ಟೆರ್ರಾಫಾರ್ಮ ಪ್ರವೇಶಿಸದಂತೆ ಲಾರಿಗಳಿಗೆ ತಡೆ
ದೊಡ್ಡಬಳ್ಳಾಪುರ: ತಾಲೂಕಿನ ಗುಂಡ್ಲಹಳ್ಳಿ ಬಳಿಯ ಟೆರ್ರಾಫಾರ್ಮ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ಲಾರಿಗಳು ಪ್ರವೇಶಿಸದಂತೆ ಸೋಮವಾರದಿಂದಲೇ ಪ್ರತಿಭಟನೆ ಆರಂಭಿಸಲಾಗುವುದು. ಲಾರಿಗಳನ್ನು ತಡೆದು ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಶಕ್ತಿ ಪ್ರಕಟಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಘಟನೆಯ ಅಧ್ಯಕ್ಷ ಹೊನ್ನಾಘಟ್ಟ ಮಹೇಶ್, ಶನಿವಾರ ನಡೆದ ಪ್ರತಿಭಟನೆ ವೇಳೆ ಬಿಬಿಎಂಪಿ ಆಯುಕ್ತರು, ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ಘಟಕಗಳ ಬಗ್ಗೆ ಮಾತ್ರ ಪರಿಶೀಲಿಸುವ ಹೇಳಿಕೆ ನೀಡಿದ್ದಾರೆ. ಆದರೆ ಟೆರ್ರಾಫಾರ್ಮಕ್ಕೂ ಕಸ ಬರಬಾರದು ಎಂಬುದು ರೈತರ ಬೇಡಿಕೆ. ಈಗಾಗಲೇ ಈ ಕಸವಿಲೇವಾರಿ ಘಟಕದಿಂದ ಸುತ್ತಮುತ್ತಲ ಪರಿಸರ ಹಾಳಾಗಿದೆ. ಅವೈಜ್ಞಾನಿಕ ರೀತಿಯ ಕಸ ವಿಲೇವಾರಿಯಿಂದ ಭೂಮಾಲಿನ್ಯ, ಜಲಮಾಲಿನ್ಯ ಮತ್ತು ವಾಯುಮಾಲಿನ್ಯ ಉಂಟಾಗಿದೆ. ಈ ಭಾಗದ ರೈತರು ಅನೇಕ ರೀತಿಯ ಕಾಯಿಲೆಗಳಿಂದ ಬಳಲುವಂತಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಘಟಕದಲ್ಲಿ ಕಸ ವಿಲೇವಾರಿ ತಕ್ಷಣ ನಿಲ್ಲಬೇಕು. ಮಿತಿಮೀರಿ ಈ ಘಟಕಕ್ಕೆ ಕಸ ತಂದು ಸುರಿಯುತ್ತಿರುವುದು ಖಂಡನೀಯ. ಬಿಬಿಎಂಪಿಯ ಉದ್ಧಟತನದ ಧೋರಣೆಗೆ ಧಿಕ್ಕಾರ ಎಂದಿದ್ದಾರೆ.
ಗುತ್ತಿಗೆದಾರರು ಮತ್ತು ದಲ್ಲಾಳಿಗಳ ಒಡಂಬಡಿಕೆಯಿಂದ ರೈತರು, ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ. ಬೆಳೆ ಬೆಳೆಯುತ್ತಿದ್ದ ಭೂಮಿ ಇಂದು ಕಸದ ಕೊಂಪೆಯಾಗಿದ್ದು, ನರಕಸದೃಶ ವಾತಾವರಣ ನಿರ್ಮಾಣವಾಗಿದೆ. ಇದು ನಿಲ್ಲುವವರೆಗೆ ಹೋರಾಟ ನಿಲ್ಲದು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಆನೆ ಬನ್ನೇರುಘಟ್ಟಕ್ಕೆ
ಆನೇಕಲ್ಲು: ಮಹಾರಾಷ್ಟ್ರದ ಕೊಲ್ಲಾಪುರದ ಜ್ಯೋತಿಬಾ ದೇಗುಲದಲ್ಲಿದ್ದ ಆನೆ (ಸುಂದರ್-14) ಯನ್ನು ಮುಂಬೈ ಹೈ ಕೋರ್ಟ್ ಆದೇಶದ ಮೇರೆಗೆ ರಾಜ್ಯದ ಬನ್ನೇರುಘಟ್ಟ ಉದ್ಯಾನಕ್ಕೆ ತರಲಾಗಿದೆ ಎಂದು ಸಿಸಿಎಫ್ ರಂಗೇಗೌಡ ತಿಳಿಸಿದ್ದಾರೆ.
