ನಗರಸಭೆ ಅಕ್ರಮದ ಬಗ್ಗೆ ಉಪಲೋಕಾಯುಕ್ತ ಕಿಡಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯಲ್ಲಿ ನೂರಾರು ನಿವೇಶನಗಳು ಅಕ್ರಮ ಖಾತೆಗಳಾಗಿವೆ. ಭೂ ಅಕ್ರಮಗಳ ಗೂಡಾಗಿರುವ ನಗರಸಭೆಯಲ್ಲಿ ಕೋಟ್ಯಂತರ ವೆಚ್ಚದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಗುರುವಾರ ರಾಜ್ಯ ಉಪಲೋಕಾಯುಕ್ತ ಸುಭಾಷ್ ಅಡಿ ನಗರಸಭೆಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಸುತ್ತಮುತ್ತಲ ಗ್ರಾಮಪಂಚಾಯಿತಿಗಳ ವ್ಯಾಪ್ತಿಗೆ ಬರುವ ಜಮೀನುಗಳು ಮತ್ತು ನಿವೇಶನಗಳನ್ನೂ ಅಕ್ರಮವಾಗಿ ಖಾತೆ ಮಾಡಲಾಗಿದೆ. ಅನೇಕ ಸರ್ಕಾರಿ ಜಮೀನುಗಳು ಪ್ರಭಾವಿಗಳ ಪಾಲಾಗಿದೆ. ಹತ್ತಾರು ಕಟ್ಟಡಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಕಾನೂನು ಉಲ್ಲಂಘಿಸಿ ಕಟ್ಟಲಾಗಿದೆ.
ಇದೆಲ್ಲಕ್ಕೂ ನಗರಸಭೆ ಅಧಿಕಾರಿಗಳು ಮತ್ತು ಕೆಲ ಚುನಾಯಿತ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಲ ನಗರಸಭಾ ಸದಸ್ಯರು ಮತ್ತು ಸಾರ್ವಜನಿಕರು ಲೋಕಾಯುಕ್ತಗೆ ದೂರು ನೀಡಿದ್ದರು.
ದೂರುಗಳ ಸುರಿಮಳೆ: ದೂರು ಆಧರಿಸಿ ದಾಖಲೆಗಳ ಪರಿಶೀಲನೆಗೆ ಉಪಲೋಕಾಯುಕ್ತ ಮುಂದಾದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಂಕರ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ಜಾರ್ ರಮೇಶ್, ಹಿರಿಯ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಕಡತಗಳನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಅನೇಕ ಸಾರ್ವಜನಿಕರು ಮತ್ತು ಕೆಲ ಚುನಾಯಿತ ಪ್ರತಿನಿಧಿಗಳು ದಾಖಲೆಗಳೊಂದಿಗೆ ಲೋಕಾಯುಕ್ತರಿಗೆ ದೂರುಗಳನ್ನು ಸಲ್ಲಿಸಿದರು. ನಗರಸಭೆಯಲ್ಲಿ ಭೂಪರಿವರ್ತನೆಯಾಗದೆ ಅಕ್ರಮ ಖಾತೆಗಳನ್ನು ಮಾಡಲಾಗಿದೆ. ದರ್ಗಾಜೋಗಿಹಳ್ಳಿ, ಅರಳುಮಲ್ಲಿಗೆ, ಕಂಟನಕುಂಟೆ ಸೇರಿದಂತೆ ನಗರದ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಅನೇಕ ಜಾಗಗಳನ್ನೂ ನಗರಸಭೆಯಲ್ಲಿ ಖಾತೆ ಮಾಡಿ, ಬಡಾವಣೆಗಳನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ.
ಅಲ್ಲದೆ ಬಯಾಪ ನಿಯಮಾನ್ವಯ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಪರವಾನಗಿ ನೀಡುವಂತಿಲ್ಲ. ಆದರೆ ನಿಯಮಬಾಹಿರವಾಗಿ ಪರವಾನಗಿ ಕೊಡಲಾಗಿದೆ. ಅದೇ ರೀತಿ ನಗರ ವ್ಯಾಪ್ತಿಯ ಹಲವೆಡೆ ಸರ್ಕಾರಿ ಗುಂಡುತೋಪು, ಕುಂಟೆ, ಕೆರೆ, ರಾಜಕಾಲುವೆ ಸೇರಿದಂತೆ ಹಲವು ವಿಧದ ಜಮೀನುಗಳ ಒತ್ತುವರಿಯಾಗಿದೆ.
ಕೆಲವೆಡೆ ನಗರಸಭೆ ಒತ್ತುವರಿಯನ್ನೂ ಖಾತೆ ಮಾಡಿದೆ. ಕೂಡಲೇ ರಾಜಕಾಲುವೆ ಒತ್ತುವರಿ ತೆರವು ಮಾಡಿ, ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವಂತೆ ಒತ್ತಾಯಿಸಿದ ಸಾರ್ವಜನಿಕರ ಅನೇಕ ಅರ್ಜಿಗಳು ಉಪ ಲೋಕಾಯುಕ್ತರ ಕೈಸೇರಿದವು.
