ಪರಮೇಶ್ವರ್ಗೆ ಡಿಸಿಎಂ ಹೊಣೆ ನೀಡಲು ಒತ್ತಾಯ
ದೇವನಹಳ್ಳಿ: ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಲ್ಲಿ ಭಾರತ ಜನಜಾಗೃತಿ ಸೇನೆ ರಾಜ್ಯಾಧ್ಯಕ್ಷ ಸಿ.ಮುನಿಯಪ್ಪ ಮನವಿ ಮಾಡಿದ್ದಾರೆ. ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದಿ ರಾಜಕಾರಣಿಯಾಗಿದ್ದು ಈ ಹಿಂದೆ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ಗಾಳಿಪಟ ಸ್ಪರ್ಧೆ 3 ರಂದು
ದೇವನಹಳ್ಳಿ: ಭಾರತದ ಪ್ರಾಚೀನ ಜಾನಪದ ಕ್ರೀಡೆಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಇಲ್ಲಿನ ಜೆಸಿಐ ಸಂಸ್ಥೆಯವರು ಆ.3ರಂದು ಬೆಳಗ್ಗೆ 11.30ಕ್ಕೆ ಗಾಳಿಪಟ ಸ್ಪರ್ಧೆ ಆಯೋಜಿಸಿದ್ದು ವಿವಿಧ ವಿನ್ಯಾಸಗಳ ಗಾಳಿಪಟ ಹಾರಿಸುವವರು ಉತ್ಸವದಲ್ಲಿ ಭಾಗವಹಿಸಬಹುದೆಂದು ಸಂಘದ ಅಧ್ಯಕ್ಷೆ ಭಾಗ್ಯ ರಮೇಶ್ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 9611399897, 9743301219 ಸಂಪರ್ಕಿಸಬೇಕೆಂದು ಕೋರಲಾಗಿದೆ.
ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮ
ರಾಮನಗರ: ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಧಾರವಾಡದ ಸಿಡಾಕ್ ಸಂಸ್ಥೆಯಿಂದ ಎಂಎಸ್ಎಂಇ ಸಚಿವಾಲಯ ನವದೆಹಲಿ ಮತ್ತು ಎನ್ಐ-ಎಂಎಸ್ಎಂಇ ಹೈದರಾಬಾದ್ ಇವರ ಪ್ರಾಯೋಜಕತ್ವದಲ್ಲಿ 18 ದಿನಗಳ ಮೊಬೈಲ್ ಫೋನ್ ದುರಸ್ತಿ ಹಾಗೂ ಸರ್ವಿಸ್ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ರಾಮನಗರದಲ್ಲಿ ಆ.1 ರಿಂದ ಪ್ರಾರಂಭಗೊಳ್ಳಲಿದೆ. ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕನಿಷ್ಠ10-2 ವಿದ್ಯಾರ್ಹತೆ ಹೊಂದಿದ್ದು, 18 ರಿಂದ 35 ವರ್ಷದೊಳಗಿರಬೇಕು. ಆಸಕ್ತರು ಆ.1ರ ಬೆಳಗ್ಗೆ 10ಕ್ಕೆ ಜಿಲ್ಲಾ ಉಪ ನಿರ್ದೇಶಕರು (ತ), ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ವಸಾಹತು, ಬಸ್ ನಿಲ್ದಾಣದ ಹತ್ತಿರ ರಾಮನಗರ ಇಲ್ಲಿ ನೇರ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉಪ ನಿರ್ದೇಶಕರ ಮೊ.9844346777 ಸಂಪರ್ಕಿಸಬಹುದು.
ಗ್ರಾಹಕರ ಸಂವಾದ ಇಂದು
ರಾಮನಗರ: ಬೆಸ್ಕಾಂನಿಂದ ಪ್ರತಿ ತಿಂಗಳ ಮೊದಲನೇ ಶುಕ್ರವಾರ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಚನ್ನಪಟ್ಟಣ ಉಪ ವಿಭಾಗೀಯ ಕಚೇರಿಯ ಆವರಣದಲ್ಲಿ ಗ್ರಾಹಕರ ಸಂವಾದ ಸಭೆ ನಡೆಯಲಿದೆ. ಚನ್ನಪಟ್ಟಣ ಉಪ ವಿಭಾಗೀಯದ ವಿದ್ಯುತ್ ಗ್ರಾಹಕರು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಕುಂದು ಕೊರತೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಎಇಇ ತಿಳಿಸಿದ್ದಾರೆ.
ಕಾರ್ಯಾಲಯ ಉದ್ಘಾಟನೆ
ರಾಮನಗರ: ಆ.1ರ ಮಧ್ಯಾಹ್ನ 12.30ಕ್ಕೆ ಕಂದಾಯ ಭವನದ ಎರಡನೇ ಮಹಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯವನ್ನು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವರು.