ಸ್ವಪಕ್ಷೀಯ ಪುರಪಿತೃಗಳ ತೀವ್ರ ವಿರೋಧ
ಮತ್ತೀಕೆರೆ ಜಯರಾಮ್
ರಾಮನಗರ: ಸ್ವಪಕ್ಷೀಯ ಪುರಪಿತೃಗಳ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ಆರೀಫ್ ಖುರೇಷಿ ಅವರು ವಿವಾದಿತ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಕ್ರಿಯಾ ಯೋಜನೆ ಪರಿಷ್ಕರಣೆಗೆ ಸಮ್ಮತಿಸಿದ್ದು, ತಮ್ಮ ಖಾಸಗಿ ಜಮೀನಿಗೆ ರಸ್ತೆ ನಿರ್ಮಾಣ ಕಾಮಗಾರಿಯನ್ನೂ ಕೈಬಿಟ್ಟಿದ್ದಾರೆ.
ಇದರೊಂದಿಗೆ ಎಸ್.ಎಫ್.ಸಿ. ಮುಕ್ತನಿಧಿ, 13ನೇ ಹಣಕಾಸು ನಿಧಿ ಸೇರಿದಂತೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಕಾಮಗಾರಿ ಅನುಷ್ಠಾನಕ್ಕೆ ಜು.19ರ ಸಭೆಯಲ್ಲಿ ಕೋಲಾಹಲದ ನಡುವೆ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದ ಸಂಬಂಧ ಎದ್ದಿದ್ದ ವಿವಾದ ತಕ್ಕಮಟ್ಟಿಗೆ ಶಮನಗೊಂಡಿದೆ.
ಆರೀಫ್ ಕೈಚಳಕ: ಸ್ವಂತ ಆಸ್ತಿಗೆ ಅಕ್ರಮ ಖಾತೆ ಮಾಡಿಸಿಕೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷ ಆರೀಫ್ ್ಖಖುರೇಷಿ ರಾಜಿನಾಮೆಗೆ ಒತ್ತಾಯಿಸಿ ನಗರಸಭೆಯ ಜು.19ರ ತುರ್ತು ಸಭೆಯಲ್ಲಿ ಜೆಡಿಎಸ್ ಸದಸ್ಯರು ಪ್ರತಿಭಟನೆ ಮತ್ತು ಸಭಾತ್ಯಾಗ ನಡೆಸಿದ್ದರು. ಬಳಿಕ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು. ಕ್ರಿಯಾ ಯೋಜನೆಯಲ್ಲಿ ಅಧ್ಯಕ್ಷ ಆರೀಫ್ ಖುರೇಷಿ ನಗರಸಭೆ ವ್ಯಾಪ್ತಿಗೆ ಒಳಪಡದ ಕೈಲಾಂಚ ಹೋಬಳಿಯ ಶಿಡ್ಲಕಲ್ಲು ಸರ್ವೆ ನಂಬರ್ ಜಾಗದಲ್ಲಿರುವ ತಮ್ಮ ಖಾಸಗಿ ಆಸ್ತಿಗೆ ರಸ್ತೆ ನಿರ್ಮಾಣ ಕಾಮಗಾರಿಯನ್ನೂ ಕ್ರಿಯಾ ಯೋಜನೆ ಸೇರಿಸಿ ಸ್ವಾರ್ಥ ಸಾಧನೆಗೆ ಹುನ್ನಾರ ನಡೆಸಿದ್ದರು.
