ಬೆಂಡಿಗಾನಹಳ್ಳಿಯಲ್ಲಿ ಕಾರ್ಗಿಲ್ ವಿಜಯೋತ್ಸವ
ಸೂಲಿಬೆಲೆ : ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಹುತಾತ್ಮ ನಾಯಕರ ಜೀವನ ಚರಿತ್ರೆ ಪ್ರತಿ ವಿದ್ಯಾರ್ಥಿಯಲ್ಲಿ ಸದಾ ಸ್ಮರಣೀಯವಾಗಿರಬೇಕು. ದೇಶದ ಬಗ್ಗೆ ಎಲ್ಲರೂ ಗೌರವ ಮತ್ತು ಅಭಿಮಾನವನ್ನು ಹೊಂದಬೇಕು ಎಂದು ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ ಸತೀಶ್ ಗೌಡ ಹೇಳಿದ್ದಾರೆ.
ಇಲ್ಲಿಗೆ ಸಮೀಪದ ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಯೋಧರ ನೆನಪಿನಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ತಾಪಂ ಅಧ್ಯಕ್ಷೆ ಮಂಜುಳಾ ಡಿ.ಟಿ ವೆಂಕಟೇಶ್ ಮಾತನಾಡಿ, ಕಾರ್ಗಿಲ್ ಯುದ್ಧ ಪ್ರತಿ ಭಾರತೀಯನ ಮನದಲ್ಲಿ ಹೋರಾಟದ ಕಿಚ್ಚನ್ನು ಹತ್ತಿಸಿದ್ದು ಈಗ ಇತಿಹಾಸ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರ ಗುಣಗಾನ ಎಷ್ಟು ಮಾಡಿದರೂ ಸಾಲದು. ದೇಶಕ್ಕೆ ಮಡಿದ ನಾಯಕರ ಹೆಸರಿನಲ್ಲಿ ಸಮಾಜ ಸೇವೆಯ ಕೆಲಸಗಳನ್ನು ಮಾಡಿ ಅವರ ಆತ್ಮಕ್ಕೆ ಶಾಂತಿಯನ್ನು ಸಿಗುವಂತೆ ಮಾಡಬೇಕಾದ ಕರ್ತವ್ಯ ನಮ್ಮಲ್ಲಿರ ಮೇಲಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ,ಹಾಲಿ ಬಿಜೆಪಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ದೇಶಕ್ಕೆ ಮಡಿದ ನಾಯಕರನ್ನು ಬಿಜೆಪಿ ಸದಾ ಸ್ಮರಿಸುತ್ತದೆ. ಇದರಲ್ಲಿ ಪಾಲ್ಗೊಂಡು ನಾಯಕರಿಗೆ ನಮನ ಸಲ್ಲಿಸುವುದು ಎಲ್ಲರ ಕರ್ತವ್ಯವಾಗಬೇಕು. ರಾಜ್ಯದ ಮೇಜರ್ ಸಂದೀಪ್ ಸೇರಿದಂತೆ ಆನೇಕ ಯೋಧರು ಭಾರತೀಯರ ಮನದಲ್ಲಿ ಅವಿಸ್ಮರಣಿಯವಾಗಿದ್ದಾರೆ ಎಂದು ಹೇಳಿದರು. ಶಾಲಾ ಹಾಗೂ ಆಸ್ಪತ್ರೆ ಆವರಣದಲ್ಲಿ ನೂರಾರು ಗಿಡಗಳನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿ ನೆಟ್ಟು ಯೋಧರಿಗೆ ನಮನ ಸಲ್ಲಿಸಿದರು. ಹೊಸಕೋಟೆ ತಾಲೂಕಿನ ಬಿಜೆಪಿ ಯುವ ಮೋರ್ಚಾ ಘಟಕದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಯುವ ಮೋರ್ಚಾ ಅಧ್ಯಕ್ಷ ಕೆ.ಸತೀಶ್, ಉಪಾಧ್ಯಕ್ಷ ಗಿರೀಶ್, ವಿನೋಧರೆಡ್ಡಿ, ಉಮಾಶಂಕರ್, ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ದನ್ ರೆಡ್ಡಿ, ಚಿಕ್ಕ ಅರಳಿಗೆರೆ ಜಗದೀಶ್, ದೊಡ್ಡ ನಾರಾಯಣಪ್ಪ, ರಾಘವನ್ ಮೊದಲಾದವರು ಹಾಜರಿದ್ದರು.