ಸಂಭಾಜಿ ಶಾಸಕತ್ವ ರದ್ದುಗೊಳಿಸಿ
ಕ.ಪ್ರ. ವಾರ್ತೆ, ದೊಡ್ಡಬಳ್ಳಾಪುರ,ಜು.27
ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಶಾಸಕತ್ವವನ್ನು ರಾಜ್ಯ ವಿಧಾನಸಭೆ ಕೂಡಲೇ ರದ್ದುಗೊಳಿಸಬೇಕು. ಈ ಬಗ್ಗೆ ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು ನಿರ್ಣಯ ಕೈಗೊಂಡು ಮುಖ್ಯಮಂತ್ರಿಗಳಿಗೆ ರವಾನಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ಕರೆ ನೀಡಿದ್ದಾರೆ.
ಇಲ್ಲಿನ ಕನ್ನಡ ಜಾಗೃತ ಪರಿಷತ್ತಿನ ನೇತೃತ್ವದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಮತ್ತು ಐಚ್ಛಿಕ ಕನ್ನಡ ವಿಭಾಗಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿರುವ ಮರಾಠಿಗರಿಗೆ ಕನ್ನಡಿಗರು ಕಿರುಕುಳ ಕೊಡುತ್ತಿಲ್ಲ. ಆದರೆ ಗಡಿಭಾಗದ ಕನ್ನಡಿಗರು ಆತಂಕದ ಸ್ಥಿತಿಯಲ್ಲಿ ಬದುಕುವಂತಾಗಿದೆ. ಕನ್ನಡ ನೆಲದಲ್ಲಿ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗುವ ಸಂದರ್ಭ ಬಂದರೆ ಸ್ವಾಭಿಮಾನದ ಕಿಚ್ಚು ಬೆಂಕಿಯಾಗಲಿದೆ. ಈ ಬಗ್ಗೆ ಕರ್ನಾಟಕದಲ್ಲಿ ವಾಸ ಮಾಡುತ್ತಿರುವ ಮರಾಠಿಗರು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಈ ಬಗೆಯ ಪುಂಡಾಟಿಕೆ ನಿಲ್ಲಿಸಿ ಸೌಹಾರ್ದತೆ ಕಾಪಾಡಲು ಆಗ್ರಹಿಸಬೇಕು. ಮಹಾರಾಷ್ಟ್ರ ಏಕೀಕರಣ ಸಮಿತಿ ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿದ್ದು, ಆ ಪಕ್ಷದ ರಾಜಕೀಯ ಮಾನ್ಯತೆಯನ್ನು ರದ್ದುಪಡಿಸಬೇಕು ಎಂದ ಅವರು, ಕನ್ನಡ ನೆಲದಲ್ಲಿದ್ದ ಮಹಾರಾಷ್ಟ್ರ ಫಲಕ ತೆಗೆಯುವುದು ಹೈಕೋರ್ಟಿನ ಆದೇಶ. ಅದನ್ನೂ ಮೀರಿ ಭಾಷಾಂಧತೆ ತೋರುತ್ತಿರುವ ಎಂಇಎಸ್ ಉದ್ಧಟತನ ಖಂಡನೀಯ ಎಂದರು.
ಮಾನವೀಯ ಮೌಲ್ಯ ಮುಖ್ಯ: ವಿದ್ಯಾರ್ಥಿಗಳು ಪಠ್ಯ ಸಂಬಂಧಿತ ಸಾಧನೆಗಳ ಜೊತೆಗೆ ವ್ಯಕ್ತಿತ್ವದ ಬೆಳವಣಿಗೆಗೂ ಆದ್ಯತನೀಡಬೇಕು. ಮಾನವೀಯ ಮೌಲ್ಯಗಳಿಂದ ಹೊರತಾದ ಶಿಕ್ಷಣ ಇಲ್ಲ. ಹೀಗಾಗಿ ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ಸಾಹಿತ್ಯದ ಅಧ್ಯಯನ ಮುಖ್ಯ. ಕುವೆಂಪು, ಬೇಂದ್ರೆ, ಕಾರಂತರಂತಹ ವ್ಯಕ್ತಿಗಳ ಕೃತಿಗಳನ್ನು ಓದುವ ಮೂಲಕ ಈ ನೆಲದ ಸಂಸ್ಕೃತಿ ಮತ್ತು ಬದುಕಿನ ಅರ್ಥವಂತಿಕೆಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕಿದೆ. ದೇಶ-ಭಾಷೆ ಮತ್ತು ಸಂಸ್ಕೃತಿಯ ಅರಿವು ಇಂದಿನ ಕಲುಷಿತ ವಾತಾವರಣ ತಿಳಿಗೊಳ್ಳಲು ಸಾಧನವಾಗಬಲ್ಲುದು ಎಂದ ಅವರು, ಅತ್ಯಾಚಾರ ಅನಾಚಾರಗಳನ್ನು ತಡೆಗಟ್ಟಲು ಮೌಲ್ಯ ಶಿಕ್ಷಣ ಮತ್ತು ನೈತಿಕ ಪ್ರಜ್ಞೆಯ ಜಾಗೃತಿ ಅತಿಮುಖ್ಯ ಎಂದರು.
ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಸಿ. ಮಂಜುನಾಥ್ ಉದ್ಘಾಟಿಸಿದರು. ಅವರು ಮಾತನಾಡಿ ಸಾಧಕ ಪರಿಶ್ರಮಿಯೂ ಆಗಿರುತ್ತಾನೆ. ಸಾಧನೆಗೆ ಕೊನೆ-ಮೊದಲುಗಳಿಲ್ಲ. ನಿರಂತರತೆಯ ಮತ್ತೊಂದು ಹೆಸರೇ ಸಾಧನೆ. ಇದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ ಎಂದರು.
ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷ ಡಿ.ವಿ.ಅಶ್ವತ್ಥಪ್ಪ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜ್, ಕನ್ನಡ ಜಾಗೃತ ಪರಿಷತ್ತಿನ ಟ್ರಸ್ಟಿಗಳಾದ ರುಮಾಲೆ ನಾಗರಾಜ್, ಸುಲೋಚನಮ್ಮ ವೆಂಕಟರೆಡ್ಡಿ, ಕಜಾಪ ಕಾರ್ಯದರ್ಶಿ ತ.ನ.ಪ್ರಭುದೇವ್, ಉಪಾಧ್ಯಕ್ಷ ಸಾ.ಲ. ಕಮಲನಾಥ್, ಮಾಜಿ ಅಧ್ಯಕ್ಷ ಬಿ.ಜಿ.ಅಮರನಾಥ್, ಖಜಾಂಚಿ ಸಿ. ನಟರಾಜ್ ಮತ್ತಿತರರು ಭಾಗವಹಿಸಿದ್ದರು.