ಭದ್ರಕೋಟೆಯಲ್ಲೇ ಜೆಡಿಎಸ್ ಅಭದ್ರ
ರಾಮನಗರ: ತನ್ನದೇ ಭದ್ರಕೋಟೆಯಲ್ಲೇ ಜೆಡಿಎಸ್ ಸ್ಥಿತಿ ಅಭದ್ರವಾಗಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕರ್ಮಭೂಮಿ ರಾಮನಗರದಲ್ಲಿ ಸ್ಥಳೀಯ ಸಂಸ್ಥೆಗಳು ಒಂದೊಂದಾಗಿ ಜೆಡಿಎಸ್ ತೆಕ್ಕೆಯಿಂದ ಕೈಜಾರುತ್ತಿವೆ. ಆಪರೇಷನ್ ಹಸ್ತ ಕಾರ್ಯಾಚರಣೆ ಮೂಲಕ ಕಾಂಗ್ರೆಸ್ ಪಾರುಪತ್ಯ ಸ್ಥಾಪಿಸುತ್ತಿದೆ.
ಪೌರ ಸಂಸ್ಥೆಗಳ ಚುನಾವಣೆಯಿಂದಲೇ ಜೆಡಿಎಸ್ ಹಿನ್ನಡೆ ಪ್ರಾರಂಭವಾಯಿತು. ವಿಧಾನಸಭೆ ಚುನಾವಣೆಯಲ್ಲಿ ಮಿಶ್ರ ಫಲಿತಾಂಶ ಎದುರಾಯಿತಾದರೂ ನಂತರದಲ್ಲಿ ಮಣ್ಣಿನ ಮಕ್ಕಳ ಪಕ್ಷ ಮುಟ್ಟಿದ್ದೆಲ್ಲ ಮಣ್ಣೇ ಆಗಿದೆ. ಇದೀಗ ಬಹುಮತವಿದ್ದರೂ ಜಿ.ಪಂ. ಚುಕ್ಕಾಣಿ ಉಳಿಸಿಕೊಳ್ಳಲಾಗಿಲ್ಲ.
ಎಚ್‌ಡಿಕೆಗೆ ಮುಖಭಂಗ: ನಾಲ್ಕು ದಿನಗಳ ಹಿಂದಷ್ಟೇ ಸ್ವಕ್ಷೇತ್ರ ರಾಮನಗರ ತಾ.ಪಂ.ನಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತವಿದ್ದರೂ ಅಧಿಕಾರ ಕಾಂಗ್ರೆಸ್ ಪಾಲಾಯಿತು. ಅದೇ ಫಲಿತಾಂಶ ಶನಿವಾರ ನಡೆದ ಜಿ.ಪಂ. ವರಿಷ್ಠರ ಚುನಾವಣೆಯಲ್ಲೂ ಮರುಕಳಿಸಿದ್ದರ ಪರಿಣಾಮ ಕುಮಾರಸ್ವಾಮಿ ಮುಖಭಂಗಕ್ಕೀಡಾಗಿದ್ದಾರೆ. ಲೋಕಸಭೆ ಉಪ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಆಯ್ಕೆಯೊಂದಿಗೆ ಡಿ.ಕೆ. ಶಿವಕುಮಾರ್ ಅವರಿಗೆ ಮುಚ್ಚಿದ್ದ ಸಂಪುಟದ ಕದ ತೆರೆದುಕೊಂಡಿತು. ಅದಾಗುತ್ತಲೇ ದಶಕದಿಂದ ಅಧಿಕಾರವಿಲ್ಲದೆ ವಿಲವಿಲ ಒದ್ದಾಡುತ್ತಿದ್ದ ಕಾಂಗ್ರೆಸಿಗರಿಗೆ ಭೀಮಬಲ ಬಂದಂತಾಗಿದ್ದು, ಜೆಡಿಎಸ್ ಮೇಲೆ ಸವಾರಿಗೆ ಇಳಿದಿದ್ದಾರೆ.
ಉಳಿದಿದ್ದು ಒಂದೇ: ಪೌರ ಸಂಸ್ಥೆಗಳ ಚುನಾವಣೆಯಲ್ಲಿ ರಾಮನಗರ ಸಹಿತ 3 ಕಡೆ ಜೆಡಿಎಸ್ ಹೀನಾಯ ಸೋಲು ಕಂಡಿತು. ಬಹುಮತ ಸಾಧಿಸಿದರೂ ಚನ್ನಪಟ್ಟಣ ನಗರಸಭೆ ಅಧಿಕಾರ ಭಾಗ್ಯ ಒಲಿಯಲಿಲ್ಲ. ಇದರೊಂದಿಗೆ ಜಿಲ್ಲೆಯ ನಾಲ್ಕೂ ಪೌರ ಸಂಸ್ಥೆಗಳು ಕಾಂಗ್ರೆಸ್ ಪಾಲಾದವು. ಸ್ಪಷ್ಟ ಬಹುಮತವಿದ್ದರೂ ಮಿತಿ ಮೀರಿದ ಗುಂಪುಗಾರಿಕೆ ಪರಿಣಾಮ ಚನ್ನಪಟ್ಟಣ ತಾ.ಪಂ.ನಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಜತೆಗೂಡಿ ಅಧಿಕಾರ ಹಂಚಿಕೊಂಡಿದೆ. ಸ್ವತಂತ್ರವಾಗಿ ಜೆಡಿಎಸ್ ಅಧಿಕಾರದಲ್ಲಿರುವುದು ಮಾಗಡಿ ಹೊರತಾಗಿ ಬೇರೆಲ್ಲೂ ಇಲ್ಲ.
