ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ಪ್ರತಿ ದಿನ 2.10 ಲಕ್ಷ ಘನ ಅಡಿಯಷ್ಟು ಮರಳು ಅಕ್ರಮ ಸಾಗಣೆ

Rashmi Kasaragodu
Updated On : 6 Jun 2014, 2:27 am

ಕ.ಪ್ರ.ವಾರ್ತೆ  ರಾಮನಗರ  ಜೂ.5
ಈ ಜಿಲ್ಲೆಯಲ್ಲಿ ಪ್ರತಿ ದಿನ 2.10 ಲಕ್ಷ ಘನ ಅಡಿಯಷ್ಟು ಮರಳನ್ನು ಅಕ್ರಮವಾಗಿ ಬಗೆದು, 300ಕ್ಕೂ ಹೆಚ್ಚು ಲಾರಿಗಳಲ್ಲಿ ಸಾಗಣೆ ಮಾಡಲಾಗುತ್ತಿದೆ. ವರ್ಷಕ್ಕೆ 7.56 ಕೋಟಿ ಘನ ಅಡಿಯಷ್ಟು ಮರಳು ಲೂಟಿಯಾಗುತ್ತಿದೆ. ಇದರ ಒಟ್ಟು ಮೌಲ್ಯ ರು.226 ಕೋಟಿ ಆಗಿದೆ.
ಈ ಮಾಹಿತಿಯನ್ನು ಜಯ ಕರ್ನಾಟಕ ಸಂಘಟನೆ ವಕ್ತಾರ ಪ್ರಕಾಶ್ ರೈ ನೇತೃತ್ವದಲ್ಲಿ ಪದಾಧಿಕಾರಿಗಳ ತಂಡವು ಅಕ್ರಮ ಮರಳುಗಾರಿಕೆ ತಡೆಗೆ 15 ದಿನದ ಗಡುವು ನೀಡಿ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಬಹಿರಂಗಪಡಿಸಿದೆ.  
ಈ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧಾಜ್ಞೆ ಹೇರಿದ್ದರೂ ಕಳೆದೊಂದು ದಶಕದಿಂದ ಹೇರಳ ಪ್ರಮಾಣದ ಮರಳು ಲೂಟಿ ನಡೆಯುತ್ತಿದೆ. ಇದರಿಂದ ಪರಿಸರದ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮ ಬಳ್ಳಾರಿ ಗಣಿಗಾರಿಕೆಗಿಂತಲೂ ಹೆಚ್ಚು ಎಂದು ನಿಯೋಗ ವಿವರಿಸಿದೆ.  
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ, ಸಾರಿಗೆ, ಅರಣ್ಯ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈ ಅಕ್ರಮದಲ್ಲಿ ನೇರ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದರು.
ಈ ಅಕ್ರಮ ಮರಳುಗಾರಿಕೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ಸಾವಿರಾರು ಅಡಿ ಆಳಕ್ಕೆ ಕುಸಿದಿದೆ. ಸುಮಾರು 80 ಸಾವಿರಕ್ಕೂ ಹೆಚ್ಚು ಕೃಷಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಸಾಲದ ಶೂಲಕ್ಕೆ ಸಿಲುಕಿದ ರೈತರನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.  ಮಿತಿ ಮೀರಿದ ಪ್ರಮಾಣದಲ್ಲಿ ಮರಳು ತುಂಬಿಕೊಂಡು ಸಂಚರಿಸುವ ಲಾರಿಗಳಿಂದ ರಸ್ತೆಗಳು ಹಾಳಾಗಿವೆ. ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು ಶಿಥಿಲವಾಗಿವೆ. ಸಾಕಷ್ಟು ಸಾವು, ನೋವು ಸಂಭವಿಸಿದ್ದರೂ ಕ್ರಮ ಜರುಗಿಸದಿರುವುದು ಏಕೆ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.  
ಅಕ್ರಮ ಮರಳುಗಾರಿಕೆ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯು ಬೆಂಗಾಡಾಗುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಂಡು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ನಿಯೋಗ ಆಗ್ರಹಿಸಿತು.
15 ದಿನದಲ್ಲಿ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ  ಅನಿರ್ದಿಷ್ಟಾವಧಿ ವಾಹನ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಯಿತು.
ನಿಯೋಗದಲ್ಲಿ ಡಿ.ಜಿ.ಕುಮಾರ್, ಕೆ.ರವಿ, ಕೃಷ್ಣಪ್ಪ, ಆನಂದ್, ಸಂಜೈವರೈ, ಜಗದೀಶ್, ಭಾಗ್ಯೇಶ್ ರೈ, ದಿಲೀಪ್, ಸೋಮಸುಂದರ್, ರಮೇಶ್, ರಾಜೇಂದ್ರ, ರೇವಣ್ಣ, ನಾಗಚಂದ್ರ, ಪ್ರಶಾಂತ್, ನಂದೀಶ್, ಕುಮಾರ್, ಕಾಳಪ್ಪ, ಮಧು, ರಾಜಣ್ಣ, ಗಿರೀಶ್, ಸ್ವಾಮಿ, ರವಿಕಿರಣ್, ವಿಜಯ್ ಇದ್ದರು.


