ನಿತ್ಯ ಹರಿದ್ವರ್ಣದ ಕಾಡುಗಳ ನಾಶ
ಚನ್ನಪಟ್ಟಣ: ಇತ್ತೀಚಿನ ದಿನಗಳಲ್ಲಿ ಮಾನವ ಒಂದಿಲ್ಲೊಂದು ಕಾರಣಕ್ಕೆ ಪರಿಸರವನ್ನು ನಾಶಮಾಡುತ್ತಾ ಸಾಗಿದ್ದು, ಇದರಿಂದಾಗಿ ನಿತ್ಯ ಹರಿದ್ವರ್ಣದ ಕಾಡುಗಳು, ದೊಡ್ಡ ಬೆಟ್ಟಗಳು, ನದಿ, ತೊರೆ, ಕೆರಗಳು ಕಣ್ಮರೆಯಾಗಿವೆ ಎಂದು ಉಪನ್ಯಾಸಕ ಪ್ರಶಾಂತ್ ತಿಳಿಸಿದರು. ತಾಲೂಕಿನ ಚಕ್ಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ದಿನಾಚರಣೆ ಮತ್ತು ಗಿಡ ನೆಡುವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಯುವಜನತೆ ಪರಿಸರದ ಬಗ್ಗೆ ಕಾಳಜಿ ತೋರದಿದ್ದರೆ ನಮ್ಮ ಪರಿಸರ ನಾಶವಾದಂತೆ ನಾವೆಲ್ಲ ನಾಶ ಹೊಂದ ಬೇಕಾಗುತ್ತದೆ ಎಂದರು. ವೈ.ಕೆ.ಸುಧಾ, ಎಂ.ಇ. ಬಸವರಾಜು, ಅಸ್ಮಭಾನು, ಮಾಲಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಮಾಡುವ ಪ್ರತಿಜ್ಞೆ ಮಾಡಿಸಲಾಯಿತು.
ಜೆಎಂಎಫ್‌ಸಿ ನ್ಯಾಯಾಲಯ ತಡೆಯಾಜ್ಞೆ
ಚನ್ನಪಟ್ಟಣ: ತಾಲೂಕಿನ ಹೊಟ್ಟಿಗನ ಹೊಸಹಳ್ಳಿ ಎಂಪಿಸಿಎಸ್ ಆಡಳಿತ ಮಂಡಲಿ ಯಾವುದೇ ಕಾರ್ಯಚಟುವಟಿಕೆ ನಡೆಸದಂತೆ ತಾಲೂಕು ಜೆಎಂಎಫ್‌ಸಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಸದಸ್ಯತ್ವದ ನೋಂದಣಿ ಮತ್ತು ಸಂಘದ ಆಡಳಿತ ಮಂಡಲಿ ಚುನಾವಣೆಯಲ್ಲಿ ಸಹಕಾರಿ ನಿಯಮ ಮತ್ತು ಸಂಘದ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ ಗ್ರಾಮದ ಹಾಲು ಉತ್ಪಾದಕರಾದ ಎಚ್.ವಿ. ವೆಂಕಟೇಶ್, ಗೋವಿಂದರಾಜು, ವೆಂಕಟಸ್ವಾಮಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ವಿಚಾರಣೆ ಕೈಗೆತ್ತು ಕೊಂಡ ಜೆಎಂಎಫ್‌ಸಿ ನ್ಯಾಯಾಧೀಶರು ಎರಡೂ ಕಡೆಯ ವಾದ ವಿವಾದಗಳನ್ನು ಆಲಿಸಿ, ಶೇರುದಾರರ ನೋಂದಣಿ, ನಿರ್ದೇಶಕರಾಗಿ ಆಯ್ಕೆಗೊಂಡಿರುವ ಮಂದಿ ನಿಯಮಗಳನ್ನು ಪಾಲಿಸಿಲ್ಲ. ಚುನಾಯಿತ ನಿರ್ದೇಶಕರು ಗ್ರಾಮದಲ್ಲಿ ವಾಸವಿರ ಬೇಕೆಂಬ ನಿಯಮವನ್ನು ಮೀರಿ ನಗರ ಪ್ರದೇಶದಲ್ಲಿ ವಾಸವಾಗಿರುವ ಮಂದಿ ಚುನಾಯಿತರಾಗಿದ್ದಾರೆ ಎಂದು ಅರ್ಜಿದಾರರು ಮಂಡಿಸಿದ್ದ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.