ನಿತ್ಯಾ ಪುರುಷತ್ವ ಪರೀಕ್ಷೆ: ಪುನರ್ ಪರಿಶೀಲನೆ ಅರ್ಜಿ ತಿರಸ್ಕೃತ
ಬೆಂಗಳೂರು: ತನ್ನನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಪುನರ್ಪರಿಶೀಲಿಸುವಂತೆ ಕೋರಿ ನಿತ್ಯಾನಂದ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಹಿರಿಯ ವಕೀಲರು ವಿಚಾರಣೆಗೆ ಹಾಜರಿಲ್ಲದಿದ್ದಾಗ ಅರ್ಜಿ ವಜಾಗೊಳಿಸಿದ್ದು, ಆದೇಶವನ್ನು ಪುನರ್ಪರಿಶೀಲಿಸುವಂತೆ ನಿತ್ಯಾನಂದನ ಪರ ವಕೀಲರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ಎಸ್. ಎನ್. ಸತ್ಯನಾರಾಯಣ ಅವರ ಪೀಠ, ಹಿಂದೆ ನೀಡಿದ್ದ ಆದೇಶಕ್ಕೆ ತಾವು ಬದ್ಧರಾಗಿದ್ದು ಆರೋಪಿ ಪುರುಷತ್ವ ಹಾಗೂ ಧ್ವನಿ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದೆ.
ಪ್ರಕರಣ ಹಿನ್ನೆಲೆ: ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಿತ್ಯಾನಂದನನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸುವಂತೆ ರಾಮನಗರ ಜೆಎಂಎಫ್ಸಿ ನ್ಯಾಯಾಲಯ ಈ ಹಿಂದೆ ಆದೇಶ ನೀಡಿತ್ತು. ಜೆಎಂಎಫ್ಸಿ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ನಿತ್ಯಾನಂದ ಹೈಕೋರ್ಟ್ ಮೆಟ್ಟಿಲೇರಿದ್ದನು. ನಿತ್ಯಾನಂದನ ಪರ ವಕೀಲರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಜೆಎಂಎಫ್ಸಿ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿ ಹಿಡಿದ ಏಕಸದಸ್ಯ ಪೀಠ ಜು.16ರಂದು ನಿತ್ಯಾ ಸಲ್ಲಿಸಿದ ಅರ್ಜಿ ವಜಾಗೊಳಿಸಿತ್ತು. ಕಾರು ಚಾಲಕ ಲೆನಿನ್, ತಮ್ಮ ವಿರುದ್ಧ ದಾಖಲಿಸಿದ್ದ ಲೈಂಗಿಕ ಕಿರುಕುಳ ಮತ್ತು ಬ್ಲ್ಯಾಕ್ ಮೇಲ್ ಪ್ರಕರಣ ರದ್ದುಪಡಿಸುವಂತೆ ಸಲ್ಲಿಸಿದ ಅರ್ಜಿ ಕೂಡ ವಜಾಗೊಂಡಿದೆ.