ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪರಿಸರದ ಮೇಲೆ ನಿರಂತರ ಅತ್ಯಾಚಾರ: ಭಡ್ತಿ

Mainashree
Updated On : 26 Jul 2014, 10:47 am

ನೆಲಮಂಗಲ: ಮಾನವನ ದುರಾಸೆಯಿಂದ ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ಅತ್ಯಾಚಾರದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಅತಿವೃಷ್ಟಿ ಇಲ್ಲ ಅನಾವೃಷ್ಟಿ ಉಂಟಾಗುತ್ತಿದೆ. ಅದನ್ನು ತಡೆಯಲು ಈಗಿನ ಯುವ ಪೀಳಿಗೆ ಮನಸ್ಸು ಮಾಡಬೇಕು ಎಂದು ಕನ್ನಡಪ್ರಭ ಸಹಾಯಕ ಸಂಪಾದಕ ರಾಧಾಕೃಷ್ಣ ಭಡ್ತಿ ಅಭಿಪ್ರಾಯ ಪಟ್ಟರು.
ಅವರು ಶನಿವಾರ ತಾಲೂಕಿನ ಮಹಿಮಾಪುರದಲ್ಲಿ ಕರ್ನಾಟಕದ ಭಾರತೀಯ ಕಿಸಾನ್ ಸಂಘ ಹಾಗೂ ಧರಣಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಭೂಮಿಯನ್ನು ಉಳಿಸಲು ವಿಷ್ಣು ವರಾಹ ರೂಪ ಧರಿಸಿದಂತೆ, ಹಿರಣ್ಯಾಕ್ಷನ ರೂಪದಲ್ಲಿ ನಾಡಿನಲ್ಲಿರುವ ವಿವಿಧ ಕ್ಷೇತ್ರಗಳ ರಾಕ್ಷಸರನ್ನು ನಿಗ್ರಹಿಸಲು ಈಗಿನ ಮಕ್ಕಳು ಕೂಡ ವಿವಿಧ ಯೋಜನೆಗಳನ್ನು ರೂಪಿಸಿ ಸಕ್ರಿಯರಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆಕೊಟ್ಟರು.
ಬಡಾವಣೆಗಳಾಗುತ್ತಿವೆ: ತಹಸೀಲ್ದಾರ್ ನರಸಿಂಹಮೂರ್ತಿ ಮಾತನಾಡಿ, ಕೃಷಿ ಭೂಮಿಯೆಲ್ಲಾ ಬಡಾವಣೆಗಳಾಗುತ್ತಿವೆ. ಪರಿಹಾರದ ಹಣ ಪಡೆದ ರೈತರೆಲ್ಲಾ ಸೂಕ್ತ ಮಾರ್ಗದರ್ಶನ ಇಲ್ಲದೆ ದುಂದು ವೆಚ್ಚ ಮಾಡಿ ಭಿಕಾರಿಗಳಾಗುತ್ತಿದ್ದಾರೆ. ಇದು ತಪ್ಪಬೇಕು ಎಂದು ಹೇಳಿದರು.
ವಿಜಯನಗರ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಒಂದು ಗಿಡವನ್ನು ನೆಟ್ಟು ನೆರೆದಿದ್ದವರಿಗೆ ಆಶೀರ್ವಚನ ನೀಡಿದರು. ಮಹಿಮಾಪುರದ ಸುತ್ತಲಿನ ಶಾಲೆಗಳಾದ ಮಾರಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆ, ಕುಲವನಹಳ್ಳಿಯ ಎಸ್.ಜೆ.ಆರ್.ಎಸ್. ಪ್ರೌಢಶಾಲೆ ಹಾಗೂ ಅರೆಬೊಮ್ಮನಹಳ್ಳಿಯ ಎಸ್.ಎಲ್.ಎನ್. ಪ್ರೌಢಶಾಲೆ ಮಕ್ಕಳಿಂದ ಮಹಿಮಾಪುರದ ಬೆಟ್ಟದ ಸುತ್ತಲಿನ ಪರಿಸರದಲ್ಲಿ ನೂರಾರು ಗಿಡಗಳನ್ನು ನೆಡಲಾಯಿತು. ನರಸೀಪುರದ ರಾಮದೇವರ ಬೆಟ್ಟದಲ್ಲಿ ನೂರಾರು ಮರ ಬೆಳಸಿರುವ ಪರಿಸರ ಪ್ರೇಮಿ ಹನುಮಂತರಾಯಪ್ಪ ಮತ್ತು ವರ್ಗವಾದ ಕಡೆಯೆಲ್ಲಾ ಔಷಧ ವನ ಬೆಳೆಸಿ ಅದರ ಉಪಯೋಗವನ್ನು ಮಕ್ಕಳಿಗೆ ತಿಳಿಸಿಕೊಡುವ ಶಿಕ್ಷಕ ದೊಡ್ಡೇರಿ ಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು.
 ಊರಿನ ಮುಖ್ಯಸ್ಥ ಕುಳ್ಳೆಗೌಡರು, ಭಾರತ್ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಸರಘಟ್ಟ ಗಂಗಾಧರಯ್ಯ, ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಸುರೇಶ್, ತಾಲೂಕು ಅಧ್ಯಕ್ಷ ಗಂಗಹನುಮಯ್ಯ, ತಾಲೂಕು ಕಾರ್ಯದರ್ಶಿ ಹರೀಶ್. ಎಚ್.ಎಸ್, ಅಭಿಲಾಷ್, ಗಂಗಣ್ಣ, ಕೆ.ಜಯರಾಮಯ್ಯ, ಧರ್ಮಾನಂದ, ಚಂದ್ರಮೋಹನ್ ಕುಮದ್ವತಿ ನದಿ ಪುನಶ್ಚೇತನ ಸಮಿತಿಯ ತಾಲೂಕು ಅಧ್ಯಕ್ಷ ಬಾಳೇಕಾಯಿ ನಾಗರಾಜು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement