ವಿದ್ಯುತ್ ಸ್ಪರ್ಶ: ಹೆಣ್ಣಾನೆ ಸಾವು
ಕನಕಪುರ: ಕನಕಪುರ ತಾಲೂಕು ಹೇರಿಂದ್ಯಾಪನಹಳ್ಳಿ ಸಮೀಪದ ಕೂಮೇಗೌಡನದೊಡ್ಡಿಯಲ್ಲಿ ಹೆಣ್ಣಾನೆಯೊಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಬನ್ನೇರುಘಟ್ಟ ಅಭಯಾರಣ್ಯ ಪ್ರದೇಶದ ಕಾಡಿನಿಂದ ಮೇವನ್ನು ಅರಸಿ ಗ್ರಾಮಕ್ಕೆ ಬಂದಿದ್ದ ಆನೆ ಸಾವನ್ನಪ್ಪಿದೆ. ಮೃತ ಆನೆಯ ಕಳೇಬರವನ್ನು ಕಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ರವಿಕುಮಾರ್, ಉಪಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಸ್ವಾಮಿ, ಬೆಸ್ಕಾಂ ಅಭಿಯಂತರ ಪುರುಷೋತ್ತಮ್, ಬೆಸ್ಕಾಂ ತನಿಖಾದಳ ಅಧಿಕಾರಿ ಶ್ರೀನಿವಾಸ್, ಪಶುವೈದ್ಯಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದರು.
ಫಲಾನುಭವಿಗಳಿಗೆ ಮೀನು ಹಿಡಿಯುವ ಕಿಟ್ ವಿತರಣೆ
ದೇವನಹಳ್ಳಿ: ಇಲ್ಲಿನ ತಾಲೂಕು ಪಂಚಾಯಿತಿಯಲ್ಲಿ ಬುಧವಾರ ಮೀನುಗಾರಿಕೆ ಇಲಾಖೆಯಿಂದ 12 ಮಂದಿ ಫಲಾನುಭವಿಗಳಿಗೆ ತಲಾ 10 ಸಾವಿರ ರು. ಬೆಲೆಯ ಮೀನು ಹಿಡಿಯುವ ಕಿಟ್ಟನ್ನು ಶಾಸಕ ಪಿಳ್ಳಮುನಿಶಾಮಪ್ಪ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಫಲಾನುಭವಿಗಳು ಸರಿಯಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು. ಅಲ್ಲದೆ ಸರ್ಕಾರ ಕೊಟ್ಟಿರುವ ಸಲಕರಣೆಗಳನ್ನು ಮನೆಗಳಲ್ಲಿ ಮೂಲೆಗೆ ಎಸೆಯದೆ ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಲೋಹಾರ್, ಮೀನುಗಾರಿಕೆ ಇಲಾಖೆ ಸಹಾಯಕ
ನಿರ್ದೇಶಕಿ ಆಶಾಲತ, ತಾ.ಪಂ. ಸದಸ್ಯರುಗಳಾದ ನರಸಿಂಹಮೂರ್ತಿ, ಮೀನಾಕ್ಷಿ ಮುನಿಕೃಷ್ಣಪ್ಪ, ಮಂಜುಳ ಶ್ರೀನಿವಾಸ್ ಹಾಗೂ ಮುಖಂಡರಾದ ತ್ಯಾಗರಾಜ್, ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ, ಬೆಂ. ಹಾಲು ಒಕ್ಕೂಟ ನಿರ್ದೇಶಕ ಬಿ. ಶ್ರೀನಿವಾಸ್ ಉಪಸ್ಥಿತರಿದ್ದರು.