ಭುಗಿಲೆದ್ದ ಅತೃಪ್ತಿ: ತುರ್ತು ಸಭೆಯಲ್ಲಿ ಜೆಡಿಎಸ್ ಪುರಪಿತೃಗಳು ಪ್ರತಿಭಟನೆ ನಡೆಸಿದಾಗ ಕಾಂಗ್ರೆಸ್ ಸದಸ್ಯರೆಲ್ಲರೂ ಅಧ್ಯಕ್ಷ ಆರೀಫ್ ಖುರೇಷಿ ಬೆಂಬಲಕ್ಕೆ ನಿಂತಿದ್ದರು. ಜೆಡಿಎಸ್ ಸಭಾತ್ಯಾಗ ಬಳಿಕ ಸಭೆಯಲ್ಲಿ ಅಧ್ಯಕ್ಷರು ಸರ್ಕಾರಿ ಹಣದಲ್ಲಿ ಸ್ವಂತ ಜಮೀನಿಗೆ ರಸ್ತೆ ಕಾಮಗಾರಿಯನ್ನು ಕ್ರಿಯಾ ಯೋಜನೆಗೆ ಸೇರಿಸಿದ್ದರು.
ಸಭೆಯಲ್ಲಿ ಕೆಲವಷ್ಟೇ ಕಾಮಗಾರಿಗಳನ್ನು ಪ್ರಸ್ತಾಪಿಸಿ ಭಾರಿ ಮೊತ್ತದ ಕ್ರಿಯಾ ಯೋಜನೆಗೆ ಏಕಪಕ್ಷೀಯವಾಗಿ ಅನುಮೋದನೆ ಪಡೆಯಲಾಗಿತ್ತು. ಅಧ್ಯಕ್ಷರ ಹಿಡನ್ ಅಜೆಂಡಾ ಬಯಲಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದಲ್ಲೇ ಅತೃಪ್ತಿ ಭುಗಿಲೆದ್ದು, 13 ಪುರಪಿತೃಗಳು ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಸಿದರು.
ಸೀಮಿತ ಹೋರಾಟ
ಜೆಡಿಎಸ್ ಹೋರಾಟವು ಅಧ್ಯಕ್ಷ ಆರೀಫ್ ಖುರೇಷಿ ಅವರ ಅಕ್ರಮ ಖಾತೆಗಳಿಗೆ ಸಂಬಂಧಿಸಿದ್ದ ಪ್ರಕರಣಕ್ಕಷ್ಟೇ ಸೀಮಿತವಾಗಿದೆ. ಅಧ್ಯಕ್ಷರ ಸ್ವಂತ ಆಸ್ತಿಗೆ ರಸ್ತೆ ನಿರ್ಮಾಣಕ್ಕೆ ಅನುಮೋದನೆ, ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ಬಗ್ಗೆ ಜೆಡಿಎಸ್ ಪುರಪಿತೃಗಳು ಹೋರಾಟಕ್ಕೆ ಇಳಿದಿಲ್ಲ. ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಸದಸ್ಯರೇ ಆಕ್ಷೇಪಣೆ ಸಲ್ಲಿಸಿದಾಗ ಜೆಡಿಎಸ್ ಸದಸ್ಯರು ಕಾದು ನೋಡುವ ತಂತ್ರ ಅನುಸರಿಸಿದರು. ತಮ್ಮ ಸಭಾತ್ಯಾಗದ ಬಳಿಕ ಅನುಮೋದನೆ ಆಗಿರುವ ಕ್ರಿಯಾ ಯೋಜನೆಯಲ್ಲಿ ಜೆಡಿಎಸ್ ಸದಸ್ಯರ ವಾರ್ಡ್ಗಳಿಗೆ ಸಿಕ್ಕಿರುವ ಅನುದಾನ ಕವಡೆ ಕಾಸಿನಷ್ಟಾಗಿದೆ.
ಆಯುಕ್ತರ ಮಧ್ಯಸ್ಥಿಕೆ
ಜು.19ರ ಸಭೆಯಲ್ಲಿ ತಮ್ಮ ಗಮನಕ್ಕೆ ಬಾರದ ಸಾಕಷ್ಟು ಕಾಮಗಾರಿಗಳನ್ನು ಕ್ರಿಯಾ ಯೋಜನೆಗೆ ಸೇರಿಸಿದ್ದು, ನಿಯಮ ಬಾಹಿರವಾಗಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಹೀಗಾಗಿ ಸದರಿ ಸಭೆಯನ್ನೇ ಅಸಿಂಧುಗೊಳಿಸಬೇಕು ಎನ್ನುವುದು ಆಕ್ಷೇಪಣಾ ಅರ್ಜಿಯಲ್ಲಿ ಕಾಂಗ್ರೆಸ್ ಪುರಪಿತೃಗಳ ಆಗ್ರಹವಾಗಿತ್ತು.
