ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಂಗ್ಲ ಮಾತ್ರವಲ್ಲ, ಕನ್ನಡದಿಂದಲೂ ಚಂದದ ಬದುಕು: ಲಕ್ಷ್ಮಣರಾವ್

Mainashree
Updated On : 24 Jul 2014, 11:51 am

ರಾಮನಗರ: ಹೋರಾಟದ ಮೂಲಕ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕಾದಂತಹ ದುಃಸ್ಥತಿ ಎದುರಾಗಿರುವುದು ದುರದೃಷ್ಟಕರ ಎಂದು ಕವಿ ಬಿ. ಆರ್. ಲಕ್ಷ್ಮಣರಾವ್ ವಿಷಾದಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಬಿಡದಿಯ ಜ್ಞಾನವಿಕಾಸ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಕಸಾಪ ಶತಮಾನೋತ್ಸವ ಪ್ರಯಕ್ತ ಹಮ್ಮಿಕೊಂಡಿದ್ದ ಪಿ. ಲಂಕೇಶ್‌ರ ಸಂಕ್ರಾಂತಿ ಕೃತಿ ವಿಶ್ಲೇಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  
ಆಂಗ್ಲ ಭಾಷೆಯಿಂದ ಮಾತ್ರ ಭವಿಷ್ಯ ರೂಪಿಸಿಕೊಳ್ಳಬಹುದೆಂಬ ಹುಸಿ ನಂಬಿಕೆಯಿಂದ ಆಂಗ್ಲ ಭಾಷೆಯ ವ್ಯಾಮೋಹಕ್ಕೊಳಗಾಗಿದ್ದಾರೆ. ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿರುವ ಹಲವು ಮಂದಿ ಐಎಎಸ್, ಐಪಿಎಸ್ ಅಧಿಕಾರಿ, ವಿಜ್ಞಾನಿಗಳೂ ಆಗಿದ್ದಾರೆ. ಕನ್ನಡದಲ್ಲಿ ಕಲಿತರೂ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಇವರೇ ಸಾಕ್ಷಿಯಾಗಿದ್ದಾರೆ ಎಂದರು. ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಇಂದು 100 ವರ್ಷದ ಸಂಭ್ರಮದಲ್ಲಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಈ ಸಂದರ್ಭದಲ್ಲಾದರೂ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಪ್ರತಿಜ್ಞೆ ಸ್ವೀಕರಿಸಬೇಕಿದೆ ಎಂದು ಲಕ್ಷ್ಮಣರಾವ್ ಈ ಸಂದರ್ಭದಲ್ಲಿ ತಿಳಿಸಿದರು.
ಇಂದು ಕನ್ನಡ ಉಳಿದಿರುವುದು ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಕಸಾಪ ವತಿಯಿಂದ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಾವು ಎಷ್ಟೇ ಭಾಷೆಯನ್ನು ಕಲಿತರೂ ಮಾತೃ ಭಾಷೆಯನ್ನು ಕಡೆಗಣಿಸಬಾರದು ಎಂದರು. ಖ್ಯಾತ ಸಾಹಿತಿ ಪಿ.ಲಂಕೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದರೂ ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಅವರ ಲೇಖನಗಳಲ್ಲಿ ಶಾಂತತೆ, ಪ್ರಬುದ್ಧತೆ, ಸರಳತೆ ಕಾಣಬಹುದು ಎಂದ ಅವರು ಲಂಕೇಶರ ಜತೆ ಅವರಿಗಿದ್ದ ಒಡನಾಟವನ್ನು ಸ್ಮರಿಸಿದರು.
ಸಾಹಿತ್ಯ ಪರಿಷತ್ 100 ವರ್ಷದ ಸಂಭ್ರಮದ ಹೊತ್ತಿನಲ್ಲಿ ಹಮ್ಮಿಕೊಂಡಿರುವ ನೂರು ವರುಷ, ನೂರು ಸಾಹಿತಿಗಳು, ನೂರು ಕೃತಿಗಳ ಮಾಲಿಕೆ ಈ ಕಾರ್ಯಕ್ರಮವು ಗುಣಮಟ್ಟತೆಯನ್ನು ಉಳಿಸಿಕೊಂಡು ಹೋಗುವಂತಹ ಕೆಲಸ ಮಾಡಬೇಕೆಂದು ಶಿಕ್ಷಣ ಸಂಸ್ತೆ ಅಧ್ಯಕ್ಷ ಸಿ.ಎಂ.ಲಿಂಗಪ್ಪ ಕಿವಿಮಾತು ಹೇಳಿದರು.    
ಕಾರ್ಯಕ್ರಮದಲ್ಲಿ ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಪ್ರಾಂಶುಪಾಲ ಎಸ್. ಗೌರಿಶಂಕರಸ್ವಾಮಿ,  ಬಿಡದಿ ರೋಟರಿ ಸಂಸ್ಥೆಯ ಅಧ್ಯಕ್ಷ ಗಾಣಕಲ್ ನಟರಾಜು, ಕಸಾಪ ತಾಲೂಕು ಅಧ್ಯಕ್ಷರಾದ ಶಿವಲಿಂಗಯ್ಯ, ಬಿ.ಟಿ.ದಿನೇಶ್, ಪದಾಧಿಕಾರಿಗಳಾದ ಗಿರೀಶ್, ಎನ್.ಕಿರಣ್, ಶಿವಸ್ವಾಮಿ, ಕೃಷ್ಣ, ಚೌಪುಸ್ವಾಮಿ, ವಿನಯ್‌ಕುಮಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement