ಹೇಳೋದು ಒಂದು, ಮಾಡೋದೊಂದು
ಮತ್ತೀಕೆರೆ ಜಯರಾಮ್
ರಾಮನಗರ : ಬೇಸಿಗೆಯಲ್ಲಿ ಎದುರಾದ ಕುಡಿಯುವ ನೀರಿನ ಬವಣೆ ನೀಗಿಸಲು ತುರ್ತು ಕಾಮಗಾರಿ ಅನುಷ್ಠಾನಕ್ಕಾಗಿ ಪ್ರಸ್ತಾವನೆ ಹೋಗಿದ್ದು ರು.35 ಕೋಟಿಗೆ. ಕ್ರಿಯಾ ಯೋಜನೆ ರೂಪಿಸುವ ಹಂತಕ್ಕೆ ಮೊತ್ತವನ್ನು ರು.17 ಕೋಟಿಗೆ ಇಳಿಸಿದ ಸರ್ಕಾರ ಕಡೆಗೆ ಬಿಡುಗಡೆ ಮಾಡಿದ್ದು ರು.2.93 ಕೋಟಿ ಮಾತ್ರವೇ.
ಇದು, ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿ ಕೈಗೆತ್ತಿಕೊಳ್ಳಲು ದುಡ್ಡಿಗೆ ಬರವಿಲ್ಲ ಎಂದು ಹೇಳಿಕೊಳ್ಳುತ್ತಲೇ ಬಂದಿರುವ ಸರ್ಕಾರವು ರಾಮನಗರ ಜಿಲ್ಲೆ ವಿಷಯದಲ್ಲಿ ಅನುಸರಿಸಿರುವ ಧೋರಣೆ. ಹೇಳೋದು ಒಂದು ಮಾಡೋದು ಇನ್ನೊಂದು ಎನ್ನುವ ಸರ್ಕಾರದ ನೀತಿಗೆ ಇದು ಸಾಕ್ಷಿ.
ರಾಮನಗರ ಮಾತ್ರವಲ್ಲದೆ ಕುಡಿಯುವ ನೀರಿನ ಬವಣೆಗೆ ಗುರಿಯಾದ ರಾಜ್ಯದ ವಿವಿಧ ಜಿಲ್ಲೆಗಳ ಪ್ರಸ್ತಾವನೆ ಮತ್ತು ಕ್ರಿಯಾ ಯೋಜನೆಗಳಿಗೂ ಸರ್ಕಾರ ಸ್ಪಂದಿಸಿರುವುದು ಅಷ್ಟಕ್ಕಷ್ಟೇ. ಕವಡೆ ಕಾಸು ಮಂಜೂರು ಮಾಡಿರುವ ಸರ್ಕಾರ ತನ್ನ ಪಾಲಿನ ಕೆಲಸವಾಯಿತೆಂದು ಕೈತೊಳೆದುಕೊಂಡಿದೆ.
3 ತಿಂಗಳು ತುಂಬಿದೆ: ರಾಮನಗರ ಜಿಲ್ಲೆಯು ಸತತ ಮೂರನೇ ವರ್ಷವೂ ಭೀಕರ ಬರಕ್ಕೆ ತುತ್ತಾಗಿದೆ. ಅರ್ಧದಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಬೇಸಿಗೆಗೆ ಮುನ್ನವೇ ಮುನ್ನೆಚ್ಚರಿಕೆ ವಹಿಸಲು ನಿರ್ಧರಿಸಿದ ಜಿ.ಪಂ. ತುರ್ತು ಕಾಮಗಾರಿಗಳಿಗೆ ರು.35 ಕೋಟಿ ಬೇಡಿಕೆ ಸಲ್ಲಿಸಿತ್ತು.
ಅಷ್ಟು ಮೊತ್ತದ ಹಣ ನೀಡಲು ಒಪ್ಪದ ಸರ್ಕಾರವು ರು.17 ಕೋಟಿಗೆ ಕ್ರಿಯಾ ಯೋಜನೆ ರೂಪಿಸಲು ಸೂಚನೆ ನೀಡಿತ್ತು. ಆ ಮೇರೆಗೆ ಕಾರ್ಯಪಾಲಕ ಎಂಜಿನಿಯರ್ ಮೂಲಕ ಸಿದ್ಧಪಡಿಸಲಾದ ಕ್ರಿಯಾ ಯೋಜನೆಯನ್ನು ಜಿ.ಪಂ. ಆಡಳಿತ ಸರ್ಕಾರಕ್ಕೆ ರವಾನಿಸಿತು. ನೀರಿನ ಸಮಸ್ಯೆ ನಿವಾರಣೆಗಾಗಿ ವಿಧಾನಸಭಾ ಸದಸ್ಯರಿಗೆ ತಲಾ ರು.1 ಕೋಟಿ ಬಿಡುಗಡೆ ಮಾಡಿರುವ ಸರ್ಕಾರ ಜಿ.ಪಂ.ಗೆ ನೀಡಿದ್ದು ರು.2.93 ಕೋಟಿ ಮಾತ್ರವೇ. ಇದು ಕುಡಿಯುವ ನೀರಿನ ತೀವ್ರ ಸಮಸ್ಯಾತ್ಮಕ ಜಿಲ್ಲೆಗಳಲ್ಲಿ ಒಂದಾದ ರಾಮನಗರಕ್ಕೆ ಆನೆ ಹೊಟ್ಟೆಗೆ ಆರು ಕಾಸಿನ ಮಜ್ಜಿಗೆಯಂತಾಗಿದೆ.
