ರಾಜೀವ್ ಚೈತನ್ಯ ಯೋಜನೆ
ರಾಮನಗರ: ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರವು ರಾಜೀವ್ಗಾಂಧಿ ಚೈತನ್ಯ ಯೋಜನೆ ಜಾರಿಗೆ ತರಲಾಗಿದೆ ಎಂದು ಜಿಪಂ ಸಿಇಒ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಗ್ರಾಮೀಣ ಭಾಗದ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ-ಯುವತಿಯರಿಗೆ ವೃತ್ತಿಪರ ಕೌಶಲ್ಯ ಹಾಗೂ ಸ್ವಯಂ ಉದ್ಯೋಗ ಸ್ಥಾಪಿಸುವ ತರಬೇತಿ ನೀಡಲಾಗುವುದು. ತರಬೇತಿ ಪಡೆದ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಪ್ರಾರಂಭಿಸುವ ಜತೆಗೆ ಇತರರನ್ನೂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಜಿಲ್ಲೆಯಲ್ಲಿರುವ 130 ಗ್ರಾಪಂ ನಿಂದ ಪ್ರತಿ ಗ್ರಾಪಂನಲ್ಲಿ 40ರಂತೆ ಒಟ್ಟು 5200 ಮಂದಿ ಗುರುತಿಸಲಾಗಿದ್ದು, ಈ ಪೈಕಿ ಪ್ರಥಮ ಹಂತದಲ್ಲಿ 3641 ಮಂದಿ ಸ್ಯಾಟ್ಕಾಂ ತರಬೇತಿ ಪಡೆದುಕೊಂಡಿದ್ದಾರೆ. ಇವರಿಗೆ ದ್ವಿತೀಯ ಹಂತದಲ್ಲಿ ಸ್ವ ಉದ್ಯೋಗ ಮತ್ತು ವೃತ್ತಿಪರ ಕೌಶಲ್ಯ ತರಬೇತಿ ನೀಡಲು ಸರ್ಕಾರ ಯೋಜನಾ ಬೆಂಬಲ ಸಂಸ್ಥೆಗಳನ್ನು ಗುರುತಿಸಿದೆ ಎಂದರು. ಬಿಡದಿಯ ಎಡಿಪೈ ಸಂಸ್ಥೆ, ಹಾರೋಹಳ್ಳಿಯ ಕೈಗಾರಿಕಾ ತರಬೇತಿ ಸಂಸ್ಥೆ, ಬೆಂಗಳೂರಿನ ಎಂ.ಎಸ್.ರಾಮಯ್ಯ ಸಿಟಿ ಸಂಸ್ಥೆಗಳು ವೃತ್ತಿಪರ ಕೌಶಲ್ಯ ತರಬೇತಿ ನೀಡಲಿವೆ. ತರಬೇತಿ ನಂತರ ಅಭ್ಯರ್ಥಿಗಳು ಸ್ವಉದ್ಯಮ ಸ್ಥಾಪಿಸಲು ಬ್ಯಾಂಕ್ ಮೂಲಕ ಸಾಲ ಪಡೆಯಲು ಇದೇ ಸಂಸ್ಥೆಗಳು ಸಹಕಾರ ನೀಡಲಿವೆ ಎಂದರು. ಕೃಷಿ, ಹೈನುಗಾರಿಕೆ, ಕುರಿಸಾಕಣೆ, ಜೇನು ಸಾಕಣೆ, ಪುಷ್ಪೋದ್ಯಮ, ನರ್ಸರಿ ಸೇರಿದಂತೆ ಒಟ್ಟು 49 ವಿಷಯಗಳ ಪೈಕಿ ಆಸಕ್ತ ವಿಷಯದಲ್ಲಿ ತರಬೇತಿ ಪಡೆದುಕೊಳ್ಳಬಹುದು. ನಂತರ ಉದ್ಯಮ ಸ್ಥಾಪಿಸಲು ಬ್ಯಾಂಕುಗಳ ಮೂಲಕ ಸಾಲ ಪಡೆಯುವ ವೇಳೆಯಲ್ಲೂ ಸಹಕಾರ ನೀಡಲಾಗುವುದು ಎಂದರು. ಜಿ.ಪಂ ಯೋಜನಾ ನಿರ್ದೇಶಕ ಬಸವರಾಜಪ್ಪ ಇದ್ದರು.