ಸಾಮಾಜಿಕ ಕಾರ್ಯಕರ್ತೆ ಡಾ.ಗೌರಮ್ಮ ಇನ್ನಿಲ್ಲ
ದೊಡ್ಡಬಳ್ಳಾಪುರ: ಇಲ್ಲಿನ ಹಿರಿಯ ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಹೋರಾಟಗಾರ್ತಿ ಹಾಗೂ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಡಾ.ಕೆ.ಸಿ.ಗೌರಮ್ಮ (74) ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ.
ಇಲ್ಲಿನ ದೇವಾಂಗ ಮಂಡಲಿಯ ಹಾಲಿ ಉಪಾಧ್ಯಕ್ಷೆಯಾಗಿ ಹಾಗೂ ದಿ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಚರರ್ಸ್ ಕೋ ಆಪರೇಟಿವ್ ಬ್ಯಾಂಕ್ (ಟಿಎಂಸಿ ಬ್ಯಾಂಕ್) ನ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ದೊಡ್ಡಬಳ್ಳಾಪುರದ ಮಹಿಳಾ ಸಮಾಜದ ಮಾಜಿ ನಿರ್ದೇಶಕಿಯಾಗಿ, ಅನೇಕ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘಗಳ ಸಕ್ರಿಯ ಪದಾಧಿಕಾರಿಯಾಗಿ ಹಾಗೂ ಮುಂಚೂಣಿ ನಾಯಕತ್ವವನ್ನು ವಹಿಸಿಕೊಂಡು ಅವರು ಕೆಲಸ ಮಾಡುತ್ತಿದ್ದರು. ದೊಡ್ಡಬಳ್ಳಾಪುರ ನಗರಸಭೆ ಸದಸ್ಯರಾಗಿ 1 ಬಾರಿ ಹಾಗೂ ಪುರಸಭಾ ಸದಸ್ಯರಾಗಿ 1 ಬಾರಿ ಆಯ್ಕೆಯಾಗಿದ್ದರು.
ಸಂತಾಪ: ಡಾ.ಕೆ.ಸಿ.ಗೌರಮ್ಮ ಅವರ ನಿಧನಕ್ಕೆ ಇಲ್ಲಿನ ದೇವಾಂಗ ಮಂಡಲಿ ಸಂತಾಪ ವ್ಯಕ್ತಪಡಿಸಿದೆ. ಬುಧವಾರ ದೇವಾಂಗ ಮಂಡಲಿ ಕಲ್ಯಾಣ ಮಂದಿರದಲ್ಲಿ ಗೌರಮ್ಮ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್, ಗೌರಮ್ಮ ಅವರ ಸಾಮಾಜಿಕ ಸೇವೆ ಸ್ತುತ್ಯಾರ್ಹ ಎಂದರು.
ಗಣ್ಯರ ಸಂತಾಪ: ಗೌರಮ್ಮ ಅವರ ನಿಧನಕ್ಕೆ ಶಾಸಕ ಟಿ.ವೆಂಕಟರಮಣಯ್ಯ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಟಿಎಂಸಿ ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್, ವಿವಿಧ ಮಹಿಳಾ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