ಸತತ 3 ದಿನಗಳ ಪ್ರಯಾಣದಿಂದ ಆಯಾಸಗೊಂಡಿದ್ದ ಆನೆಗೆ ಪೈಪ್ ಮೂಲಕ ನೀರು ಹಾಯಿಸಿ
ತಂಪು ಮಾಡಲಾಯಿತು. ಆನೆಯ ಕಾಲಿಗೆ ಸರಪಳಿ ಹಾಕುವ ಹಿಂಗಾಲಿನಲ್ಲಿ ಗಾಯವಾಗಿದೆ. ಆನೆಗೆ ಸ್ಥಳೀಯ ಆನೆ ವನರಾಜನ ಸಹಕಾರದಿಂದ ಮೇವು ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಮೊದಲ ದಿನ ಸ್ವಲ್ಪ ಅಸಹಕಾರವಿದ್ದರೂ ಇತರ ಆನೆಗಳು ಜೊತೆಯಲ್ಲಿದ್ದ ಕಾರಣ ಕ್ರಮೇಣ ಪಾರ್ಕಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ. ಬೆಳಗ್ಗಿನಿಂದ ಹಸಿರು ಹುಲ್ಲು, ಅಕ್ಕಿ ಬೆಲ್ಲ ನೀಡುತ್ತಿದ್ದು ಆಹಾರವನ್ನು ಸೇವಿಸುತ್ತಿದೆ. ಇತರ ಆನೆಗಳಂತೆ ಹೊತ್ತಿಗೆ 4 ರಿಂದ 6 ಬಕೆಟ್ ನೀರು ಸೇವನೆ ಮಾಡುತ್ತಿದ್ದು ಆರೋಗ್ಯವಾಗಿದೆ ಎಂದರು.
ಪಳಗಿದ ಆನೆಯಾಗಿದ್ದರಿಂದ ಇತರ ಮಾವುತರ ಜೊತೆ ಸ್ನೇಹಮಯವಾಗಿದೆ. ಇದನ್ನು ಪಳಗಿಸಿದ ಮಾವುತ ಹೈದರ್ ಇಲ್ಲದ ಕಾರಣ ಹೊಸ ಆನೆಯ ಸ್ವಭಾವ ಪೂರ್ಣ ಅರಿಯದೇ ಮಾವುತರು ಧೈರ್ಯವಾಗಿ ಆನೆ ಬಳಿ ಹೋಗುತ್ತಿಲ್ಲ. ಆದರೂ ಆಹಾರ, ನೀರು ನೀಡುವ ಮೂಲಕ ಪಳಗಿಸುವ ಪ್ರಯತ್ನ ನಡೆಯುತ್ತಿದೆ. ಜೊತೆಗೆ ಇತರ ಸಾಕಾನೆಗಳೂ ಇರುವುದರಿಂದ ಮಾವುತರಿಗೆ ಹೆಚ್ಚಿನ ತೊಂದರೆ ಇರುವುದಿಲ್ಲ ಎಂದಿದ್ದಾರೆ.
ಸುಂದರ್ ಆನೆಯ ಚರಿತ್ರೆ: ಮಹಾರಾಷ್ಟ್ರದ ಕೊಲ್ಲಾಪುರ ಶಾಸಕ ವಿನಯ ಕೋರೆಗೆ ಸೇರಿದೆ ಈ ಆನೆಯನ್ನು 1 ವರ್ಷದವನಿದ್ದಾಗ ಜ್ಯೋತಿಬಾ ದೇಗುಲಕ್ಕೆ ನೀಡಲಾಗಿತ್ತು. 10 ವರ್ಷಗಳ ಕಾಲ ದೇಗುಲದಲ್ಲಿದ್ದ ಆನೆಯನ್ನು ದೇಗುಲದಿಂದ ಹಿಂಪಡೆದು ಶಾಸಕ ವಿನಯ್ ತಮ್ಮ ಸುಪರ್ದಿನಲ್ಲಿಟ್ಟುಕೊಂಡಿದ್ದರು. ಹೈದರ್ ಎನ್ನುವ ಮಾವುತ ಸುಂದರ್ ಆನೆಯ ಜತನ ಮಾಡುತ್ತಿದ್ದರೂ ತುಂಬಾ ಹಿಂಸೆ ನೀಡುತ್ತಿದ್ದ. ಆನೆ ಕೆಲ ಸಲ ಘೀಳಿಟ್ಟಾಗ ಗ್ರಾಮಸ್ಥರು ಭಯಭೀತರಾಗುತ್ತಿದ್ದರು. ಮಹಾರಾಷ್ಟ್ರದ ಪಿಟಾ ಎಂಬ ಎನ್ಜಿಒ ಸಂಸ್ಥೆ ಮುಂಬೈ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಿ ಆನೆಯನ್ನು ಮಾವುತನ ಕಪಿಮುಷ್ಟಿಯಿಂದ ಬಿಡುಗಡೆ ಮಾಡಿ ಸ್ವಚ್ಛಂದ ಬದುಕಿಗೆ ಅನುವು ಮಾಡಿಕೊಡಬೇಕೆಂದು ಕೋರಿದ್ದರು. ಆ ಹಿನ್ನೆಲೆಯಲ್ಲಿ ಬನ್ನೇರುಘಟ್ಟಕ್ಕೆ ಕರೆತರಲಾಯಿತು ಎಂದು ಪಿಟಾ ಸಂಸ್ಥೆಯ ಸಿಇಒ ಪೂರ್ವ ಜೋಶಿ ತಿಳಿಸಿದರು.