ಒಂದು ತಿಂಗಳ ಗಡುವು: ದೂರುಗಳನ್ನು ಸ್ವೀಕರಿಸಿದ ಉಪಲೋಕಾಯುಕ್ತರು, ಎಲ್ಲ ಅಕ್ರಮಗಳು ಮತ್ತು ದೂರುಗಳ ಕುರಿತು ಆಯುಕ್ತರು ಮತ್ತು ತಹಶೀಲ್ದಾರರು 1 ತಿಂಗಳೊಳಗೆ ವರದಿ ಕೊಡುವಂತೆ ಗಡುವು ವಿಧಿಸಿದರು. ಅಕ್ರಮ ಎಸಗಿರುವವರು ಎಷ್ಟೇ ಪ್ರಭಾವಿಗಳಾದರೂ ಯಾವುದೇ ಮುಲಾಜಿಲ್ಲದೆ ತಕ್ಷಣ ಕ್ರಮ ಕೈಗೊಳ್ಳಬೇಕು. ನಗರಸಭೆ ಸಾಮಾನ್ಯ ಸಭೆಯ ನಿರ್ಣಯಗಳನ್ನು ಮೀರಿ ಕೈಗೊಳ್ಳುವ ನಿರ್ಧಾರಗಳ ಕುರಿತು ಜಿಲ್ಲಾಧಿಕಾರಿಗಳು ಅಥವಾ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮುಂದುವರಿಯಬೇಕಾಗುತ್ತದೆ.
ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಆಗಿರುವ ಸರ್ಕಾರಿ ಜಮೀನುಗಳ ಒತ್ತುವರಿ ಮತ್ತು ಅಕ್ರಮಗಳ ಬಗ್ಗೆ ನಗರಸಭೆ ಪೌರಾಯುಕ್ತರು ಮತ್ತು ತಹಶೀಲ್ದಾರರಿಂದ ವರದಿ ತರಿಸಿಕೊಳ್ಳಲಾಗುವುದು. ವರದಿ ಬಂದ ನಂತರ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಅಧಿಕಾರಿಗಳಿಗೆ ತರಾಟೆ
ಉಪ ಲೋಕಾಯುಕ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಗಂಭೀರವಲ್ಲದ ಉತ್ತರಗಳನ್ನು ಕೊಡುತ್ತಿದ್ದ ಕೆಲ ಅಧಿಕಾರಿಗಳನ್ನು ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಅಡಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ನಗರ ವ್ಯಾಪ್ತಿಯ ಶಾಲೆಯೊಂದು ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿರುವ ಬಗ್ಗೆ ಬಂದ ದೂರು ಕುರಿತು ಮಾಹಿತಿ ಕೇಳಿದ ವೇಳೆ ಸಂಬಂಧಪಟ್ಟ ಶಾಲೆಗೆ ನೋಟೀಸ್ ನೀಡಿರುವುದಾಗಿ ಹಾರಿಕೆ ಉತ್ತರ ಕೊಟ್ಟ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ನೋಟಿಸ್ ನೀಡುತ್ತಾ ಕಾಲ ಹರಣ ಮಾಡದೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿ ಎಂಬ ಸಲಹೆ ನೀಡಿದರು.
ನಕಲಿ ಸಹಿ ಬಗ್ಗೆ ತನಿಖೆಗೆ ಆದೇಶ
ನಗರಸಭೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿರುವ ಅಕ್ರಮ ಖಾತೆಗಳ ಮ್ಯುಟೇಶನ್ಗಳಲ್ಲಿ ನನ್ನ ಸಹಿಯನ್ನು ನಕಲು ಮಾಡಲಾಗಿದೆ. ಅದು ನನ್ನ ಸಹಿಯೇ ಅಲ್ಲ ಎಂದು ಹೇಳಿರುವ ನಗರಸಭೆ ಪೌರಾಯುಕ್ತ ಡಾ. ಬಿಳಿಕೆಂಚಪ್ಪ ಹೇಳಿಕೆ ಕುರಿತು ಸೂಕ್ತ ತನಿಖೆಯಾಗಬೇಕು. ನಗರದ ವಿನಾಯಕನಗರ ಸೇರಿದಂತೆ ಕೆಲವೆಡೆ ನಡೆದಿದ್ದ ಅಕ್ರಮ ಖಾತೆಗಳ ಬಗ್ಗೆ ತನಿಖೆ ನಡೆಯುತ್ತಿದ್ದ ವೇಳೆ ಅಕ್ರಮಕ್ಕೆ ಸಂಬಂಧಿಸಿದ ಕಡತ ನಾಪತ್ತೆಯಾಗಿದ್ದ ಪ್ರಕರಣದಲ್ಲಿ 2004ರಲ್ಲೇ ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ ಎಂಬುದನ್ನು ಕೇಳಿ ತಿಳಿದ ಉಪ ಲೋಕಾಯುಕ್ತರು, ಸ್ಥಳಕ್ಕೆ ಪೊಲೀಸರನ್ನು ಕರೆಸಿ, ತನಿಖೆ ತೀವ್ರಗೊಳಿಸುವಂತೆ ಡಿವೈಎಸ್ಪಿ ಕೋನಪ್ಪ ರೆಡ್ಡಿ ಅವರಿಗೆ ಆದೇಶಿಸಿದರು.