ಕಸದ ಸಮಸ್ಯೆಗೆ ಜನರೇ ಕಾರಣ
ಬೆಂಗಳೂರು: ಯಾರೋ ಮಾಡಿರುವ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ. ಇದು ಇನ್ನೆಷ್ಟು ದಿನವೊ ನೋಡೋಣ...!
ನಗರದಲ್ಲಿ ತಲೆದೋರಿರುವ ಕಸ ವಿಲೇವಾರಿ ಸಮಸ್ಯೆಗೆ ಮೇಯರ್ ಬಿ.ಎಸ್. ಸತ್ಯನಾರಾಯಣ ಪ್ರತಿಕ್ರಿಯಿಸಿರುವುದು ಹೀಗೆ. ಬಡಗನಾಡು ಸಂಘದ 'ಅಮೃತ ಭವನ'ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಹಿಂದೆ ಇದ್ದವರು ಯಾರೂ ನಗರದ ಕಸದ ಸಮಸ್ಯೆ ಬಗ್ಗೆ ಗಂಭೀರವಾಗಿ ಗಮನಹರಿಸಿಲ್ಲ. ಅದರ ಪರಿಣಾಮ ಈಗ ಗೊತ್ತಾಗುತ್ತಿದೆ. ಯಾರೋ ಮಾಡಿ ಹೋದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಾಗಿದೆ' ಎಂದು ಅಳಲು ತೋಡಿಕೊಂಡರು.
ನಗರದ ನಿವಾಸಿಗಳ ಕುರಿತಾಗಿಯೂ ಮೇಯರ್ ಆಕ್ರೋಶ ವ್ಯಕ್ತಪಡಿಸಿದರು. 'ಮಂಡೂರಿನ ಅವ್ಯವಸ್ಥೆಗೆ ಬಿಬಿಎಂಪಿ ಕಾರಣವಲ್ಲ, ಬೆಂಗಳೂರಿನ ಜನತೆಯೇ ಇದಕ್ಕೆ ಕಾರಣ' ಎಂದು ಸಿಟ್ಟು ಹೊರಹಾಕಿದರು. ನಗರದ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಇವತ್ತು ನಾವು ಕಸದ ಸಮಸ್ಯೆ ಹೇಳಿಕೊಳ್ಳಬೇಕಿದೆ. ಜನತೆ ಸರಿಯಾಗಿ ತಮ್ಮ ಮನೆಗಳಲ್ಲಿನ ಕಸವನ್ನು ಬೇರ್ಪಡಿಸಿ, ಪ್ರತ್ಯೇಕವಾಗಿ ಹಾಕುತ್ತಿಲ್ಲ. ಎಷ್ಟೇ ಹೇಳುತ್ತಾ ಬಂದರೂ, ಕಸವನ್ನು ಬೇಕಾಬಿಟ್ಟಿಯಾಗಿ ಹಾಕುತ್ತಿದ್ದಾರೆ. ಇದರಿಂದ ಕಸದ ವಿಲೇವಾರಿಯಲ್ಲಿ ಸಾಕಷ್ಟು ತೊಂದರೆಯಾಗಿದೆ ಎಂದರು. ಪೋಷಕರು ತಮ್ಮ ಮಕ್ಕಳು ಕೆಲಸ ಮಾಡುವ ಕಚೇರಿಗಳ ವಿಳಾಸ ಹೇಳಿಕೊಂಡು ಪ್ರತಿಷ್ಠೆ ಹೆಚ್ಚಿಸಿಕೊಳ್ಳುತ್ತಾರೆ. ಅವರಿಗೆ ಕಸವನ್ನು ಸರಿಯಾಗಿ ಹಾಕಿ, ನಗರದ ಸ್ವಚ್ಛತೆ ಕಾಪಾಡಿ ಎಂದು ಅರಿವು ಮೂಡಿಸಲಾಗುತ್ತಿಲ್ಲ ಎಂದು ಸಿಟ್ಟು ಹೊರಹಾಕಿದರು.