3 ಕೊಲೆ ಸೇರಿದಂತೆ 6 ಪ್ರಕರಣ ಭೇದಿಸಿದ ಪೊಲೀಸರು
ಕ.ಪ್ರ.ವಾರ್ತೆ ರಾಮನಗರ ಜೂ.7
3 ಕೊಲೆ, ಕಳ್ಳತನ ಸೇರಿದಂತೆ ಒಟ್ಟು 6 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು 21 ಆರೋಪಿಗಳನ್ನು ಬಂಧಿಸಿದ್ದು, ರು.20 ಲಕ್ಕಕ್ಕೂ ಹೆಚ್ಚು ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ತಿಳಿಸಿದರು.
ಕಳೆದ 2 ವಾರದಿಂದೀಚೆಗೆ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಲಾಗಿತ್ತು. ಬಂಧಿತರ ಪೈಕಿ 15 ಮಂದಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದರು, ಉಳಿದ 6 ಮಂದಿ ಇತರೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.
ಪ್ರಕರಣ 1
ಕನಕಪುರ ಟೌನ್ನ ರಾಮನಗರ ಮುಖ್ಯರಸ್ತೆಯಲ್ಲಿರುವ ಗಿರೀಶ್ ಕಲ್ಯಾಣ ಮಂಟಪದ ಪಕ್ಕ ಮೇ 25 ಬಷೀರ್ ಎಂಬಾತನ ಮುಖವನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪುರ ಠಾಣೆ ಪೊಲೀಸರು ಅನುಮಾನದ ಮೇರೆಗೆ ರಾಜಸ್ತಾನ ಮೂಲದ ಬಷೀರ್ನನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಪ್ರಕರಣ 2
ಮೇ 15ರಂದು ಕನಕಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೊಡ್ಡಕಬ್ಬಳ್ಳಿ ವಾಸಿ ರಾಜ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕ ಅದೇ ಗ್ರಾಮದ ಶಿವಣ್ಣ ಹಾಗೂ ಇತರರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರು. ರಾಜ ಸ್ಥಳದಲ್ಲೇ ಮೃತಪಟ್ಟಿದ್ದರೆ, ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದರು.
ಕಾರ್ಯಪ್ರವೃತ್ತರಾದ ಪೊಲೀಸರು ಗುರುವಪ್ಪ, ಮಾದೇವ, ಲಿಂಗರಾಜು, ದುಂಡಮಾದ, ಶಿವಣ್ಣನನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ.
ಪ್ರಕರಣ 3
ಕನಕಪುರದ ಸಾತನೂರು ಠಾಣಾ ವ್ಯಾಪ್ತಿಯಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ರಾಜೇಶ್ ಎಂಬಾತನನ್ನು ಆಟೋದಲ್ಲಿ ಅಪಹರಿಸಿ, ಅಚ್ಚಲು ಬಳಿಯ ಪೈಪ್ಲೈನ್ ರಸ್ತೆಯಲ್ಲಿ ಕೊಲೆ ಮಾಡಿದ್ದರು. ಸಾಕ್ಷಿ ಸಿಗಬಾರದೆಂದೆ ಆತನ ಮುಖದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಲೆ ಮರೆಸಿಕೊಂಡಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ತಲೆ ಮರೆಸಿಕೊಂಡಿದ್ದ ಸತೀಶ, ಮಂಜು, ಲೋಕೇಶ್, ಕುಮಾರ, ನಾಗರತ್ನಮ್ಮ, ಕೆಂಪಮ್ಮ, ಚನ್ನಮ್ಮ, ರಂಜನಿ ಎಂಬ ಆರೋಪಿಗಳನ್ನು ಎಎಸ್ಪಿ ಕುಲದೀಪ್ ಕುಮಾರ್ ಜೈನ್ ನೇತೃತ್ವದ ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣ 4
ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜ್ಜಾಲ ಬಳಿರು ಇರುವ ಸ್ಯಾಮ್ಸಂಗ್ ಕಂಪನಿಯಲ್ಲಿ ಮೇ 18ರಂದು 7 ಎಲ್ಇಡಿ, 8 ಡಿವಿಡಿ, 3 ಕಂಪ್ಯೂಟರ್ ಮಾನಿಟರ್ಗಳನ್ನು ಕಳವು ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಪ್ರಕಾಶ, ಪ್ರದೀಪ್ ಕುಮಾರ್, ಮಂಜ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸ್ಯಾಮ್ಸಂಗ್ ಕಂಪನಿಯಲ್ಲಿ ಕಳ್ಳತನವಾಗಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಈ ಹಿಂದೆ ಕಳ್ಳತನ ನಡೆಸಿದ್ದ ಕೆಎನ್ಕೆ ಕಂಪನಿಯ 2 ಮೆಷಿನ್ಗಳು, 5 ಕಂಪ್ಯೂಟರ್ಗಳು, 2 ಇಂಡಿಕಾ, 1 ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈ ಎಲ್ಲಾ ಪ್ರಕರಣಗಳನ್ನು ಕಡಿಮೆ ಅವಧಿಯಲ್ಲಿ ಪತ್ತೆ ಹಚ್ಚಿರುವ ಪೊಲೀಸರ ಕಾರ್ಯವನ್ನು ಎಸ್ಪಿ
ಅನುಪಮ್ ಅಗ್ರವಾಲ್ ಶ್ಲಾಘಿಸಿದರು. ಗೋಷ್ಠಿಯಲ್ಲಿ ಎಎಸ್ಪಿ ಕುಲದೀಪ್ ಕುಮಾರ್ ಜೈನ್, ಡಿವೈಎಸ್ಪಿ ರಾಮಲಿಂಗಪ್ಪ ಇದ್ದರು.