ತಾಲೂಕಿಗೆ ಪಾಲಿಕೆ ಕಸ ಬೇಡವೇ ಬೇಡ
ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ,ಜು.21
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬಿಬಿಎಂಪಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸುತ್ತಿರುವ ವ್ಯವಸ್ಥಿತ ಹುನ್ನಾರ ಖಂಡಿಸಿ ಮತ್ತು ಗೋವಾದಲ್ಲಿ ಕನ್ನಡಿಗರ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಕುತಂತ್ರ ನಡೆಸಿರುವ ಗೋವಾ ಸರ್ಕಾರದ ಧೋರಣೆ ವಿರೋಧಿಸಿ ಇಲ್ಲಿನ ಕನ್ನಡ ಜಾಗೃತ ಪರಿಷತ್ತಿನ ನೇತೃತ್ವದಲ್ಲಿ ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ದೊಡ್ಡಬಳ್ಳಾಪುರವನ್ನು ಬಿಬಿಎಂಪಿಯ ಕಸದ ತೊಟ್ಟಿಯಾಗಿ ಸರ್ಕಾರ ಪರಿಗಣಿಸಿದಂತಿದೆ. ಈಗಾಗಲೇ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ, ಸಾಸಲು ಹೋಬಳಿ ಮತ್ತು ಮಧುರೆ ಹೋಬಳಿಗಳಲ್ಲಿ 4 ಪ್ರತ್ಯೇಕ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸುವ ಹುನ್ನಾರ ನಡೆಸಿದೆ. ಇದು ಸ್ಥಳೀಯ ಪರಿಸರ ಮತ್ತು ಜನಜೀವನದ ಭವಿಷ್ಯಕ್ಕೆ ಕೊಡಲಿಪೆಟ್ಟು ನೀಡಿದಂತಾಗಿದೆ. ಈಗಾಗಲೇ ಸ್ಥಳೀಯರು ಮತ್ತು ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ ಸರ್ಕಾರ ತನ್ನ ನಿಲುವು ಬದಲಿಸದೆ ಉದ್ಧಟತನ ತೋರಿರುವುದು ಖಂಡನೀಯ. ಸ್ಥಳೀಯ ಶಾಸಕರು ಈ ಬಗ್ಗೆ ಗಂಭೀರ ನಿರ್ಧಾರ ಕೈಗೊಳ್ಳುವ ಮೂಲಕ ದೊಡ್‌ಡಬಳ್ಳಾಪುರ ಕಸದ ಬೀಡಾಗುವುದನ್ನು ತಪ್ಪಿಸಬೇಕು. ಈಗಾಗಲೇ ಗುಂಡ್ಲಹಳ್ಳಿ ಸುತ್ತಮುತ್ತಲ ಬದುಕು ಕಸದಿಂದ ನರಕಸದೃಶವಾಗಿದೆ. ಮತ್ತಷ್ಟು ಆ ಬಗೆಯ ವಿಷಕೂಪಗಳು ಸೃಷ್ಟಿಯಾಗುವುದು ಬೇಡ ಎಂದರು. ಗೋವಾ ಧೋರಣೆ ಖಂಡನೀಯ: ಕನ್ನಡಿಗ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಮೂಲಕ ಗೋವಾ ಸರ್ಕಾರ ಉದ್ಧಟತನ ತೋರುತ್ತಿದೆ. ಕನಿಷ್ಠ ಮಾನವೀಯತೆಯನ್ನೂ ಪ್ರದರ್ಶಿಸದೆ ಮನೆಗಳನ್ನು ಕೆಡವಿಹಾಕಿರುವ ಸರ್ಕಾರ ಪೊಲೀಸರನ್ನು ಮುಂದಿಟ್ಟುಕೊಂಡು ದಬ್ಬಾಳಿಕೆ ಮಾಡುತ್ತಿದೆ. ಗೋವಾ ಸರ್ಕಾರದ ಉದ್ಧಟತನ ನೋಡಿಯೂ ನೋಡದಂತೆ ಸುಮ್ಮನಿರುವ ಕರ್ನಾಟಕ ಸರ್ಕಾರದ ಧೋರಣೆ ಕೂಡ ಖಂಡನಾರ್ಹ. ಈ ಹಿಂದೆ ಕೂಡ 2004ರಲ್ಲಿ ಬೈನಾ ಬೀಚ್‌ನಲ್ಲಿ ಕನ್ನಡಿಗರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಗೋವಾ ಮಾಡಿತ್ತು. ಈಗ ಮತ್ತೆ ಯಾವುದೇ ಮುನ್ಸೂಚನೆ ನೀಡದೆ ನಿರಾಶ್ರಿತರನ್ನಾಗಿಸಿದೆ. ಜೊತೆಗೆ ಚಳಿ-ಮಳೆಯೆನ್ನದೆ ಬೀದಿಗೆ ದಬ್ಬುವ ಮೂಲಕ ಅಮಾನವೀಯವಾಗಿ ನಡೆದುಕೊಂಡಿದೆ. ಈ ಕೂಡಲೇ ಗೋವಾ ಸರ್ಕಾರ ಸಂತ್ರಸ್ತ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಬೇಕು. ತನ್ನ ತಪ್ಪು ವರ್ತನೆಗೆ ಬೇಷರತ್ ಕ್ಷಮೆಯಾಚಿಸಬೇಕು. ತಪ್ಪಿದಲ್ಲಿ ಕರವೇ ವ್ಯಾಪಕ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ದೌರ್ಜನ್ಯ ಮತ್ತು ಅಸರ್ಭ ವರ್ತನೆ ಕೂಡ ಖಂಡನೀಯವಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಗೋವಾ ಸರ್ಕಾರದಿಂದ ವರದಿ ಕೇಳಬೇಕು. ನೆರೆ ರಾಜ್ಯಗಳೊಂದಿಗೆ ಸಂಬಂಧ ಕದಡುವ ಈ ಬಗೆಯ ಕೃತ್ಯಗಳಿಗೆ ಗೋವಾ ಸರ್ಕಾರ ಕಡಿವಾಣ ಹಾಕದಿದ್ದಲ್ಲಿ ಕರ್ನಾಟಕದಿಂದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಕನ್ನಡ ಜಾಗೃತ ಪರಿಷತ್ ಗೌ.ಅಧ್ಯಕ್ಷ ಜಿ.ಸತ್ಯನಾರಾಯಣ್, ಅಧ್ಯಕ್ಷ ಡಿ.ವಿ. ಅಶ್ವತ್ಥಪ್ಪ, ತ.ನ.ಪ್ರಭುದೇವ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕಜಾಪ ಮುಖಂಡರು ಭಾಗವಹಿಸಿದ್ದರು. ನಂತರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.