ಶಿಕ್ಷಕರ ಕ್ಷೇತ್ರ: ಮತ ಪಟ್ಟಿಯಲ್ಲಿ ಅಕ್ರಮ
ಕ.ಪ್ರ. ವಾರ್ತೆ ರಾಮನಗರ ಜೂನ್ 6
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಿದ್ಧಪಡಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದ್ದು, ಶಿಕ್ಷಕರಲ್ಲದವರನ್ನೂ ಕೂಡ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗೆಯೇ ಪಟ್ಟಿಯಲ್ಲಿದ್ದ ಕೆಲ ಶಿಕ್ಷಕರ ಹೆಸರನ್ನು ಉದ್ದೇಶ ಪೂರ್ವಕವಾಗಿ ಕೈಬಿಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ನಾಗರಾಜು ಆರೋಪಿಸಿದರು.
ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ 3 ವರ್ಷ ಶಿಕ್ಷಕರಾಗಿ ಸೇವೆ ಪೂರೈಸಿದ ಶಿಕ್ಷಕರು ಮತದಾನಕ್ಕೆ ಅರ್ಹರು. ನಿವೃತ್ತಿ ನಂತರ 3 ವರ್ಷದವರೆಗೂ ಮತದಾನ ಮಾಡಲು ಅರ್ಹರಾಗಿದ್ದಾರೆ. ನಿವೃತ್ತಿಯಾಗಿ 8ರಿಂದ 9 ವರ್ಷವಾಗಿರುವ ಶಿಕ್ಷಕರೂ ಮತದಾರರ ಪಟ್ಟಿಯಲ್ಲಿದ್ದಾರೆ. ಆದರೆ, ನಿವೃತ್ತಿಯಾಗಿ ಕೇವಲ 6 ತಿಂಗಳಾಗಿರುವವರ ಹೆಸರನ್ನು ಕೈಬಿಡಲಾಗಿದೆ ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಶಿಕ್ಷಕರೇ ಅಲ್ಲದವರನ್ನೂ ಕೂಡ ಸರ್ಕಾರಿ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಅವರ ಹೆಸರನ್ನು ಪಟ್ಟಿಗೆ ಸೇರಿಸಲಾಗಿದೆ. ಸುರೇಶ್ ಮತ್ತು ಉಮೇಶ್ ಎಂಬುವರು ಶಿಕ್ಷಕರಲ್ಲದಿದ್ದರೂ ರಾಮನಗರದ ಬನ್ನಿಕುಪ್ಪೆ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪಟ್ಟಿಗೆ ಸೇರಿಸಲಾಗಿದೆ ಎಂದರು.
ಶಿಕ್ಷಕರು ವರ್ಗಾವಣೆಯಾದಾಗ ಅವರು ವರ್ಗಾವಣೆಗೊಂಡ ಶಾಲೆಗೆ ಅವರ ಹೆಸರನ್ನು ಸ್ಥಳಾಂತರಿಸಬೇಕು. ಅದರೆ, ವರ್ಗಾವಣೆಗೊಂಡು 7-8 ವರ್ಷವಾಗಿರುವವರನ್ನು ಅದೇ ಶಾಲೆಯಲ್ಲಿ ಮುಂದುವರಿಸಲಾಗಿದೆ. ಮೃತಪಟ್ಟಿರುವ ಎಷ್ಟೋ ಮಂದಿಯ ಹೆಸರು ಪಟ್ಟಿಯಲ್ಲಿರುವುದು ಅನುಮಾನಕ್ಕೆಡೆಮಾಡಿದೆ ಎಂದು ನಾಗರಾಜು ತಿಳಿಸಿದರು.
ಚಂದ್ರಶೇಖರಯ್ಯ ಎಂಬುವರ ಹೆಸರು ಎರಡೆರಡು ಬಾರಿ ಇದೆ. ಚನ್ನಪಟ್ಟಣದಲ್ಲಿ ಕೆಇಬಿ ಪ್ರೌಢಶಾಲೆ 4-5 ವರ್ಷದ ಹಿಂದೆಯೇ ಮುಚ್ಚಿದ್ದರೂ ಆ ಶಾಲೆಯ ಹೆಸರಿನಲ್ಲಿ 15 ಮತಗಳು ಇದ್ದು, ಚುನಾವಣಾ ನಿಯಮಗಳು ಸ್ಪಷ್ಟವಾಗಿ ಉಲ್ಲಂಘನೆಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಚಿತಾವಣೆ ಮೇರೆಗೆ ಮೇಲಧಿಕಾರಿಗಳ ಮರೆ ಮಾಚಿರುವ ಶಿಕ್ಷಣ ಇಲಾಖೆಯ ಕೆಲ ಪಟ್ಟಭದ್ರ ಅಧಿಕಾರಿಗಳು ಈ ಕುತಂತ್ರ ನಡೆಸಿದ್ದು, ತಮಗೆ ಬೇಕಾದವರ ಹೆಸರನ್ನು ಪಟ್ಟಿಗೆ ಸೇರಿಸಿ, ಕೆಲವರ ಹೆಸರನ್ನು ಕೈಬಿಟ್ಟಿದ್ದಾರೆ. ಸಮಾಜಕ್ಕೆ ಮಾದರಿಯಾಗಬೇಕಿದ್ದ ಶಿಕ್ಷಕರ ಚುನಾವಣೆಯಲ್ಲಿ ಈ ರೀತಿ ಅಕ್ರಮ ನಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ನಾಗರಾಜು ಟೀಕಿಸಿದರು.
ಜಿಲ್ಲೆಯಲ್ಲಿ ಒಟ್ಟಾರೆ 3672 ಮತದಾರರಿದ್ದು, ಸುಮಾರು 500 ರಿಂದ 600 ಮತದಾರರನ್ನು ಸುಳ್ಳು ದಾಖಲೆ ಸೃಷ್ಟಿಸಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿ ಜಮಾದಾರ್ ಅವರಿಗೆ ಮನವಿ ನೀಡಲಾಗಿದೆ. ಕೂಡಲೇ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕು. ಇಲ್ಲದಿದ್ದರೆ ಮತದಾನದ ದಿನದಂದು ನಡೆಯುವ ಅಹಿತಕರ ಘಟನೆಗಳಿಗೆ ಅಧಿಕಾರಿಗಳೇ ನೇರ ಹೊಣೆಗಾರರಾಗುವರು ಎಂದು ಎಚ್ಚರಿಸಿದರು. ಜಗದೀಶ್ಪ್ರಸಾದ್, ರವಿಕುಮಾರ್ಗೌಡ, ಶಿವಮಾದು, ಪದ್ಮನಾಭ, ರಾಮಣ್ಣ ಇದ್ದರು.