ರಸ್ತೆ ಡಾಂಬರೀಕರಣಕ್ಕೆ ಚಾಲನೆ
ಚನ್ನಪಟ್ಟಣ: ಯುಜಿಡಿ ಕಾಮಗಾರಿಯಿಂದಾಗಿ ಅಸ್ತವ್ಯಸ್ತಗೊಂಡಿದ್ದ ಪಟ್ಟಣದ ರಸ್ತೆಗಳಿಗೆ ಕೊನೆಗೂ ಮುಕ್ತಿ ದೊರಕಿದೆ. ಪಟ್ಟಣದ ಪ್ರಮುಖ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ನಗಸರಭಾ ಉಪಾಧ್ಯಕ್ಷ ಮುದ್ದುಕೃಷ್ಣೇಗೌಡ ಶುಕ್ರವಾರ ಚಾಲನೆ ನೀಡುವ ಮೂಲಕ ಪಟ್ಟಣದ ನಾಗರಿಕರು ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಮಾಡಿದರು.
ಪಟ್ಟಣದ ಚರ್ಚ್ ರಸ್ತೆಯ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ರಸ್ತೆ ಅವ್ಯವಸ್ಥೆ ಬಗ್ಗೆ ನಗರಸಭೆ ಗಮನ ಹರಿಸಿದ್ದು, ಪಟ್ಟಣದ ಪ್ರಮುಖ ರಸ್ತೆಗಳ ಡಾಂಬರೀಕರಣ ಕಾಮಗಾರಿಯನ್ನು ಮೊದಲ ಹಂತವಾಗಿ ರು.5 ಕೋಟಿ ಅಂದಾಜು ವೆಚ್ಚದಲ್ಲಿ ಆರಂಭಿಸಿರುವುದಾಗಿ ತಿಳಿಸಿದರು.
ನಗರೋತ್ಥಾನ ಯೋಜನೆಯಡಿ ರು. 20 ಕೋಟಿ ಅನುದಾನ ದೊರಕಲಿದ್ದು ಈ ಹಣದಲ್ಲಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಾಗಿ ಮಾಹಿತಿ ನೀಡಿದರು. ಅಂಚೆ ಕಚೇರಿ ರಸ್ತೆ ಮತ್ತು ಚರ್ಚ್ ರಸ್ತೆಯ ಅಭಿವೃದ್ಧಿಗೆ ರು.50 ಲಕ್ಷ ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ ಕುವೆಂಪು ನಗರ 12ನೇ ಕ್ರಾಸ್, ಚಿಕ್ಕಮಳೂರು, ಸೈಯ್ಯದ್ವಾಡಿ, ತಟ್ಟೆಕೆರೆ, ಎಲೆಕೇರಿಯಲ್ಲಿ ಡಾಂಬರೀಕರಣ ಕಾಮಗಾರಿ ಆರಂಭ ಗೊಂಡಿದ್ದು ಉಳಿದೆಡೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ತಂಬಾಕು ತಡೆಗೆ ಕಾನೂನು ಅರಿವು
ರಾಮನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎಂ.ಎಚ್ ಕಾನೂನು ಕಾಲೇಜಿನಿಂದ ತಂಬಾಕು ನಿಯಂತ್ರಣ ಕಾಯ್ದೆಗಳ ಕುರಿತ ಕಾನೂನು ಅರಿವು ಕಾರ್ಯಕ್ರಮವು ಜೂ.7ರ ಬೆಳಗ್ಗೆ 9ಕ್ಕೆ ನಗರದ ಎಂ.ಎಚ್. ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ನ್ಯಾಯಾಧೀಶ ಎಸ್.ಎಚ್.ಹೊಸಗೌಡರ ಉದ್ಘಾಟಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕುಮಾರ್, ಉಪಾಧ್ಯಕ್ಷ ಸಿ.ಚಿಕ್ಕಪ್ಪಾಜಿ, ಕಾರ್ಯದರ್ಶಿ ಎಂ.ಜಿ.ಮಹೇಶ್ ಭಾಗವಹಿಸುವರು. ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಂ.ಎಚ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು.
ರೈಲಿ ಸಿಲುಕಿ ಪ್ರೇಮಿಗಳ ಸಾವು
ಸೂಲಿಬೆಲೆ: ಪ್ರೀತಿ ಮಾಡಬಾರದು...ಮಾಡಿದರೆ ಜಗಕ್ಕೆ ಹೆದರಬಾರದು... ಎಂಬ ವಾಕ್ಯವನ್ನು ಅರ್ಥಮಾಡಿಕೊಳ್ಳದ ಪ್ರೇಮಿಗಳಿಬ್ಬರು. ಹೆತ್ತವರು ತಮ್ಮ ಪ್ರೀತಿ ವಿರೋಧಿಸಿದರು ಎಂದು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಪ್ರಾಣ ಬಿಟ್ಟಿರುವ ದಾರುಣ ಘಟನೆ ಹೊಸಕೋಟೆ ತಾಲೂಕಿನ ಕೊರುಳೂರು ಬಳಿ ನಡೆದಿದೆ.
ಏನಿದು ದುರಂತ: ಹೊಸಕೋಟೆ ತಾಲೂಕಿನ ಪೂಜೇನಾ ಅಗ್ರಹಾರ ಗ್ರಾಮದ ಲಕ್ಷ್ಮೀನಾರಾಯಣ್(20), ಬೂದಿಗೆರೆ ಗ್ರಾಮದ ಗೀತಾ(19) ಪರಸ್ಪರ ಪ್ರೀತಿಸುತ್ತಿದ್ದರು. ಈ ಇಬ್ಬರು ಬೆಂಗಳೂರಿನ ಕೆ.ಆರ್.ಪುರ ಕಾಲೇಜಿನಲ್ಲಿ ಓದುವಾಗಲೇ ಪ್ರೀತಿಸುತ್ತಿದ್ದರು. ಗೀತಾಳನ್ನು ಪ್ರೇಮಿಸುತ್ತಿರುವ ವಿಷಯದ ಬಗ್ಗೆ ಲಕ್ಷ್ಮೀನಾರಾಯಣ್ ಮನೆಯಲ್ಲಿ ತಿಳಿದು ಗೀತಾಳ ಜಾತಿ ಬೇರೆ ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿತ್ತು. ಇದನ್ನು ಅರಿತ ಗೀತಾ ಜೂ.4 ರಂದು ತನ್ನ ಪ್ರೇಮಿ ಜೊತೆಗೂಡಿ ಜೂ 5ರಂದು ಬೆಳಗ್ಗೆ ಕೊರುಳೂರು ಮಾರ್ಗದಿಂದ ಬೆಂಗಳೂರಿಗೆ ಸಂಪರ್ಕ ಹೊಂದಿರುವ ರೇಲ್ವೆ ಟ್ರ್ಯಾಕ್ನಲ್ಲಿ ರೈಲು ಚಕ್ರಕ್ಕೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷ್ಮಿನಾರಾಯಣ್ ರುಂಡ ರೇಲ್ವೆ ಟ್ರ್ಯಾಕ್ ಪಕ್ಕದ ಚರಂಡಿಯಲ್ಲಿ ಬಿದ್ದಿದ್ದು, ಮುಂಡಾ ಮತ್ತೊಂದು ಟ್ರ್ಯಾಕ್ನಲ್ಲಿ ಪತ್ತೆಯಾಗಿದೆ. ಗೀತಾಳ ದೇಹವಂತೂ ಛಿದ್ರ ಛಿದ್ರವಾಗಿದೆ. ಘಟನೆಯ ವಿಷಯ ತಿಳಿದ ರೇಲ್ವೆ ಪೊಲೀಸರು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.