ಭಾರತ ಸೇವಾದಳ ಶಿಸ್ತಿನ ಅನ್ವರ್ಥ
ದೊಡ್ಡಬಳ್ಳಾಪುರ: ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಭಾರತ ಸೇವಾದಳದ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕುಗಳ ಶಿಕ್ಷಕರುಗಳಿಗಾಗಿ ಬ್ಯಾಂಡ್ ತರಬೇತಿ ಶಿಬಿರ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಗ್ರಾಮದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದಲ್ಲಿ ನಡೆಯಿತು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.ಅವರು ಮಾತನಾಡಿ, ಶಾಲಾ ಮಕ್ಕಳಲ್ಲಿ ಬ್ಯಾಂಡ್ ತರಬೇತಿ ನೀಡುವುದರಿಂದ ಮಕ್ಕಳಲ್ಲಿ ಶಿಸ್ತು ಮತ್ತು ಸಂಘಟನೆ, ಭಾವೈಕ್ಯತೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಕರು ಬ್ಯಾಂಡ್ ವಾದ್ಯ ತರಬೇತಿ ಹೊಂದುವುದು ಅಗತ್ಯ. ಅಲ್ಲದೆ ವಿದ್ಯಾರ್ಥಿಗಳನ್ನೂ ಈ ಹಂತದಲ್ಲಿ ತರಬೇತುಗೊಳಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಬಿ. ಜಿ. ಅಮರನಾಥ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಂ, ತಾಲೂಕು ಸೇವಾದಳದ ಸಂಘಟಕ ಸುರೇಶ್ ಉಪಸ್ಥಿತರಿದ್ದರು.
ಸಮಾರೋಪ: ಸಮಾರೋಪ ಸಮಾರಂಭದಲ್ಲಿ ರಾಜ್ಯ ಸೇವಾದಳದ ಕಾರ್ಯದರ್ಶಿ ಬಿ.ಸಿ. ವೆಂಕಟೇಶ್ ಮಾತನಾಡಿ, ಸೇವಾದಳ ಶಿಸ್ತಿನ ಅನ್ವರ್ಥ. ಪ್ರಾಥಮಿಕ ಹಂತದಿಂದ ಮನುಷ್ಯ ಶಿಸ್ತು ಮತ್ತು ದೇಶಪ್ರೇಮ ಬೆಳೆಸಿಕೊಳ್ಳಬೇಕಿದೆ. ಇಂದು ಸುಸಂಸ್ಕೃತ ಪ್ರಜೆಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸೇವಾದಳದ ಧ್ಯೇಯೋದ್ದೇಶಗಳ ಸಮರ್ಪಕ ಅನುಷ್ಠಾನ ಮುಖ್ಯ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಡಿ. ಸತ್ಯನಾರಾಯಣಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಚುಂಚೇಗೌಡ, ಎಪಿಎಂಸಿ ಅಧ್ಯಕ್ಷ ತಿ. ರಂಗರಾಜು, ಸದಸ್ಯ ಗಂಗಾಧರ್, ಸೇವಾದಳ ಕಾರ್ಯದರ್ಶಿ ಮದನ ಗೋಪಾಲ್, ಕಾಂಗ್ರೆಸ್ ಮುಖಂಡ ಲಕ್ಷ್ಮೀಪತಿ ಮತ್ತಿತರರಿದ್ದರು.