ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾರ್ಗಿಲ್ ವಿಜಯ ದಿವಸ ಆಚರಣೆ

Mainashree
Updated On : 28 Jul 2014, 12:10 pm

ಮಾಗಡಿ: ತಾಲೂಕಿನ ಕುದೂರು ಹೋಬಳಿ ಬೆಟ್ಟಹಳ್ಳಿ ಕಾಲೊನಿಯ ಶಾಲೆಯಲ್ಲಿ ಪುಟಾಣಿ ಮಿಲಿಟರಿ ಪಡೆಯಿಂದ ಕಾರ್ಗಿಲ್ ವಿಜಯೋತ್ಸವದ ಸಂಭ್ರಮಾಚರಣೆ ನಡೆಯಿತು.ಪುಟಾಣಿ ಮಕ್ಕಳಲ್ಲಿ ಸಂಭ್ರಮ ಜೊತೆಗೆ ಮೊಗದಲ್ಲಿ ಮಂದಹಾಸ ಮೂಡಿತ್ತು. ಮಕ್ಕಳು ನಲಿಯುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದರು. ಯಾವುದೋ ಹಬ್ಬ ಹರಿದಿನವಲ್ಲ, ಶಾಲಾ ವಾರ್ಷಿಕೋತ್ಸವವೂ ಅಲ್ಲ. ಭಾರತವು ಪಾಕಿಸ್ತಾನದ ವಿರುದ್ಧ ಗೆದ್ದ ಸುದಿನದ ಆಚರಣೆಯ ಗುಂಗಿನಲ್ಲಿದ್ದರು. ಆ ಪುಟ್ಟ ಪುಟ್ಟ ಪುಟಾಣಿಗಳು ಮಿಲಿಟರಿ ಪಡೆಯಂತೆ ವೇಷಭೂಷಣಗಳನ್ನು ತೊಟ್ಟು ಕಾರ್ಗಿಲ್ ಸಂಭ್ರಮ ಆಚರಣೆಯಲ್ಲಿದ್ದುದು ಕಂಡು ಬಂತು. ಶಿಕ್ಷಕರು ಮಕ್ಕಳಿಗೆ ದೇಶಪ್ರೇಮ,ದೇಶಭಕ್ತಿ ಕುರಿತು ಗೀತೆಗಳನ್ನು ಹಾಡಿಸಿದರು. ಗೀತೆಗಳಿಗೆ ಪ್ರೇರಿತರಾದ ಪುಟಾಣಿ ಮಕ್ಕಳು ಭಾರತ ಮಾತಾಕೀ ಜೈ ಎಂದು ಜೈಕಾರ ಕೂಗುತ್ತಾ ಕುಗ್ರಾಮ ಬೆಟ್ಟಹಳ್ಳಿ ಕಾಲೊನಿಯ ಬೀದಿಯಲ್ಲಿ ಸಂಚರಿಸಿ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷೆ ಕಮಲಮ್ಮ ಮಕ್ಕಳ ಉತ್ತಮ ಸಾಧನೆ, ಶಾಲೆಯ ಪ್ರಗತಿ ಕುರಿತು ವಿವರಿಸಿದರಲ್ಲದೆ ಸಂತಸ ವ್ಯಕ್ತಪಡಿಸಿದರು.ಕೇವಲ ಪ್ರಚಾರಕ್ಕಾಗಿ  ಕಾಲಹರಣ ಮಾಡುವ ಕಾರ್ಯಕ್ರಮಕ್ಕಿಂತ ಮಕ್ಕಳಿಗೆ ದೇಶಪ್ರೇಮದ ಕಾರ್ಯಕ್ರಮಗಳನ್ನು ಆಯೋಜಿಸಿದರೆ ನಿಜಕ್ಕೂ ಮಕ್ಕಳು ದೇಶದ ಆಸ್ತಿಯಾಗುವುದರಲ್ಲಿ ಸಂಶಯ ಬೇಡ ಎಂದು ಶಿಕ್ಷಕ ಚಿಕ್ಕವೀರಯ್ಯ ವಿವರಿಸಿದರು. ಇದೇ ವೇಳೆ ಮಕ್ಕಳು ಎಲ್ಲರಿಗೂ ಸಿಹಿ ಹಂಚಿ, ಶುಭಾಶಯವನ್ನು ವಿನಿಮಯ ಮಾಡಿಕೊಂಡರು. ಗ್ರಾಮದ ಹಿರಿಯರು, ಪೋಷಕರು, ಶಿಕ್ಷಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement