ವಸುಂದರೆ ಅಂಗಳದ ಜೀವಸಂಕುಲಕ್ಕೆ ಅಪಾಯ
ಕ.ಪ್ರ.ವಾರ್ತೆ ರಾಮನಗರ ಜೂ.5
ಅಗಣಿತ ಗ್ರಹತಾರೆಗಳನ್ನು ಹೊಂದಿರುವ ಬ್ರಹ್ಮಾಂಡದಲ್ಲಿ ಜೀವ ಸಂಕುಲವಿರುವ ಏಕೈಕ ಗ್ರಹ ಭೂಮಿ. ಮಾನವನ ದುರಾಸೆಯ ಪರಮಾವಧಿಯ ಫಲವಾಗಿ ವಸುಂದರೆ ಅಂಗಳದಲ್ಲಿನ ಜೀವಸಂಕುಲಗಳು ಅಪಾಯದ ಅಂಚಿನಲ್ಲಿವೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರ ಡಾ. ಎಂ.ವಿ. ವೆಂಕಟೇಶ್ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ರೋಟರಿ ಸಂಸ್ಥೆ, ಆರ್‌ಟಿಒ ಹಾಗೂ ಅರಣ್ಯ ಇಲಾಖೆ ಹಮ್ಮಿ ಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಭೂಮಿಯ ಮೇಲಿರುವ ಜೀವ ವೈವಿದ್ಯತೆ ಮತ್ತು ಅವುಗಳು ಪರಸ್ಪರ ಹೇಗೆ ಪರಿಸರಕ್ಕೆ ಪೂರಕವಾಗಿವೆ ಎಂಬುದನ್ನು ಅರಿತುಕೊಳ್ಳದೆ ನಾವೆಲ್ಲ ಅವಿವೇಕಿಗಳಂತೆ ವರ್ತಿಸಿ ಪರಿಸರವನ್ನು ನಾಶಮಾಡುವ ಜತೆಗೆ ನಮ್ಮನ್ನೂ ನಾಶಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.
ಮನುಷ್ಯನ ದುರಾಸೆಯಿಂದ ಪ್ರತಿನಿತ್ಯವು ಒಂದಲ್ಲ ಒಂದು ಜೀವಸಂಕುಲ ಅವಸಾನ ಹೊಂದುತ್ತಿದೆ. ನದಿಗಳು ಬತ್ತಿ ಹೋಗುತ್ತಿವೆ. ಜೀವ ಸಂಕುಲದ ಆಹಾರ ಸರಪಳಿಯ ಪ್ರಮುಖ ಕೊಂಡಿಯಾದ ಪ್ರಾಣಿಗಳು ಕಣ್ಮರೆಯಾಗುತ್ತಿವೆ. ಸಮುದ್ರದ ಮಂಜುಡ್ಡೆಗಳು ಕರಗಿ ಸಮುದ್ರ ಮಟ್ಟ ಹೆಚ್ಚಿ ದ್ವೀಪಗಳು ತೀರದ ಪ್ರದೇಶಗಳು ಅವನತಿ ಹೊಂದುತ್ತಿವೆ. ಹವಮಾನ ವೈಪರಿತ್ಯ ಉಂಟಾಗಿ ಸಾವು ನೋವುಗಳು ಹೆಚ್ಚಿವೆ. ಸಮುದ್ರದಲ್ಲಿ ಕಲ್ಮಶ ಹೆಚ್ಚಿ ಪ್ರಾಣಿಗಳ ಆಹಾರದ ಮೂಲವಾದ ಸಮುದ್ರ ಗಿಡಗಳು ಅಲ್ಗೆ, ಪಂಗಿ ಸೇರಿದಂತೆ ಜಲಚರಗಳು ನಾಶವಾಗುತ್ತಿವೆ ಎಂದು ಮಾಹಿತಿ ನೀಡಿದರು.
ಭೂಮಿ ಮೇಲಿನ ಪ್ರಕೃತಿ ವೈಪರಿತ್ಯಕ್ಕೆ ಮನುಷ್ಯನ ಅತಿ ಆಸೆಯೆ ಮೂಲವೆಂಬುದನ್ನು ಮನಗಂಡ ವಿಶ್ವ ಸಂಸ್ಥೆಯು ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸುವ ಜವಾಬ್ದಾರಿಯನ್ನು ಮನಗಂಡು ಪರಿಸರ ಪೂರಕ ಅಭಿವೃದ್ಧಿಯ ಚಿಂತನೆಗೆ ನಾಂದಿ ಹಾಡಿದೆ ಎಂದು ತಿಳಿಸಿದರು.
ಅವಕಾಶ: ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಆಡಳಿತಾಧಿಕಾರಿ ಕೆ.ಪಿ.ಶಿವಪ್ಪ ಮಾತನಾಡಿ ಪರಿಸರದ ಆಳವಾದ ಕಲ್ಪನೆ ನಮಗೆ ಇದ್ದಿದ್ದರೆ ಜೀವ ಸಂಕುಲ ಬದುಕಲು ಅವಕಾಶ ಕಲ್ಪಿಸುತ್ತಿದ್ದೆವು. ಸ್ವಾರ್ಥಕ್ಕಾಗಿ ಮನುಷ್ಯ ಪರಿಸರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಇಪ್ಪತ್ತು ವರ್ಷಗಳಲ್ಲಿ ಆಹಾರ ಹಾಗೂ ನೀರಿನ ಕೊರತೆ ಕಾಣಲಿದ್ದು ಜೀವ ಸಂಕುಲವೇ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ. ಪ್ರತಿಯೊಬ್ಬ ವ್ಯಕ್ತಿ ಒಂದು ಗಿಡ ನೆಟ್ಟು ಪೋಷಿಸಿ ಪರಿಸರಕ್ಕೆ ಕೊಡುಗೆ ನೀಡಬೇಕೆಂದು ತಿಳಿಸಿದರು.
ಗೋ ಗ್ರೀನ್ ಕಾರ್ಯಕ್ರಮಕ್ಕೆ ಚಾಲನೆ: ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆ, ಶಾಂತಿನಿಕೇತನ ಶಿಕ್ಷಣ ಸಂಸ್ಥೆ, ಅರಣ್ಯ ಇಲಾಖೆಯ ಸಹಯೋಗದಲ್ಲಿ ನಗರದ ವಿವೇಕಾನಂದನಗರ ಬಡಾವಣೆಯಲ್ಲಿ ಒಂದು ಸಾವಿರ ಗಿಡ ನೆಟ್ಟು ಹಸಿರೀಕರಣ ಗೊಳಿಸುವ ಕಾರ್ಯಕ್ರಮವನ್ನು ಒಂದು ವರ್ಷದ ಅವಧಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಇಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಗೋಗ್ರೀನ್ ಕಾರ್ಯಕ್ರಮಕ್ಕೆ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಶಾಂತಿನಿಕೇತನ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕುಮಾರಸ್ವಾಮಿ, ರೋಟರಿ ಸಂಸ್ಥೆ ಅಧ್ಯಕ್ಷ
ಆರ್.ಜಿ. ಚಂದ್ರಶೇಖರ್, ಸೌಮ್ಯಕುಮಾರಸ್ವಾಮಿ, ರೊಟರಿಯನ್ ಸಿದ್ದಪ್ಪಾಜಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಪರಿಸರ ಗೀತೆ ಹಾಗೂ ಪ್ರಾಣಿಗಳ ಜಗತ್ತಿನ ವೈವಿಧ್ಯಮಯ ಸಾಕ್ಷ್ಯಚಿತ್ರವನ್ನು ತೋರಿಸಲಾಯಿತು.