ಪ್ರೋತ್ಸಾಹ ಧನ ರು. 45 ರಿಂದ 100ಕ್ಕೆ ಹೆಚ್ಚಳ
ರಾಮನಗರ: ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರತಿ ಸಸಿ ನೆಡಲು ರೈತರಿಗೆ ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹ ಧನವನ್ನು ರು.45 ರಿಂದ ರು.100ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.
ಅರಣ್ಯ ಇಲಾಖೆಯ ರಾಮನಗರ ಪ್ರಾದೇಶಿಕ ವಿಭಾಗದಿಂದ ಚನ್ನಪಟ್ಟಣ ತಾಲೂಕಿನ ಕೆಂಗಲ್ ಬಳಿ ನಿರ್ಮಿಸಿರುವ ಕೆಂಗಲ್ ಹನುಮಂತಯ್ಯ ವೃಕ್ಷೋದ್ಯಾನವನದಲ್ಲಿ ಲಕ್ಷ ವೃಕ್ಷ ಅಭಿಯಾನಕ್ಕೆ ಚಾಲನೆ ಮತ್ತು ಅರಣ್ಯ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅರಣ್ಯ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿ, ಆಧುನೀಕರಣಕ್ಕೆ ಒತ್ತು ನೀಡುವ ಜತೆಯಲ್ಲೇ ಅರಣ್ಯ ಪ್ರದೇಶದ ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ತಮ್ಮ ಸ್ವಂತ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ರೈತರನ್ನು ಉತ್ತೇಜಿಸಲಾಗುತ್ತಿದೆ. ಇದಕ್ಕಾಗಿ ಪ್ರತಿ ಸಸಿಗೆ ರು.45 ಪಾವತಿಸುತ್ತಿದ್ದು, ಅದನ್ನು ರು.100ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ವಿದೇಶಿ ಬಂದೂಕು: ಇಲಾಖೆಗೆ ಪ್ರಸಕ್ತ ವರ್ಷ 90 ವಾಹನಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಅರಣ್ಯ ರಕ್ಷಕರಿಗೆ ಧೈರ್ಯವಾಗಿ ಕೆಲಸ ನಿರ್ವಹಿಸಲು ಅನುಕೂಲ ಆಗುವಂತೆ 175 ವಿದೇಶಿ ಬಂದೂಕುಗಳನ್ನು ಖರೀದಿಸುವುದಕ್ಕೂ ಅನುಮೋದನೆ ದೊರೆತಿದೆ ಎಂದು ರಮಾನಾಥ ರೈ ಹೇಳಿದರು.
ಜಿ.ಪಂ. ಅಧ್ಯಕ್ಷ ಇಕ್ಬಾಲ್ ಹುಸೇನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ಜಿ.ವಿ.ಸುಗೂರ್, ಅಧಿಕಾರಿಗಳಾದ ವಿನಯ್ ಲೂತ್ರ, ಬಿ.ಶಿವಣ್ಣಗೌಡ, ಕೆ.ಎಸ್.ಸುಗಾರ, ವಿಜಯಕುಮಾರ್, ಎಸ್.ಶಾಂತಪ್ಪ, ಶ್ರೀನಿವಾಸರಾವ್, ವಂದಾರಗುಪ್ಪೆ ಗ್ರಾ.ಪಂ ಅಧ್ಯಕ್ಷ ರಾಜೇಶ್, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ಭಾಗವಹಿಸಿದ್ದರು.