ಸಂಭಾಜಿ ಪಾಟೀಲ್ ಶಾಸಕ ಸ್ಥಾನ ವಜಾಕ್ಕೆ ಕಜವೇ ಆಗ್ರಹ
ದೇವನಹಳ್ಳಿ: ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮಗಳು ಕರ್ನಾಟಕದ ಅವಿಭಾಜ್ಯ ಅಂಗ, ಎಂಇಎಸ್ ಕಾರ್ಯಕರ್ತರು ನಡೆಸುತ್ತಿರುವ ಪುಂಡಾಟಿಕೆಯನ್ನು ಯಾವುದೇ ಮುಲಾಜಿಲ್ಲದೆ ಅವರ ಮೇಲೆ ಗೂಂಡಾಕಾಯಿದೆ ಅಡಿಯಲ್ಲಿ ಬಂಧಿಸಬೇಕು ಮತ್ತಿ ಗಲಭೆಯ ನೇತೃತ್ವ ವಹಿಸಿರುವ ಶಾಸಕ ಸಂಬಾಜಿ ಪಾಟೀಲರನ್ನು ಶಾಸಕ ಸ್ಥಾನದಿಂದ ಕಿತ್ತೆಸೆಯಬೇಕು ಎಂದು ದೇವನಹಳ್ಳಿ ತಾಲೂಕು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಜಿಲ್ಲಾ ಅಧ್ಯಕ್ಷ ಟಿ.ರವಿ ಒತ್ತಾಯಿಸಿದ್ದಾರೆ.
ವೇದಿಕೆಯ ಕಾರ್ಯಕರ್ತರು ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಹೆದ್ದಾರಿಯಲ್ಲಿ ಧರಣಿ ಕುಳಿತು ಪ್ರತಿಭಟನೆ ಮಾಡಿದರಲ್ಲದೆ ಶಾಸಕ ಸಂಬಾಜಿ ಪಾಟೀಲರ ಮೇಲೆಯೂ ಗೂಂಡಾ ಕಾಯಿದೆ ಅನ್ವಯ ಬಂಧಿಸಬೇಕು ಮತ್ತು ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ರವಿ ತಿಳಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಆರ್. ಚೇತನ್ ಮಾತನಾಡಿ ಕನ್ನಡ ವಿರೋಧಿ ಎಲ್ಲ ಸಂಘಟನೆಗಳನ್ನು ಉಚ್ಚಾಟಿಸಿ ಗಡಿಪಾರು ಮಾಡಬೇಕು ಮತ್ತು ಬೆಳಗಾವಿ ಜಿಲ್ಲೆಯ ಗಡಿ ಭಾಗದ ಎಲ್ಲ ಗ್ರಾಮಗಳಲ್ಲಿ ಶಾಂತಿ ನೆಲಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರತಿಭಟನಾ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಪುಟ್ಟೇಗೌಡ, ಜಿಲ್ಲಾ ಗೌರವಾಧ್ಯಕ್ಷ ನಾಗೇಶ್ ಹಾಗೂ ಮಹಿಳಾ ಘಟಕದ ಮಹಿಳೆಯರು ಸಹ ಭಾಗವಹಿಸಿದ್ದರು.