ನಂಬಿ ಕೆಟ್ಟ ಸದಸ್ಯರು: ಸರ್ಕಾರದಿಂದ ರು.17 ಕೋಟಿ ಅನುದಾನ ಸಿಗುವುದನ್ನು ನಂಬಿದ ಜಿ.ಪಂ. ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಜನರಿಂದ ಸೈ ಎನಿಸಿಕೊಳ್ಳಲು ಕೇಳಿದ ಕಡೆಯಲ್ಲೆಲ್ಲಾ ಕೊಳವೆ ಬಾವಿ ಕೊರೆಸಿ, ಮೋಟಾರ್ ಮತ್ತು ಪಂಪ್, ಪೈಪ್ಲೈನ್ ಅಳವಡಿಕೆ ಕಾಮಗಾರಿ ನಡೆಸಿದ್ದಾರೆ.
ಇದೀಗ ಸರ್ಕಾರ ಕವಡೆ ಕಾಸು ಕೊಟ್ಟು, ಮಾತು ತಪ್ಪಿದೆ. ಜನಪ್ರತಿನಿಧಿಯ ಮಾತು ನಂಬಿ ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನಗೊಳಿಸಿರುವ ಗುತ್ತಿಗೆದಾರರು ಪರಿತಪಿಸುತ್ತಿದ್ದಾರೆ. ಬಿಲ್ ಮಂಜೂರಿಗಾಗಿ ಬಿದ್ದಿರುವ ಗುತ್ತಿಗೆದಾರರನ್ನು ಸಮಾಧಾನಪಡಿಸಲು ಜಿ.ಪಂ. ಸದಸ್ಯರು ಹೈರಾಣಾಗಿದ್ದಾರೆ.
ನೆನೆಗುದಿಗೆ ಬಿದ್ದ ಬಿಲ್: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ (ಎನ್.ಆರ್.ಡಿ.ಡಬ್ಲ್ಯು.ಪಿ) ಅಡಿಯಲ್ಲಿ ಸಾಕಷ್ಟು ಕಡೆ ಅನುಷ್ಠಾನಗೊಂಡಿರುವ ಕಾಮಗಾರಿಗಳಿಗೆ ವರ್ಷ, ಒಂದೂವರೆ ವರ್ಷವಾದರೂ ಇನ್ನೂ ಗುತ್ತಿಗೆ ಬಿಲ್ ಪಾವತಿಸಲು ಜಿ.ಪಂ.ನಿಂದ ಸಾಧ್ಯವಾಗಿಲ್ಲ.
ಈ ಯೋಜನೆಯಡಿ ಒಂದು ಗ್ರಾಮದಲ್ಲಿ ಕಾಮಗಾರಿ ನಡೆಸಿದರೆ, ಮರು ವರ್ಷ ಅದೇ ಗ್ರಾಮದಲ್ಲಿ ಸಮಸ್ಯೆ ಎಷ್ಟೇ ಗಂಭೀರವಾದರೂ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ ಆಸ್ಪದ ಇಲ್ಲ. ಅಂತಹ ಕಡೆಗೆ ಸರ್ಕಾರದ ಕಂಟೆಂಜೆನ್ಸಿ ಸ್ಕೀಂ ಅಡಿ ತುರ್ತು ಕಾಮಗಾರಿ ನಡೆಸಲು ಸಾಧ್ಯ.
ರಾಮನಗರ ಜಿಲ್ಲೆಯಲ್ಲಿ ಎನ್.ಆರ್.ಡಿ.ಡಬ್ಲ್ಯು.ಪಿ. ಅಡಿಯಲ್ಲಿ ಒಮ್ಮೆ ಕೆಲಸವಾಗಿರುವ ಸಾಕಷ್ಟು ಕಡೆ ಕಂಟೆಂಜೆನ್ಸಿ ಸ್ಕೀಂನ ಅನುದಾನ ನೆಚ್ಚಿಕೊಂಡು, ಕಾಮಗಾರಿ ನಡೆಸಲಾಗಿದೆ. ನೀರಿನ ಸಮಸ್ಯೆ ನಿವಾರಿಸಿದ ನೆಮ್ಮದಿಯಲ್ಲಿರುವ ಜಿ.ಪಂ. ಸದಸ್ಯರಿಗೆ ಗುತ್ತಿಗೆದಾರರ ಪೀಡನೆ ಶುರುವಾಗಿದೆ.
