ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೈತ ಸಂಘ ಸದಸ್ಯರು, ಪಿಡಿಒಗಳ ಸಭೆ

Mainashree
Updated On : 24 Jul 2014, 11:55 am

ಚನ್ನಪಟ್ಟಣ:  ಗ್ರಾ.ಪಂ ವತಿಯಿಂದ ಒಂದೇ ಸ್ಥಳದಲ್ಲಿ ಭೂಮಾರ್ಗದಲ್ಲಿ ಒಂದು ಆಕಾಶ ಮಾರ್ಗದಲ್ಲಿ ಒಂದು ರಸ್ತೆ ನಿರ್ಮಿಸಿದ್ದೀರಾ... ಇದು ರೈತಸಂಘದ ಪದಾಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಮುಂದಿಟ್ಟ ಪ್ರಶ್ನೆ.
ನರೇಗಾ ಗೋಲ್ಮಾಲ್ ಸೇರಿದಂತೆ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರ ಖಂಡಿಸಿ ರೈತಸಂಘ ನಡೆಸಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬುಧವಾರ ತಾ.ಪಂ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ರೈತಸಂಘದ ಪದಾಧಿಕಾರಿಗಳು ಅವ್ಯವಹಾರವನ್ನು ಅನಾವರಣ ಗೊಳಿಸುತ್ತಿದ್ದಂತೆ ಸಮರ್ಪಕ ಉತ್ತರ ನೀಡಲಾಗದೆ ಅಧಿಕಾರಿಗಳು ತಬ್ಬಿಬ್ಬು ಗೊಂಡರು.
ತಾಲೂಕಿನ ಎಚ್. ಬ್ಯಾಡರಹಳ್ಳಿ ಗ್ರಾ.ಪಂ ವ್ಯಾಪ್ತಿಯ ಆಣಿಗೆರೆ ಗ್ರಾಮದಲ್ಲಿ ತಿರುಮ ಮುರುವ ಹೆಸರು ಬರೆದು ಒಂದೇ ರಸ್ತೆಗೆ ಎರಡೆರಡು ಬಿಲ್ ಪಾಸ್ ಮಾಡಲಾಗಿದೆ. ಇಂತಹ ಉದಾಹರಣೆಗಳು ಸಾಕಷ್ಟಿದ್ದು ಈ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ರೈತಸಂಘದ ಕಾರ್ಯಕರ್ತರು ಆಗ್ರಹಿಸಿದರು.
ಗ್ರಾ.ಪಂ ವಾರು ಚರ್ಚೆ:  ತಾಲೂಕಿನ ಪ್ರತಿಯೊಂದು ಗ್ರಾ.ಪಂ ವಾರು ಚರ್ಚೆ ನಡೆಸಿದ ರೈತಸಂಘದ ಪದಾಧಿಕಾರಿಗಳು ಪಂಚಾಯಿತಿ ಮಟ್ಟದಲ್ಲಿ ನಡೆದಿರುವ ನರೇಗಾ ಗೋಲ್ಮಾಲ್, ಆಶ್ರಯ ಮನೆ ವಿತರಣೆ, ಕೊಟ್ಟಿಗೆ ವಿತರಣೆಯಲ್ಲಾಗಿರುವ ಲೋಪ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲ ಸಮಸ್ಯೆಗಳ ಬಗ್ಗೆ ತಾ.ಪಂ ಅಧಿಕಾರಿಗಳ ಗಮನ ಸೆಳೆದರು.
ಸಮಗ್ರ ತನಿಖೆಗೆ ಆಗ್ರಹ: ನರೇಗಾ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು, ಎಲ್ಲ ಗ್ರಾಮ ಪಂಚಾಯಿತಿಗಳು ಅವ್ಯವಹಾರದಲ್ಲಿ ಶಾಮೀಲಾಗಿವೆ. ಕೆಲ ಗ್ರಾ.ಪಂ ಗಳಲ್ಲಿ ಫಲಾನುಭವಿಗಳಿಗೆ ಜಾಬ್ಕಾರ್ಡ್ ನೀಡದೆ ಗುತ್ತಿಗೆದಾರರು ಗ್ರಾ.ಪಂ ಸದಸ್ಯರ ಬಳಿ ಜಾಬ್ಕಾರ್ಡ್ ಇರಿಸಿಕೊಳ್ಳಲಾಗಿದೆ. ಈಬ ಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.
ತಾಲೂಕಿನಾದ್ಯಂತ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಥವಾ ಇನ್ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ಉನ್ನತ ಮಟ್ಟದ ತನಿಖೆಗೆ ಪಂಚಾಯತ್ ರಾಜ್ ಇಲಾಖೆ ಆದೇಶಿಸುವಂತೆ ಆಗ್ರಹಿಸಿದ ರೈತ ಸಂಘ ತನಿಖೆ ನಡೆಯದೇ ಇದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಗ್ರಾ.ಪಂ ಗಳಿಗೆ ಭೇಟಿ: ಸಭೆಯಲ್ಲಿ ಮಾತನಾಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಜಯರಂಗ ಕುಡಿಯುವ ನೀರಿನ ಸಮಸ್ಯೆ ತಾಲೂಕನ್ನು ಕಾಡುತ್ತಿದೆ. ಮಳೆಯ ಅಭಾವದಿಂದಾಗಿ ಈ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. ತನ್ನ ವ್ಯಾಪ್ತಿಯಲ್ಲಿ ಸಮಸ್ಯೆ ಪರಿಹರಿಸಲು ನಮ್ಮ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಅಗತ್ಯಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಕೆಲ ಗ್ರಾ.ಪಂ ಗಳ ಬಗ್ಗೆ ಕೇಳಿ ಬರುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಖುದ್ದು ಪಂಚಾಯಿತಿಗೆ ಭೇಟಿ ನೀಡಿ ಅವ್ಯವಹಾರ ಪರಿಶೀಲಿಸಲಾಗುವುದು. ಅವ್ಯವಹಾರ ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ  ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಸಭೆಗೆ ಸ್ಪಷ್ಟಪಡಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಅರುಣಪ್ರಭ, ರೈತಸಂಘದ ವಿಭಾಗೀಯ ಉಪಾಧ್ಯಕ್ಷ ಎಂ. ರಾಮು, ಜಿಲ್ಲಾಧ್ಯಕ್ಷ ಕೆ. ಮಲ್ಲಯ್ಯ, ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಕಾರ್ಯಾಧ್ಯಕ್ಷ ಕೃಷ್ಣಪ್ಪ, ಎಚ್. ನಾಗೇಶ್, ತಿಮ್ಮೇಗೌಡ, ಸ್ವರಾಜ್ ನೆಟ್ವರ್ಕ್ನ ಸುಕನ್ಯಾ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement