ಬಿಆರ್ಎಫ್ಎಲ್ನ 167 ಕಾರ್ಮಿಕರು ವಜಾ
ದೊಡ್ಡಬಳ್ಳಾಪುರ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಬಾಂಬೆ ರೇಯಾನ್ ಫ್ಯಾಷನ್ ಲಿಮಿಟೆಡ್ನ ಪ್ರೊಸಸಿಂಗ್ ಯೂನಿಟ್ನ 167 ಕಾರ್ಮಿಕರನ್ನು ಏಕಾಏಕಿ ವಜಾಗೊಳಿಸಿರುವ ಹಿನ್ನಲೆಯಲ್ಲಿ ಕಾರ್ಮಿಕರು ಬುಧವಾರ ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಿದರು.
ಬೇಡಿಕೆ ಇಲ್ಲವೆಂಬ ಕಾರಣ ನೀಡಿ ಈ ಕಾರ್ಮಿಕರನ್ನು ವಜಾಗೊಳಿಸಿವ ಧೋರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿ ಕಾರ್ಮಿಕರಿಗೆ ಬೆಂಬಲ ನೀಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಖಾನೆಯ ಕಾರ್ಮಿಕ ಹಮಾಮ್ ಪ್ರಕಾಶ್, ಕಾರ್ಖಾನೆಯಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ವೀವಿಂಗ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ 167 ಮಂದಿಯನ್ನು ವಜಾಗೊಳಿಸಿದ್ದಾರೆ. ಗೇಟ್ನಲ್ಲಿ ಪ್ರದರ್ಶಿಸಿರುವ ತಿಳಿವಳಿಕೆ ಪತ್ರದಲ್ಲಿ ಯಾವ ಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದೇವೆ, ತೆಗೆದಿರುವ ಯಾವ ಕಾರ್ಮಿಕರಿಗೆ ಉತ್ಪಾದನಾ ಬೇಡಿಕೆ ಬರುವವರೆಗೆ ಅವರ ಖಾತೆಗೆ ವೇತನ ಜಮಾ ಮಾಡುತ್ತೇವೆ ಎಂಬ ಮಾಹಿತಿ ನೀಡಿಲ್ಲ. ಇದು ಸ್ಥಳೀಯ ಕಾರ್ಮಿಕರನ್ನು ಹೊರದಬ್ಬಿ ಹೊರರಾಜ್ಯದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮಾಡಿರುವ ಹುನ್ನಾರ ಎಂದು ಆರೋಪಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಕರವೇ ತಾ. ಅಧ್ಯಕ್ಷ ರಾಜಘಟ್ಟ ರವಿ ಈ ಹಿಂದೆ ಕೂಡ ಕಾರ್ಖಾನೆ ಲಾಕ್ಔಟ್ ನಾಟಕವಾಡಿತ್ತು. ಕಾರ್ಮಿಕರ ಬದುಕಿನ ಜೊತೆ ಚಲ್ಲಾಟ ಮಾಡಿದ್ದ ಸಂದರ್ಭದಲ್ಲಿ 45 ದಿನಗಳ ಸತತ ಹೋರಾಟದ ಫಲವಾಗಿ ಮತ್ತೆ ಕಾರ್ಖಾನೆ ಆರಂಭಗೊಂಡಿತು. ಆದರೆ ಮತ್ತೆ ಹಂತ ಹಂತವಾಗಿ ಕಾರ್ಮಿಕರನ್ನು ಹೊರದೂಡುವ ಕೆಲಸಕ್ಕೆ ಕಾರ್ಖಾನೆ ವ್ಯವಸ್ಥಿತವಾಗಿ ಕೈಹಾಕಿದೆ. ಈ ಹಂತದಲ್ಲಿ ಕರವೇ ಮತ್ತು ತಾಲೂಕಿನ ಎಲ್ಲ ಜನಪರ ಸಂಘಟನೆಗಳು ಬೀದಿಗಿಳಿದು ಹೋರಾಟಕ್ಕೆ ಮುಂದಾಗಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಬಂದ ಕಾರ್ಮಿಕ ನಿರೀಕ್ಷಕ ಕಾರ್ಮಿಕರೊಂದಿಗೆ ಚರ್ಚಿಸಿದರು. ಈಗಾಗಲೇ ಕಾರ್ಖಾನೆ ಮೇಲೆ 3 ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಆಗಬಹುದಾದ ಕೆಲಸ ಮಾಡಿದ್ದೇನೆ ಎಂಬ ಹಾರಿಕೆ ಉತ್ತರವನ್ನಷ್ಟೇ ನೀಡಿದರು. ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ವೇಣು, ನವೀನ್, ಬಾಲು ಸೇರಿದಂತೆ ವಜಾಗೊಂಡಿರುವ ಅನೇಕ ಕಾರ್ಮಿಕರು ಭಾಗವಹಿಸಿದ್ದರು.
ಹೊರರಾಜ್ಯದವರಗೆ ಮಣೆ
ಕಾರ್ಖಾನೆಯಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ಆಡಳಿತ ಮಂಡಳಿ ನೇಮಕ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆಗಳು ನಡೆಯುತ್ತಿವೆ. ಇದಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳ ಕುಮ್ಮಕ್ಕೂ ಇದೆ ಎಂಬ ಆರೋಪ ಪ್ರತಿಭಟನಾಕಾರರಿಂದ ಕೇಳಿಬಂತು.