ಸೌಲತ್ತು ಬಳಸಿಕೊಂಡರೆ ಗ್ರಾಪಂ ಅಭಿವೃದ್ಧಿ
ನೆಲಮಂಗಲ: ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಸರ್ಕಾರದ ಸವಲತ್ತುಗಳು ಮತ್ತು ಅನುದಾನಗಳು ಸಂಪೂರ್ಣವಾಗಿ ಸಮರ್ಪಕ ಬಳಕೆಯಾದಾಗ ಮಾತ್ರ ಸಾಧ್ಯ ಎಂದು ಅರಿಶಿನಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ ಅಭಿಪ್ರಾಯಪಟ್ಟರು.
ತಾಲೂಕಿನ ವಾಜರಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಅರಿಶಿನಕುಂಟೆ ಗ್ರಾಮಸಭೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ತಮ್ಮ ಹಳ್ಳಿಗಳಲ್ಲಿ ತಲೆದೋರಿರುವ ಸಮಸ್ಯೆಗಳನ್ನು ತಮ್ಮ ವ್ಯಾಪ್ತಿಯ ಸದಸ್ಯರ ಮೂಲಕ ಅಥವಾ ನೇರವಾಗಿ ಪಂಚಾಯಿತಿ ಸಂಪರ್ಕಿಸಿ ಪರಿಹಾರ ಕಂಡುಕೊಂಡು ನೆರೆ ಹೊರೆಯವರ ಸಮಸ್ಯೆಗಳಿಗೂ ಸ್ಪಂದಿಸುವಂತಾಗಬೇಕು. ಬಹುತೇಕ ಗ್ರಾಮಗಳಲ್ಲಿ ರೈತಾಪಿ ವರ್ಗಕ್ಕೆ ಕಾನೂನಿನ ಅರಿವೇ ಇರುವುದಿಲ್ಲ. ಗ್ರಾಮಗಳಲ್ಲಿನ ವಿದ್ಯಾವಂತ ಯುವಕ ಯುವತಿಯರು ಗ್ರಾಮೀಣ ಭಾಗದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕೃಷಿಕರಿಗೆ ಮಾರ್ಗದರ್ಶಕರಾಗಬೇಕು ಎಂದು ಕಿವಿಮಾತು ಹೇಳಿದರು.
ಜಿಪಂ ಸದಸ್ಯ ಎನ್.ಎಂ.ರಾಮ್ ಮಾತನಾಡಿ, ಜಿಪಂ ವತಿಯಿಂದ ಗ್ರಾಮ ಪಂಚಾಯಿತಿಗಳಿಗೆ ಸಿಗಬೇಕಾದ ಸಲಹೆ ಸಹಕಾರ ಹಾಗೂ ಅನುದಾನಗಳನ್ನು ಸಮರ್ಪಕವಾಗಿ ನೀಡುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪದ್ಮನಾಭ್ ಮಾತನಾಡಿ, ಪಂಚಾಯಿತಿಗೆ ಬಂದಿರುವ ಅಭಿವೃದ್ಧಿ ಕಾಮಗಾರಿಗಳು ಅನುದಾನಗಳ ಬಗ್ಗೆ ಹಾಗೂ ಇದುವರೆಗೂ ನಡೆದಿರುವ ಅಭಿವೃದ್ಧಿ ಕೆಲಸದ ಸಂಪೂರ್ಣ ಮಾಹಿತಿ ನೀಡಿದರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಪಂಚಾಯ್ತಿ ಉಪಾಧ್ಯಕ್ಷ ಅಂಜನಮೂರ್ತಿ, ಮಾಜಿ ಉಪಾಧ್ಯಕ್ಷ ಕೆಂಪರಾಜು, ಮಾಜಿ ಅಧ್ಯಕ್ಷ ಟಿ.ವಿ.ಶುಭ, ಕಾರ್ಯದರ್ಶಿ ಹೇಮಚಂದ್ರ ಇದ್ದರು.