ಮಧ್ಯಸ್ಥಿಕೆ ವಹಿಸಿದ ಆಯುಕ್ತ ಮಾಯಣ್ಣಗೌಡ ಅಧ್ಯಕ್ಷ ಮತ್ತು ದೂರುದಾರ ಪುರಪಿತೃಗಳ ಜತೆ ಎರಡು ಬಾರಿ ನಡೆಸಿದ ಮುಖಾಮುಖಿ ಚರ್ಚೆಯಲ್ಲಿ ರಾಜಿಸೂತ್ರವನ್ನು ರೂಪಿಸಿದರು. ಅದರಂತೆ ಅಧ್ಯಕ್ಷರ ಖಾಸಗಿ ಜಮೀನಿಗೆ ಕಾನೂನು ಬಾಹಿರವಾಗಿ ನಿರ್ಮಿಸಲುದ್ದೇಶಿಸಿದ್ದ ರಸ್ತೆ ಕೈಬಿಡಲಾಗಿದೆ. ಒಂದು ಚುನಾಯಿತ ಸಂಸ್ಥೆಯ 3ನೇ ಒಂದು ಭಾಗಕ್ಕಿಂತ ಹೆಚ್ಚು ಸದಸ್ಯರು ಸಭೆಯನ್ನೇ ಅಸಿಂಧುಗೊಳಿಸಿ ಎಂದು ಆಗ್ರಹಿಸಿ ಅರ್ಜಿ ಸಲ್ಲಿಸಿರುವ ಸಂದರ್ಭದಲ್ಲಿ ಆಯುಕ್ತರು ಹೀಗೆ ಅರಳೀಕಟ್ಟೆ ನ್ಯಾಯ ಪಂಚಾಯಿತಿ ಮೂಲಕ ವಿವಾದ ಬಗೆಹರಿಸಲು ಅವಕಾಶ ಉಂಟೇ ಎನ್ನುವುದೂ ಚರ್ಚೆಗೆ ಗ್ರಾಸವಾಗಿದೆ.
ತಾರತಮ್ಯ ನಿವಾರಿಸಿಲ್ಲ
ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಅನುಷ್ಠಾನಕ್ಕೆ ಅನುಮೋದನೆ ಪಡೆಯಲಾಗಿರುವ ಕ್ರಿಯಾ ಯೋಜನೆಯಲ್ಲಿ ಅನುದಾನ ಹಂಚಿಕೆ ಬಗ್ಗೆಯೂ ಅಸಮಾಧಾನವಿದೆ. ವಾರ್ಡ್ವಾರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಡೆದಿರುವ ಬಗ್ಗೆ ಕಾಂಗ್ರೆಸ್ ಪುರಪಿತೃಗಳೇ ಆರೋಪಿಸಿದ್ದಾರೆ. ಅಧ್ಯಕ್ಷ ಆರೀಫ್ ಖುರೇಷಿ ತಾವು ಪ್ರತಿನಿಧಿಸುತ್ತಿರುವ ವಾರ್ಡ್ ಹಾಗೂ ತಮ್ಮ ಸ್ವಹಿತಾಸಕ್ತಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಹೆಚ್ಚು ಹಣ ಮೀಸಲಿಟ್ಟಿದ್ದರು. ಅಸಮಾಧಾನ ಹೊಗೆಯಾಡಿದ ಬಳಿಕ ಸ್ವಪಕ್ಷೀಯ ಅತೃಪ್ತ ಸದಸ್ಯರ ವಾರ್ಡ್ಗಳಿಗೆ ಅನುದಾನ ಹೆಚ್ಚಿಸಿ, ತಿಪ್ಪೆ ಸಾರಿಸುವ ಕೆಲಸ ನಡೆದಿದೆ.