ಕಡೆಗಣಿಸಿದ ದಳಾಧಿಪತಿ: ಲೋಕಸಭೆ ಚುನಾವಣೆ ನಂತರದ ಬೆಳವಣಿಗೆಗಳಿಂದ ಹತಾಶರಾಗಿರುವ ದಳಾಧಿಪತಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಕರ್ಮಭೂಮಿ ರಾಮನಗರವನ್ನು ಕಡೆಗಣಿಸುತ್ತಿರುವ ಬಗ್ಗೆ ಸ್ವಪಕ್ಷೀಯರಿಂದಲೇ ಟೀಕಾರೋಪಗಳು ಕೇಳಿ ಬರುತ್ತಿವೆ. ಪಕ್ಷದ್ರೋಹಿಗಳಿಗೆ ಮಣೆ ಹಾಕುತ್ತಾ ನಿಷ್ಠರನ್ನು ತಾತ್ಸಾರ ಮಾಡುವ ಜತೆಗೆ ಚಾಡಿಕೋರರ ಮಾತಿಗೆ ಕಿವಿಗೊಟ್ಟು, ತಾವೇ ಕಟ್ಟಿ ಬೆಳೆಸಿದ ಪಕ್ಷದ ಹಿತ ಬಲಿ ಕೊಡಲು ಹೊರಟಿದ್ದಾರೆಯೇ ಎನ್ನುವ ಸಂಶಯ ಸ್ವತಃ ಅವರ ನಡವಳಿಗಳಿಂದ ಎದುರಾಗುತ್ತಿರುವುದು ಸುಳ್ಳಲ್ಲ.
2 ಗಾಳಕ್ಕೆ ಸಿಕ್ಕವು 3 ಮೀನು
ರಾಮನಗರ ಜಿ.ಪಂ. ಚುಕ್ಕಾಣಿಯನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷದ ನಾಯಕರು ಸಾಂಪ್ರದಾಯಿಕ ಎದುರಾಳಿ ಪಕ್ಷವಾದ ಜೆಡಿಎಸ್ ಕೊಳಕ್ಕೆ ಎಸೆದಿದ್ದು ಎರಡು ಗಾಳ. ಆದರೆ, ಅವರಿಗೆ ಸಿಕ್ಕಿದ್ದು ಮಾತ್ರ 3 ಮೀನುಗಳು. ಇದು ಅಚ್ಚರಿಯೇ ಆದರೂ ಸತ್ಯ. ಸ್ವಪಕ್ಷದಲ್ಲಿ ಮೂಲೆಗುಂಪಾಗಿದ್ದ ಜಿ.ಪಂ. ಮಾಜಿ ಅಧ್ಯಕ್ಷ ಕಲ್ಪನಾ ಮಲ್ಲಿಕಾರ್ಜುನಗೌಡ ಗೈರು ಪೂರ್ವ ನಿಯೋಜಿತ. ಕಳೆದ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಮಲ್ಲಿಕಾರ್ಜುನಗೌಡ ಕಾಂಗ್ರೆಸ್ ಮುಖಂಡರ ಸಂಪರ್ಕದಲ್ಲಿದ್ದರು ಎನ್ನುವುದು ಗುಟ್ಟಿನ ಸಂಗತಿಯೇನಲ್ಲ. 22 ಸದಸ್ಯ ಬಲದ ಜಿ.ಪಂ.ನಲ್ಲಿ ಜೆಡಿಎಸ್ 12 ಮತ್ತು ಕಾಂಗ್ರೆಸ್ 9 ಸದಸ್ಯರನ್ನು ಹೊಂದಿದ್ದರೆ, ಒಬ್ಬರು ಮತದಾನದ ಹಕ್ಕು ವಂಚಿತರಾಗಿದ್ದಾರೆ. ಕಲ್ಪನಾ ಗೈರು ಖಚಿತಪಡಿಸಿಕೊಂಡ ಕಾಂಗ್ರೆಸ್ ಗೆಲ್ಲಲು ಇಬ್ಬರು ಸದಸ್ಯರನ್ನಷ್ಟೇ ಸೆಳೆಯಲು ಹೊರಟಿತ್ತು. ಆದರೆ, ಕಡೆಗೆ ಮೂವರು ಕಾಂಗ್ರೆಸ್ ಪಾಲಾಗಿದ್ದಾರೆ.
ಮತ್ತೀಕೆರೆ ಜಯರಾಮ್