ಯಾರಿಗೆ ಎಷ್ಟು ಲಂಚ?


ಅಕ್ರಮ ಮರಳುಗಾರಿಕೆಯಿಂದ ಜಿಲ್ಲಾಡಳಿತದ ಅಧಿಕಾರಿಗಳಿಗೆ ರು.30 ಲಕ್ಷ, ಎಸ್ಪಿಗೆ ರು.15 ಲಕ್ಷ, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗೆ ರು.10 ಲಕ್ಷ ಮಾಸಿಕ ಲಂಚ ಪಾವತಿಯಾಗುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಇದು, ನಮ್ಮ ಆರೋಪವಲ್ಲ. ಬದಲಿಗೆ ಮರಳು ದಂಧೆಕೋರರೇ ಹೇಳಿಕೊಂಡು ತಿರುಗಾಡುತ್ತಿರುವ ಮಾತಾಗಿದೆ ಎನ್ನುವುದನ್ನು ಸಂಘಟನೆ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದು, ಮರಳು ದಂಧೆಗೆ ಕಡಿವಾಣ ಹಾಕದಿರುವುದನ್ನು ಗಮನಿಸಿದರೆ ಆರೋಪಕ್ಕೆ ಪುಷ್ಟಿ ಸಿಕ್ಕಂತಾಗಿದೆ ಎಂದಿದ್ದಾರೆ. ಜಿಲ್ಲಾಡಳಿತ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ, ಸಾರಿಗೆ, ಅರಣ್ಯ ಇಲಾಖೆಗಳು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಪ್ರತಿ ಲಾರಿ ಲೋಡ್ ಲೆಕ್ಕದಲ್ಲಿ ಲಂಚದ ಹಣ  ಸಂದಾಯವಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.  ಈ ಪ್ರಕಾರ ಪ್ರತಿ ಲಾರಿ ಮಾಲೀಕರಿಂದ ಡಿವೈಎಸ್ಪಿ ಕಚೇರಿಗೆ ರು.6 ಸಾವಿರ, ಸಿಪಿಐ ಕಚೇರಿಗೆ ರು.5 ಸಾವಿರ, ಪ್ರತಿ ಪೊಲೀಸ್ ಠಾಣೆಗೆ ರು.3 ಸಾವಿರ, ಸಾರಿಗೆ ಇಲಾಖೆಗೆ ರು.5 ಸಾವಿರ ಹಣ ಸಂದಾಯದ ಮಾಹಿತಿ ದಂಧೆಕೋರರಿಂದ ಬಂದಿದೆ ಎಂದು ಆರೋಪಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement