ಟೆರ್ರಾಫಾರ್ಮದತ್ತ ಬಿಬಿಎಂಪಿ ಹೆಚ್ಚುವರಿ ಕಸ
ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ಈಗ ಮತ್ತೊಮ್ಮೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಮತ್ತು ಸಾಸಲು ಹೋಬಳಿ ಜನರ ನಿದ್ದೆಗೆಡಿಸಿದೆ.
ಹಲವು ವಿವಾದಗಳ ಮಧ್ಯೆಯೇ ಜನ ಇಲ್ಲಿನ ಗುಂಡ್ಲಹಳ್ಳಿ ಬಳಿಯ ಟೆರ್ರಾಫಾರ್ಮ ಘಟಕದಲ್ಲಿ ನಿಯಮಿತ ಪ್ರಮಾಣದ ಕಸ ವಿಲೇವಾರಿಗೆ ಅವಕಾಶ ಕೊಟ್ಟಿದ್ದಾರೆ. ಆದರೆ ಇದೀಗ ಇಲ್ಲಿಗೆ ಬಂದು ಬೀಳುತ್ತಿರುವ ಹೆಚ್ಚುವರಿ ಕಸ ಜನಾಕ್ರೋಶಕ್ಕೆ ಕಾರಣವಾಗಿದೆ.
ಮಂಡೂರು ಸುತ್ತಮುತ್ತಲ ಜನ ಬಿಬಿಎಂಪಿ ಕಸವನ್ನು ಮಂಡೂರಿನ ಘಟಕದಲ್ಲಿ ವಿಲೇವಾರಿ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಕಳೆದ 4 ದಿನಗಳಿಂದ ಪ್ರತಿಭಟನೆಗಿಳಿದಿದ್ದಾರೆ. ಈ ಹಿನ್ನಲೆಯಲ್ಲಿ ಮಂಡೂರು ಘಟಕದಲ್ಲಿ ವಿಲೇವಾರಿಯಾಗುತ್ತಿದ್ದ ಕಸವನ್ನು ದೊಡ್ಡಬಳ್ಳಾಪುರ ತಾಲೂಕಿನ ಟೆರ್ರಾಫಾರ್ಮ ಘಟಕಕ್ಕೆ ತಂದು ಸುರಿಯಲು ಬಿಬಿಎಂಪಿ ಹುನ್ನಾರ ನಡೆಸಿದೆ ಎಂದ ಸುದ್ದಿ ಜನ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈಗಾಗಲೇ ಹಲವು ಸಮಸ್ಯೆಗಳಿಂದ ನರಳುತ್ತಿರುವ ಇಲ್ಲಿನ ಜನ ಹೆಚ್ಚುವರಿ ಕಸದಿಂದ ಉದ್ಭವಿಸಬಹುದಾದ ತಲ್ಲಣಗಳ ಕುರಿತು ತಲೆಕೆಡಿಸಿಕೊಂಡಿದ್ದಾರೆ. ಅವೈಜ್ಞಾನಿಕ ರೀತಿಯ ವಿಲೇವಾರಿಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ಆರೋಪ: ಘಟಕದಲ್ಲಿ ಕಸ ವಿಲೇವಾರಿ ಅವೈಜ್ಞಾನಿಕವಾಗಿದೆ. ದಿನನಿತ್ಯ ಇಲ್ಲಿಗೆ ಬಂದು ಬೀಳುತ್ತಿರುವ ರಾಶಿಗಟ್ಟಲೆ ಕಸದಿಂದ ಅನೇಕ ಸಮಸ್ಯೆಗಳು ಉಲ್ಪಣಿಸಿವೆ. ಸುಮಾರು 150 ಎಕರೆಗೂ ಅಧಿಕ ಪ್ರದೇಶ ವ್ಯಾಪಿಸಿರುವ ಟೆರ್ರಾಫಾರಂ ಘಟಕದಲ್ಲಿ ಬೆಟ್ಟದೋಪಾದಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸ ಬಿದ್ದಿದೆ. ಲಭ್ಯ ಮಾಹಿತಿ ಪ್ರಕಾರ ಸಾವಿರಾರು ಟನ್ ಕಸ ಈಗಾಗಲೇ ಘಟಕದಲ್ಲಿ ವಿಲೇವಾರಿ ಆಗದೆ ಬಿದ್ದಿದೆ. ಈ ಹಿಂದೆ ಕಸ ವಿಲೇವಾರಿ ವಿರುದ್ಧ ಉಗ್ರ ಪ್ರತಿಭಟನೆಗೆ ಮುಂದಾದ ವೇಳೆ ಬಿಬಿಎಂಪಿ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ನ್ಯಾಯ-ಪಂಚಾಯಿತಿ ಮಾಡಿ ದಿನಕ್ಕೆ 20ರಿಂದ 30 ಲಾರಿ ಕಸ ಮಾತ್ರ ತಂದು ಸುರಿಯುವಂತೆ ತಾತ್ಕಾಲಿಕ ಅನುಮತಿ ನೀಡಲಾಗಿತ್ತು. ಆದರೆ ಕಸ ಬರುವುದು ಮಾತ್ರ ನಿಂತಿಲ್ಲ. ಈ ಮಧ್ಯೆ ಹೆಚ್ಚುವರಿ ಕಸವನ್ನು ತರುವ ಹುನ್ನಾರ ಖಂಡನೀಯ ಎನ್ನುತ್ತಾರೆ ಸ್ಥಳೀಯ ರೈತ ನಾರಾಯಣಸ್ವಾಮಿ.
ಆರೂಢಿ ಘಟಕ ಪ್ರಸ್ತಾವನೆ ರದ್ದು : ಈ ಮಧ್ಯೆ ತಾಲೂಕಿನ ಸಾಸಲು ಹೋಬಳಿ ಆರೂಡಿ ಗ್ರಾಮದ ಬಳಿ ಮತ್ತೊಂದು ಕಸ ವಿಲೇವಾರಿ ಘಟಕ ಸ್ಥಾಪಿಸಲು ನಡೆಸಿದ್ದ ಚಿಂತನೆ ಸದ್ಯಕ್ಕೆ ನಿಂತಿದೆ. ಸ್ಥಳೀಯರ ವ್ಯಾಪಕ ಆಕ್ರೋಶ ಮತ್ತು ರೈತರ ವಿರೋಧದ ಹಿನ್ನಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಘಟಕದ ಪ್ರಸ್ತಾವನೆ ಬಗ್ಗೆ ಮರು ಪರಿಶೀಲನೆ ನಡೆಯುತ್ತಿದೆ. ಸರ್ಕಾರದ ಹಂತದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳು ಸೇರಿದಂತೆ ಎಲ್ಲ ವರ್ಗದ ಜನರ ಒಕ್ಕೊರಲ ವಿರೋಧ ಸರ್ಕಾರವನ್ನು ಗೊಂದಲಕ್ಕೆ ಸಿಲುಕಿಸಿದೆ. ಬಲ್ಲ ಮೂಲಗಳ ಪ್ರಕಾರ ಘಟಕ ಸ್ಥಾಪನೆ ಪ್ರಸ್ತಾವನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ನಿರಂತರ ಬರುತ್ತಿವೆ ಲಾರಿಗಳು: ಕಳೆದ 3-4 ದಿನಗಳಿಂದ ಟೆರ್ರಾಫಾರ್ಮಗೆ ಬರುವ ಕಸದ ಲಾರಿಗಳ ಸಂಖ್ಯೆ ಹೆಚ್ಚಿದೆ. ನಿರಂತರವಾಗಿ ಲಾರಿಗಳು ಘಟಕ ಪ್ರವೇಶಿಸುತ್ತಿವೆ ಎಂದು ಆರೋಪಿಸುವ ಸ್ಥಳೀಯರು, ಘಟಕದ ಸಾಮರ್ಥ್ಯ ಮೀರಿ ವಿಲೇವಾರಿಗೆ ಅವಕಾಶ ಕೊಡಬಾರದು. ತಪ್ಪಿದಲ್ಲಿ ವ್ಯಾಪಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮಂಡೂರು ಘಟಕದ ಬಳಿ ಹೋರಾಟ ನಡೆಯುತ್ತಿರುವ ಹಿನ್ನಲೆಯಲ್ಲಿ ಕಸದ ಲಾರಿಗಳು ದೊಡ್ಡಬಳ್ಳಾಪುರ ತಾಲೂಕಿನತ್ತ ಮುಖಮಾಡಿವೆ.
ಅವಕಾಶ ಕೊಡಲ್ಲ: ಈ ಮಧ್ಯೆ ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ, ಯಾವುದೇ ಕಾರಣಕ್ಕೂ ಹೆಚ್ಚುವರಿ ಕಸ ಟೆರ್ರಾಫಾರಂಗೆ ಬರಲು ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳಿಗೆ ಕೂಡ ಸಮಸ್ಯೆ ಮನವರಿಕೆ ಮಾಡಿಕೊಡಲಾಗಿದೆ. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ. ಒಂದು ವೇಳೆ ಬಿಬಿಎಂಪಿ ಹೆಚ್ಚುವರಿ ಕಸ ದೊಡ್ಡಬಳ್ಳಾಪುರ ಪ್ರವೇಶಿಸಿದ್ದೇ ಆದಲ್ಲಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ.
ಗುಂಡ್ಲಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಈಗಾಗಲೇ ಕಸವಿಲೇವಾರಿ ಘಟಕ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿವೆ. ಕೆಲ ರೋಗಗಳಿಗೂ ಕಾರಣವಾಗಿದೆ ಎಂಬ ಆರೋಪವಿದೆ. ಜನರಲ್ಲಿ ಬಿಬಿಎಂಪಿ ಕಸ ವಿಲೇವಾರಿ ವಿಚಾರ
ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಜನ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.