ಪರ್ಯಾಯ ಕ್ರಮವೇನು: ಶಾಸಕರಿಗೆ ಮಂಜೂರಾದ ಅನುದಾನದಡಿ ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನಗೊಳಿಸುವ ಗುತ್ತಿಗೆದಾರರಿಗೆ ತಕ್ಷಣವೇ ಗುತ್ತಿಗೆ ಬಿಲ್ ಮಂಜೂರಾಗುತ್ತಿದೆ. ಆದರೆ, ಜಿ.ಪಂ. ಸದಸ್ಯರ ಮರ್ಜಿಗೆ ಒಳಗಾಗಿರುವ ಗುತ್ತಿಗೆದಾರರು ಕೈಸುಟ್ಟುಕೊಳ್ಳುತ್ತಿದ್ದಾರೆ.
ಎನ್.ಆರ್.ಡಿ.ಡಬ್ಲ್ಯು.ಪಿ. ಅಡಿಯಲ್ಲಿ 2012-13ನೇ ಸಾಲಿನಲ್ಲಿ ಕಾಮಗಾರಿ ನಡೆಸಿದ್ದು, ಅದೇ ಗ್ರಾಮದಲ್ಲಿ ಮತ್ತೊಂದು ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದರೆ ಅದನ್ನು 2014-15ನೇ ಸಾಲಿಗೆ ತೋರಿಸಿ ಬಿಲ್ ನೀಡಬಹುದು.
2013-14ರಲ್ಲಿ ಕಾಮಗಾರಿ ಆಗಿರುವಂತಹ ಕಡೆ ಇನ್ನೊಮ್ಮೆ ಕಾಮಗಾರಿ ಕೈಗೆತ್ತಿಕೊಂಡಿದ್ದೇ ಆದರೆ ಗುತ್ತಿಗೆದಾರರು ಬಂಡವಾಳ ಹೂಡಿ ಇನ್ನೊಂದು ವರ್ಷ ಕಾಯದೆ ಬೇರೆ ಮಾರ್ಗವೇ ಇಲ್ಲ. ಸ್ವಂತ ಬಂಡವಾಳವಿಲ್ಲದೆ ಬಡ್ಡಿ ಕಟ್ಟಿ ಹಣ ತಂದಿದ್ದರೆ ಗುತ್ತಿಗೆದಾರನ ಪಾಡು ಅಯೋವುಯ.
ಸರ್ಕಾರದ ಅವೈಜ್ಞಾನಿಕ ಕ್ರಮ
ಸರ್ಕಾರಕ್ಕೆ ಜಿ.ಪಂ.ನಿಂದ ರು.35 ಕೋಟಿಗೆ ಪ್ರಸ್ತಾವನೆ ಹೋಗಿತ್ತು. ಬಳಿಕ ಸರ್ಕಾರದ ಸೂಚನೆಯಂತೆಯೇ ರು.17 ಕೋಟಿಗೆ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಇದೀಗ ರು.2.93 ಕೋಟಿ ಬಿಡುಗಡೆ ಮಾಡಿ ಕೈತೊಳೆದುಕೊಂಡಿರುವ ಸರ್ಕಾರದ ಕ್ರಮ ಅವೈಜ್ಞಾನಿಕ.
ಟಿ ಎಚ್.ಸಿ.ರಾಜು, ಅಧ್ಯಕ್ಷ, ಜಿ.ಪಂ., ರಾಮನಗರ.
ರು. 2.93 ಕೋಟಿ ಬಿಡುಗಡೆ
ಕುಡಿಯುವ ನೀರಿನ ತುರ್ತು ಕಾಮಗಾರಿಗಳ ಅನುಷ್ಠಾನಕ್ಕಾಗಿ ರು.17 ಕೋಟಿಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿತ್ತು. ಸರ್ಕಾರ ಜಿ.ಪಂ.ಗೆ ರು.2.93 ಕೋಟಿ ಬಿಡುಗಡೆ ಮಾಡಿದ್ದು, ಜಿಲ್ಲೆಯ ನಾಲ್ವರು ಶಾಸಕರಿಗೆ ತಲಾ 1 ಕೋಟಿ ಮಂಜೂರು ಮಾಡಿದೆ.
ಟಿ ಡಾ.ಎಂ.ವಿ.ವೆಂಕಟೇಶ್,
ಸಿಇಒ, ಜಿ.ಪಂ., ರಾಮನಗರ.