸೂರ್ಯನಗರ ವಸತಿ ಶಾಲಾ ಆವರಣದಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಬಗ್ಗೆ ಪಕ್ಷದ ವತಿಯಿಂದ ಧರಣಿ ನಡೆಸಿದ್ದೆವು. ಕಾನೂನು ಜಾರಿಯಲ್ಲಿ ತೊಡಕಾಗಬಾರದು ಹಾಗೂ ತಾಲೂಕಿನಲ್ಲಿ ಇಂತಹ ಯಾವುದೇ ಘಟನೆ ಮರುಕಳಿಸಬಾರದೆಂಬ ದೂರಾಲೋಚನೆಯಿಂದ ಬಂದ್ ನಡೆಸಲಾಯಿತು ಎಂದು ಬ್ಯಾಗಡದೇನಹಳ್ಳಿ ಗ್ರಾಪಂ ಅಧ್ಯಕ್ಷ ಶಂಕರ್ ತಿಳಿಸಿದರು.
ನಾಚಿಕೆಗೆಟ್ಟ ಸರ್ಕಾರ ರಾಜಿನಾಮೆ ನೀಡಿ ತೊಲಗಲಿ: ಎ. ನಾರಾಯಣಸ್ವಾಮಿ
ಆನೇಕಲ್ಲು: ರಾಜ್ಯದ ಮುಖ್ಯ ಮಂತ್ರಿಯೊಬ್ಬರು ನೀಡಿರುವ ಹೇಳಿಕೆ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣ ಮರಕಳಿಸುತ್ತಿದ್ದು ಸರ್ಕಾರ ನಿಯಂತ್ರಣ ಹಾಗೂ ನಿಭಾಯಿಸುವಲ್ಲಿ ವಿಫಲವಾಗಿರುವುದರಿಂದ ಜನತೆ ರೊಚ್ಚಿಗೇಳುವ ಮುನ್ನ ರಾಜಿನಾಮೆ ನೀಡಿ ತೊಲಗಬೇಕೆಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಅವರು ಆನೇಕಲ್ ಬಿಜೆಪಿ ಘಟಕ ಕರೆ ನೀಡಿದ್ದ ಆನೇಕಲ್ ಬಂದ್ ಪ್ರಯುಕ್ತ ದೇವರಕೊಂಡಪ್ಪ ವೃತ್ತದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರನ್ನುದ್ದೇಶಿಸಿ ಮಾತನಾಡಿ ಅತ್ಯಾಚಾರ ಪ್ರಕರಣ ನಂತರ ಗೃಹ ಸಚಿವ ಹಾಗೂ ಮುಖ್ಯ ಮಂತ್ರಿಗಳು ನೀಡುತ್ತಿರುವ ಹೇಳಿಕೆ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.
ತಾಲೂಕು ಅಧ್ಯಕ್ಷ ಬಿ.ಜಿ. ಆಂಜಿನಪ್ಪ ಮಾತನಾಡಿ ಪೊಲೀಸರು, ಶಾಲಾ ಆಡಳಿತ ಮಂಡಳಿಯವರು, ಪೋಷಕ ಸಮಿತಿಯವರನ್ನು ಒಂದು ವೇದಿಕೆಗೆ ಕರೆಸಿ ಮಾಸಿಕ ಸಭೆ ನಡೆಸಬೇಕು. ಶಾಲಾ ಆಡಳಿತ ಮಂಡಳಿಯ ನೇಮಕಾತಿಯಲ್ಲಿ ಸೂಕ್ತ ಮಾರ್ಪಾಡು ವೈಯುಕ್ತಿಕ ಮಾಹಿತಿಯನ್ನು ಶಾಲೆ ಪಡೆದು ಅವಶ್ಯವಿದ್ದಲ್ಲಿ ಠಾಣೆಗೆ ಮಾಹಿತಿ ನೀಡಬೇಕು ಎಂಬ ಸಲಹೆ ನೀಡಿದರು. ಜಿಪಂ ಸದಸ್ಯ ಜೆ. ನಾರಾಯಣಪ್ಪ, ಮುಖಂಡರಾದ ದಿಣ್ಣೂರು ರಾಜು, ಪ್ರಸನ್ನಕುಮಾರ್, ತೇಜಸ್ವಿನಿ ನಟರಾಜು, ಸುಲೋಚನಾ, ಜಯಣ್ಣ ಮತಾನಾಡಿದರು.
ರಾಜ್ಯ ಸರ್ಕಾರದ ಪ್ರತಿಕೃತಿಯನ್ನು ಸುಡಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಾಟನಾ ಸೂಚಕ ಫಲಕಗಳನ್ನು ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಗೃಹ ಮಂತ್ರಿ ಜಾರ್ಜ್ ಅವರ ರಾಜಿನಾಮೆಗೆ ಆಗ್ರಹಿಸಿದರು.